ಮಡಿಕೇರಿ, ಡಿ. 10: ತಲಕಾವೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಂಬಂಧ, ಅಷ್ಟಮಂಗಲ ಪ್ರಶ್ನೆಯಲ್ಲಿ ಗೋಚರಿಸಿರುವ ದೋಷಗಳ ಪರಿಹಾರ ಕೈಂಕರ್ಯ ನಿನ್ನೆಯಿಂದ ಆರಂಭದೊಂದಿಗೆ, ಇಂದು ಕೂಡ ಮುಂದುವರಿಯಿತು. ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನ ದಲ್ಲಿ ಇಂದು ಬೆಳಿಗ್ಗೆಯಿಂದ ಗಣಪತಿ ಹೋಮ, ತಿಲಾ ಹೋಮ, ಪವಮಾನ ಹೋಮ, ಮೃತ್ಯುಂಜಯ ಹೋಮಗಳೊಂದಿಗೆ ಸಾಯುಜ್ಯ ಕೈಂಕರ್ಯಗಳು ಜರುಗಿತು.ಕ್ಷೇತ್ರದಲ್ಲಿ ಈ ಸಂಬಂಧ ತಲಕಾವೇರಿ - ಭಾಗಮಂಡಲ ದೇವಾಲಯಗಳ ವ್ಯವಸ್ಥಾಪನಾ ಸಮಿತಿ, ಅರ್ಚಕ ಕುಟುಂಬ, ತಕ್ಕ ಮುಖ್ಯಸ್ಥರು, ಭಕ್ತ ಜನರಿಂದ ಸಾಮೂಹಿಕ ಪೂಜೆ, ಪ್ರಾರ್ಥನೆ ಗಳೊಂದಿಗೆ ಪ್ರಾಯಶ್ಚಿತ ಕೈಂಕರ್ಯ ಗಳನ್ನು ಋತ್ವಿಜರು ನೆರವೇರಿಸಿದರು.ಸಂಜೆಯಿಂದ ಪ್ರಾಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ, ಬಾಲಾಲಯ ಪರಿಗ್ರಹ, ಬಾಲಬಿಂಬ ಜಲಾಧಿವಾಸ ಇತ್ಯಾದಿ ದೇವತಾ ಕಾರ್ಯಗಳು ರಾತ್ರಿಯೂ ಜರುಗಿತು. ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮತ್ತು ಸದಸ್ಯರು, ಕ್ಷೇತ್ರ ಅರ್ಚಕರು ಗಳಾದ ನಾರಾಯಣ ಆಚಾರ್, ಪ್ರಶಾಂತ್ ಆಚಾರ್ ಸಹಿತ ಕುಟುಂಬ ಸದಸ್ಯರು,

(ಮೊದಲ ಪುಟದಿಂದ) ತಕ್ಕಮುಖ್ಯಸ್ಥರು ಗಳಾದ ಬಳ್ಳಡ್ಕ, ಕೋಡಿ, ಮಣವಟ್ಟಿರ, ಪಟ್ಟಮಾಡ ಕುಟುಂಬಸ್ಥರು, ಇತರ ಭಕ್ತ ಜನತೆ ಪೂಜಾಧಿಗಳಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಪಾರುಪತ್ತೆಗಾರ ಪೊನ್ನಣ್ಣ, ತಕ್ಕರುಗಳಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ ಮುಂತಾದವರು ಹಾಜರಿದ್ದರು.

ಇಂದಿನ ಕೈಂಕರ್ಯ : ತಾ. 11ರಂದು (ಇಂದು) ಬೆಳಿಗ್ಗೆ 8 ಗಂಟೆಯಿಂದ ಕ್ಷೇತ್ರದಲ್ಲಿ ಗಣಪತಿ ಹೋಮ, ವಾರ್ಷಿಕ ಸಂಪ್ರೋಕ್ಷಣೆ, ಸಂಹಾರ ತತ್ವಹೋಮ, ಸಂಹಾರ ತತ್ವ ಕಲಶ ಪೂಜೆ, ಅನುಜ್ಞಾಕಲಶಪೂಜೆ, ಅನುಜ್ಞಾ ಕಲಶಾಭಿಷೇಕ, ಸಂಹಾರ ತತ್ವ ಕಲಶಾಭಿಷೇಕ, ಜೀವ ಕಲಶ ಪೂಜೆ, ಜೀವೋಧ್ವಾಸನೆ, ಜೀವಕಲಶ, ಶಯ್ಯಾಗಮನ, ಶಯನ ಸೇವೆಗಳು ನಡೆಯಲಿದೆ.

ಸಂಜೆಯಿಂದ ಕುಂಬೇಶ ಕರ್ಕರಿ ಕಲಶಪೂಜೆ, ಅಧಿವಾಸ ಹೋಮ, ಧಾನ್ಯಾಧಿವಾಸ, ದ್ರವ್ಯಕಲಶಪೂಜೆ, ಕಲಶಾಧಿವಾಸ ನೆರವೇರಲಿದೆ. ತಾ. 12 ರಂದು (ನಾಳೆ) ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಅಪರಾಹ್ನ 12.47 ಗಂಟೆಗೆ ಶ್ರವಣ ನಕ್ಷತ್ರ ಮೀನ ಲಗ್ನದಲ್ಲಿ ಬಾಲಾಲಯ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಮಧ್ಯಾಹ್ನ 2 ಗಂಟೆಗೆ ಮಹಾಪೂಜೆಯೊಂದಿಗೆ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಬಿ.ಎಸ್. ತಮ್ಮಯ್ಯ ತಿಳಿಸಿದ್ದಾರೆ.