ಮಡಿಕೇರಿ, ಡಿ. 10 : ಕೊಡಗು ಕೃಷಿ ಪ್ರಧಾನವಾದ ಜಿಲ್ಲೆ, ಕೃಷಿಭೂಮಿ, ಗದ್ದೆಗಳೆಂದರೆ ಅಂತರ್‍ಜಲದ ಸಂಗ್ರಹಾಗಾರ ಗಳೆಂದೇ ಇಂದಿಗೂ ಪರಿಗಣಿತ ವಾಗಿವೆ. ಒಂದೊಮ್ಮೆ ಹೇರಳವಾದ ಭತ್ತದ ಕೃಷಿಯೊಂದಿಗೆ ಸಂಪದ್ಭರಿತ ವಾಗಿದ್ದ ಈ ನಾಡಿನಲ್ಲಿ ಇದೀಗ ಕೃಷಿ ಭೂಮಿಗಳೆಲ್ಲವೂ ಬರಡು ಭೂಮಿಗಳಾಗಿವೆ. ಕಾರ್ಮಿಕರ ಅಭಾವ, ರಸಗೊಬ್ಬರದ ದರ ಏರಿಕೆಯೊಂದಿಗೆ ಭತ್ತದ ಬೆಳೆಗೆ ಸೂಕ್ತ ಬೆಲೆಯೂ ಇಲ್ಲದೆ ಕಂಗಾಲಾದ ರೈತ ಕೃಷಿ ಚಟುವಟಿಕೆಯನ್ನೇಕೈಬಿಟ್ಟ. ಬಹುತೇಕ ಕೃಷಿ ಭೂಮಿಗಳು ಪಾಳುಬಿದ್ದವು. ಕೆಲವು ಭೂಮಿಗಳನ್ನು ಶುಂಠಿ- ಬಾಳೆ ಆಕ್ರಮಿಸಿಕೊಂಡವು. ಇನ್ನುಳಿದವು ಕಾಫಿ ತೋಟಗಳಾದವು. ಇತ್ತೀಚಿನ ದಿನಗಳಲ್ಲಿ ವಾಣಿಜ್ಯೀ ಕರಣದ ಭರಾಟೆಯಲ್ಲಿ ಭೂಮಿ ಗಳೆಲ್ಲವೂ ಸೈಟ್‍ಗಳಾಗುತ್ತಿವೆ. ಕೃಷಿ ಭೂಮಿ ವಾಣಿಜ್ಯ ಚಟುವಟಿಕೆ ಗಳಿಗೆ ಪರಿವರ್ತನೆ ಮಾಡಬಾರದೆಂಬ ನಿಯಮವಿದ್ದರೂ ಪರಿವರ್ತನೆ ಯಾಗುತ್ತಿದ್ದು, ಪರಿವರ್ತನೆ ಮಾಡದವರು ಇನ್ನಿತರ ಚಟುವಟಿಕೆ ಗಳಿಗೆ ಬಿಟ್ಟು ಕೊಡುತ್ತಿದ್ದಾರೆ. ಈ ಪೈಕಿ ಇಟ್ಟಿಗೆ ಗೂಡಿನ ಉದ್ಯಮ ಕಾಂಕ್ರಿಟ್ ಕಟ್ಟಡಗಳೂ ಸೇರಿವೆ. ಕೃಷಿ ಭೂಮಿಯನ್ನು ಕೊರೆದು ಮಣ್ಣು ತೆಗೆಯುತ್ತಿರುವದರಿಂದ ಅಂತರ್ಜಲದ ಮಟ್ಟ ಕುಸಿಯುತ್ತಿದೆ.

ಈಗಾಗಲೇ ಈ ಬಾರಿಯ ಮಹಾ ಮಳೆಯಿಂದಾಗಿ ಜಿಲ್ಲೆ ನೀರಿ ನಿಂದಾವೃತವಾಗಿ ನಲುಗಿ ಹೋಗಿದೆ. ಆದರೆ ನಂತರದಲ್ಲಿ ಕಾಣಬರುತ್ತಿರುವ ಸುಡುಬಿಸಿಲಿನ ತಾಪಕ್ಕೆ ಮತ್ತೆ ಸಂಪೂರ್ಣ ಒಣಗುತ್ತಿದೆ. ಈಗಲೇ ಭೂಮಿ ಕಾದ ಕಬ್ಬಿಣದಂತಾಗಿದೆ. ಇದರೊಂದಿಗೆ ಜಲಮೂಲವೂ ಬರಿದಾಗುತ್ತಿರುವ ಆತಂಕ ಮನೆ ಮಾಡಿದೆ. ಈ ನಡುವೆ ಕೆಲವು ಕಡೆಗಳಲ್ಲಿ ಅಂತರ್‍ಜಲದ ಹೂರಣ ವಾಗಿರುವ ಕೃಷಿಭೂಮಿಗಳನ್ನು ಇಟ್ಟಿಗೆ ಕುಯ್ಯಲು ಬಿಟ್ಟಿದ್ದು, ಇದರಿಂದಾಗಿ ಗದ್ದೆಗಳು ಬೃಹತ್ ಹೊಂಡಗಳಾಗಿ ನೀರಿನ ಮಟ್ಟ ಪಾತಾಳಕ್ಕಿಳಿಯುತ್ತಿದೆ. ಪ್ರಸ್ತುತ ಮೂರ್ನಾಡು ಆಸುಪಾಸಿನಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಕೃಷಿ ಮಾಡಲಾಗದೆ ಹಾಗೇ ಬಿಟ್ಟಿರುವ ಗದ್ದೆಗಳನ್ನು ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸುವ ಇಟ್ಟಿಗೆ ಉದ್ಯಮಿಗಳು ಕಡಿಮೆ ದರಕ್ಕೆ ಗದ್ದೆಗಳನ್ನು ಭೋಗ್ಯಕ್ಕೆ ಪಡೆದುಕೊಂಡು ಅಲ್ಲಿ ಇಟ್ಟಿಗೆ ನಿರ್ಮಿ ಸುತ್ತಿದ್ದಾರೆ. ಇಟ್ಟಿಗೆಗೆ ಮಣ್ಣಿಗೋಸ್ಕರ ಗದ್ದೆಗಳು ಹೊಂಡಗಳಾಗುತ್ತಿದ್ದು, ಇದರಿಂದಾಗಿ ಗದ್ದೆಯಲ್ಲಿರುವ ನೀರಿನಾಂಶ ಮಾತ್ರವಲ್ಲದೆ ಆಸು ಪಾಸಿನ ಕೆರೆ, ಬಾವಿ, ತೋಡುಗಳಲ್ಲಿನ ನೀರಿನ ಮಟ್ಟವೂ ಗಣನೀಯವಾಗಿ ಕುಸಿಯುತ್ತಿದೆ. ಸುತ್ತಮುತ್ತಲಿನ ಜನತೆಯಲ್ಲಿ ಈ ಬೆಳವಣಿಗೆ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಕಾಂಕ್ರಿಟ್ ಕಟ್ಟಡಗಳು

ಇಟ್ಟಿಗೆ ಗೂಡುಗಳಿಗಿಂತ ಮಾರಕವಾಗಿರುವದು ಕಾಂಕ್ರಿಟ್ ಕಟ್ಟಡಗಳು ಕೃಷಿಭೂಮಿಯನ್ನು ಯಾವದೇ ಕಾರಣಕ್ಕೂ ಪರಿವರ್ತನೆ ಮಾಡಬಾರದೆಂಬ ಕಠಿಣ ಕಾನೂನು ಜಾರಿಯಲ್ಲಿದೆ. ಆದರೆ ಅದು ಕಡತಗಳಿಗೆ, ಬಡವರಿಗೆ ಮಾತ್ರ ಸೀಮಿತ. ಹಿರಿಯ ಅಧಿಕಾರಿಗಳಿಂದ ಹಿಡಿದು ಕಿರಿಯ ಗುಮಾಸ್ತನವೆರೆಗೂ ಈ ‘ಭೂಮಾಫಿಯಾ’ದ ಫಲಾನು ಭವಿಗಳು ಇಲ್ಲಿ ಕೃಷಿ ಭೂಮಿಗಳ ಪರಿವರ್ತನೆಗೆ ಮೊದಲ ಆದ್ಯತೆ, ನಗರ- ಪಟ್ಟಣಕ್ಕೆ ಸನಿಹದಲ್ಲಿರುವ ಗದ್ದೆಗಳೆಲ್ಲವೂ ಬಹುತೇಕ ಬಡಾವಣೆ ಗಳಾಗಿವೆ. ಮಡಿಕೇರಿ ನಗರದೊಳ ಗಿದ್ದ ಗದ್ದೆ, ನೀರಾವರಿ ಭೂಮಿಯ ಮೇಲೆಲ್ಲ ಕಾಂಕ್ರಿಟ್ ಕಟ್ಟಡಗಳು ತಲೆ ಎತ್ತಿವೆ.

(ಮೊದಲ ಪುಟದಿಂದ) ವೀರಾಜಪೇಟೆ ಗೋಣಿಕೊಪ್ಪ ರಸ್ತೆಯ ಬಿಟ್ಟಂಗಾಲದಲ್ಲಿ ಒಂದೊಮ್ಮೆ ರಸ್ತೆಯ ಇಕ್ಕೆಲಗಳಲ್ಲಿ ಹಸುರ ಸಿರಿಯಿಂದ ಕಂಗೊಳಿಸುತ್ತಿದ್ದ ಗದ್ದೆಗಳೆಲ್ಲವೂ ಇಂದು ಬರಡಾಗಿ ಕಾಣುತ್ತಿವೆ. ಅಲ್ಲದೆ, ಈ ಗದ್ದೆಗಳೆಲ್ಲವೂ ಈಗಾಗಲೇ ಮಾರಾಟವಾಗಿ ಪರಿವರ್ತನೆ ಕೂಡ ಆಗಿದ್ದು, ಅಲ್ಲಲ್ಲಿ ಕಟ್ಟಡಗಳು ತಲೆ ಎತ್ತಲಾರಂಭಿಸಿವೆ. ಇನ್ನೊಂದೆರಡು ವರ್ಷಗಳಲ್ಲಿ ಹಸುರಿನೊಂದಿಗೆ ತಣ್ಣನೆ ಶುದ್ಧ ಗಾಳಿ ಬೀಸುತ್ತಿದ್ದ ರಸ್ತೆಯಲ್ಲಿ ಕಾಂಕ್ರಿಟ್ ವಾಸನೆ ಸ್ವಾಗತ ಕೋರಲಿದೆ.

ಹೋರಾಟ ವ್ಯರ್ಥ

ಇತ್ತ ಪಾಳುಬಿಟ್ಟ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸದಿದ್ದರೆ ಅದನ್ನು ಸರಕಾರ ವಶಪಡಿಸಿಕೊಳ್ಳುವದಾಗಿ ಹೇಳುತ್ತಿದೆ. ಕೊಡಗಿನ ಕೃಷಿ ಭೂಮಿ ಕೈಬಿಟ್ಟುಹೋಗಬಾರದು. ಮತ್ತೊಮ್ಮೆ ಇಲ್ಲಿ ಕೃಷಿ ವೈಭವ ಮರುಕಳಿಸ ಬೇಕೆಂಬ ಹಂಬಲದೊಂದಿಗೆ ಯುಕೊ ಸಂಘಟನೆ ‘ನಾಡಮಣ್ಣೇ ನಾಡಕೂಳು’ ಎಂಬ ಧ್ಯೇಯ ವಾಕ್ಯದೊಂದಿಗೆ ಪಾಳುಬಿದ್ದ ಕೃಷಿಭೂಮಿಗಳಲ್ಲಿ ಕೃಷಿ ಚಟುವಟಿಕೆ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಂಡು ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಆದರೂ ಕೂಡ ಜನರು ಎಚ್ಚೆತ್ತುಕೊಂಡಂತಿಲ್ಲ. ಕೊಡಗಿನ ನೆಲ, ಜಲ, ಸಂಪನ್ಮೂಲ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಸಂಘಟನೆಗಳು ನಡೆಸುತ್ತಿರುವ ಹೋರಾಟಗಳೆಲ್ಲವೂ ವ್ಯರ್ಥವಾಗುತ್ತಿವೆ.

ಸರಕಾರವೇ ಕಾರಣ

ಕೊಡಗು ಬರಡಾಗುತ್ತಿರುವದಕ್ಕೆ, ಕೃಷಿಭೂಮಿ ಕಮರುತ್ತಿರುವದಕ್ಕೆ ಸರ್ಕಾರಗಳು, ಜನಪ್ರತಿನಿಧಿಗಳು ಕಾರಣ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸಿದಲ್ಲಿ ಯಾರೂ ಕೂಡ ಕೃಷಿಯನ್ನು ಕೈಬಿಡುತ್ತಿರಲಿಲ್ಲ. ಪಟ್ಟ ಶ್ರಮಕ್ಕೆ ಬೆಲೆ ಇಲ್ಲವಾದರೆ ಯಾರು ತಾನೇ ಶ್ರಮಪಡಲು ಇಚ್ಚಿಸಿಯಾರು? ಗದ್ದೆಗಳು ಮಾಯವಾದಂತೆ ಮುಂದೊಂದು ದಿನ ಇಲ್ಲಿನ ಪ್ರಮುಖ ಬೆಳೆ ಕಾಫಿಗೂ ಬೆಲೆ ಸಿಗದಿದ್ದಲ್ಲಿ ತೋಟಗಳು ಮಾಯವಾಗಿ ತೋಟ- ಬೆಟ್ಟ- ಗುಡ್ಡಗಳೆಲ್ಲವೂ ಕಾಂಕ್ರಿಟ್‍ಮಯವಾಗಿ ಉಸಿರಾಟ ನಿಂತು ಹೋಗಬಹುದೇನೋ...? ಎಚ್ಚರಿಕೆಯ ಗಂಟೆ ನಮ್ಮ ನೆತ್ತಿಯ ಮೇಲಿದ್ದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮೂರ್ಖರಾಗುವದು ನಾವುಗಳೇ...!

-ಕುಡೆಕಲ್ ಸಂತೋಷ್.