ಮಡಿಕೇರಿ, ಡಿ. 10: ಕುಶಾಲನಗರದ ಹರ್ಷ ಚಿಕಿತ್ಸಾಲಯದ ವೈದ್ಯ ಡಾ. ದಿಲೀಪ್ ಕುಮಾರ್ ಕೊಲೆ ಪ್ರಕರಣವು ಬೈಲುಕುಪ್ಪೆ ಠಾಣಾ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಯಾವ ಉದ್ದೇಶದಿಂದ ಹಂತಕರು ಕೊಲೆಗೈದಿದ್ದಾರೆ ಎನ್ನುವ ಕುರಿತು ಪೊಲೀಸರು ರಹಸ್ಯ ಮಾಹಿತಿ ಕಲೆ ಹಾಕತೊಡಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಯಾವ ಸುಳಿವು ಲಭಿಸಿಲ್ಲವೆಂದು ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ ದುಷ್ಕøತ್ಯಕ್ಕೆ ಮುನ್ನ ರೋಗಿಗಳ ನೆಪದಲ್ಲಿ ಡಾ. ದಿಲೀಪ್ ಕುಮಾರ್ ಅವರ ಬಳಿ ತೆರಳಿರುವ ಹಂತಕರು ಈ ಕೃತ್ಯ ಎಸಗಿರುವ ಬಲವಾದ ಸಂಶಯ ಹುಟ್ಟಿಕೊಂಡಿದೆ. ವೈದ್ಯರು ವ್ಯಕ್ತಿಯೊಬ್ಬರ ಹೆಸರು ಬರೆದಿರುವ ಚೀಟಿ ಹಾಗೂ ಮಾತ್ರೆಗಳನ್ನು ರೋಗಿಗೆ ತೆಗೆದಿರಿಸಿರುವ ಸುಳಿವು ಗೋಚರಿಸಿದ್ದಾಗಿ ಹೇಳಲಾಗುತ್ತಿದೆ.
ಮೃತರ ಸಹೋದರ ಪರಮೇಶ್ವರ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸುತ್ತಾ, ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಿದ್ದ ವೈದ್ಯರು ಎಲ್ಲರೊಂದಿಗೆ ಸಂತೋಷದಿಂದ ಕಳೆದಿದ್ದಾಗಿ ನೆನಪಿಸಿಕೊಂಡಿದ್ದಾರೆ. ಅಲ್ಲದೆ ಮೃತರು ಅವಿವಾಹಿತ ರಾಗಿದ್ದು, ನಿಖರವಾಗಿ ಯಾರೂ ಶತ್ರುಗಳು ಇರಲಿಲ್ಲವೆಂದು, ಯಾವ ಕಾರಣದಿಂದ ಕೊಲೆ ನಡೆದಿದೆ ಎಂದು ಪೊಲೀಸರ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶ್ರದ್ಧಾಂಜಲಿ
ಕುಶಾಲನಗರ: ಕುಶಾಲನಗರದ ಖಾಸಗಿ ವೈದ್ಯರುಗಳ ಸಂಘದ ಆಶ್ರಯದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಡಾ.ದಿಲೀಪ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸ್ಥಳೀಯ ರೋಟರಿ ಸಭಾಂಗಣ ದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಟ್ಟಣದಲ್ಲಿ ಕಾರ್ಯನಿರ್ವ ಹಿಸುತ್ತಿರುವ ವೈದ್ಯರುಗಳು ಪಾಲ್ಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ಡಾ.ಹರಿ ಎ.ಶೆಟ್ಟಿ, ವೈದ್ಯರಿಗೆ ಅಭದ್ರತೆ ಎದುರಾಗಿದೆ. ಸಮಾಜದ ಬಹು ಮುಖ್ಯ ಅಂಗವಾಗಿರುವ ವೈದ್ಯರನ್ನು ಹತ್ಯೆಗೈದಿರುವದು ಅತ್ಯಂತ ಖಂಡನೀಯ ವಿಚಾರ. ಕೂಡಲೇ ಹತ್ಯೆ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ ಸಂಘದ ಮೂಲಕ ಮನವಿ ಸಲ್ಲಿಸಲಾಗುವದು ಎಂದರು.
ಸಭೆಯಲ್ಲಿ ಮೌನಾಚರಣೆ ಮೂಲಕ ಡಾ.ದಿಲೀಪ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಧ್ಯಾಹ್ನ ಎರಡು ಗಂಟೆಗಳ ಕಾಲ ಕ್ಲಿನಿಕ್‍ಗಳನ್ನು ಮುಚ್ಚಿ ಸಂತಾಪ ಸೂಚಿಸಲಾಯಿತು.
ಈ ಸಂದರ್ಭ ವೈದ್ಯರಾದ ಡಾ.ದೇವದಾಸ್ ಭಟ್, ಡಾ.ಗೋವಿಂದ್‍ಭಟ್, ಡಾ. ಧರಣೇಂದ್ರ, ಡಾ.ವಿನಯ್ ಕುಮಾರ್, ಡಾ.ದೇವರಾಜ್, ಡಾ.ಅನೂಜ್ ಪೊನ್ನಪ್ಪ, ಡಾ.ಸಿದ್ದು ಪ್ರಕಾಶ್, ಡಾ.ಅಮಿತ, ಡಾ.ಪ್ರವೀಣ್, ಡಾ.ಗಣಪತಿ, ಡಾ.ದೇವಯ್ಯ, ಡಾ.ರಾಮಭಟ್ ಇದ್ದರು.