ಮಡಿಕೇರಿ, ಡಿ. 10: ನಗರದ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ತಾ. 7 ರಂದು ಕೂಟುಹೊಳೆ ಹಿನ್ನೀರಿನಲ್ಲಿ ಮುಳುಗಡೆಗೊಂಡು ಮೃತರಾಗಿರುವ ಸಾವಿನ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಉಡೋತ್‍ಮೊಟ್ಟೆ ನಿವಾಸಿ ಕೊಕ್ಕಲೆ ಎಸ್. ಮುತ್ತಪ್ಪ ಎಂಬವರ ಪುತ್ರ ಕೆ.ಎಂ. ರಕ್ಷಿತ್ ಹಾಗೂ ಮದೆ ಗ್ರಾಮದ ದೇಶಕೋಡಿ ಪೊನ್ನಪ್ಪ ಎಂಬವರ ಮಗ ಡಿ.ಪಿ. ಯಶವಂತ್ ಸಾವು ಹೇಗೆ ಸಂಭವಿಸಿದೆ ಎಂದು ಸಂಶಯ ಮೇರೆಗೆ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಹಾಗೂ ಸಿಬ್ಬಂದಿ ಕೆಲವರ ವಿಚಾರಣೆ ನಡೆಸಿರುವದಾಗಿ ತಿಳಿದು ಬಂದಿದೆ.ಮೃತ ವಿದ್ಯಾರ್ಥಿಗಳಿಗೆ ಈಜು ಬಾರದಿದ್ದರೂ ಸುಮಾರು 10 ಅಡಿಗಳಷ್ಟು ಆಳವಿರುವಲ್ಲಿ ಸ್ನಾನಕ್ಕೆ ತಾವಾಗಿಯೇ ಇಳಿದಿದ್ದಾರೆಯೇ? ಎಂಬ ಶಂಕೆ ವ್ಯಕ್ತಗೊಂಡಿದೆ. ಅಲ್ಲದೆ ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರ ಪ್ರಕಾರ ಘಟನೆ ಸ್ಥಳದಲ್ಲಿ ಇತರ ಮೂರ್ನಾಲ್ಕು ಮಂದಿ ಕಾಣಿಸಿಕೊಂಡಿದ್ದು, ಬೊಬ್ಬೆ ಕೇಳಿದ್ದಾಗಿ ತಿಳಿಸಿದ್ದಾರೆ. ಈ ಎಲ್ಲ ಅಂಶವನ್ನು ಗಣನೆಗೆ ತೆಗೆದುಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದು, ನೈಜಾಂಶ ಇನ್ನಷ್ಟೇ ಹೊರ ಬೀಳಬೇಕಿದೆ.