ಮಡಿಕೇರಿ, ಡಿ. 11: ಸೋಮವಾರಪೇಟೆ ತಾಲೂಕಿನ ಕಾನ್‍ಬೈಲ್ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಮಾಲಾದೇವಿ ಅವರಿಗೆ ರಾಜ್ಯಮಟ್ಟದ ‘ಹನಿಹನಿ ಇಬ್ಬನಿ’ ಯುವ ಕವಯತ್ರಿ ಪ್ರಶಸ್ತಿ ಲಭಿಸಿದೆ.
ತುಮಕೂರು ಹನಿಹನಿ ಇಬ್ಬನಿ ಸಾಹಿತ್ಯ ಬಳಗ ಅಮಾನಿಕೆರೆಯ ಕನ್ನಡ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹನಿಹನಿ ಇಬ್ಬನಿ ಸಾಹಿತ್ಯ ಸಂಭ್ರಮ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಪ್ರಶಸ್ತಿ ಪ್ರದಾನ ಮಾಡಿದರು. ಸಾಹಿತ್ಯ ಬಳಗದ ರಾಜ್ಯ ಘಟಕದ ಅಧ್ಯಕ್ಷ ಖುಷಿಕೃಷ್ಣ, ಗೀತ ರಚನಕಾರ, ಚಲನಚಿತ್ರ ನಿರ್ದೇಶಕರು ಹೃದಯ ಶಿವ, ಪತ್ರಕರ್ತ ನಟೇಶ್ ಬಾಬು, ಬೆಂಗಳೂರು ನವಕರ್ನಾಟಕ ಪಬ್ಲಿಕೇಷನ್‍ನ ಅಶೋಕ್‍ಕುಮಾರ್, ಸಾಹಿತ್ಯ ಬಳಗದ ಪ್ರಧಾನ ಕಾರ್ಯದರ್ಶಿ ಜೀವರಾಜ್ ಛತ್ರದ್ ಉಪಸ್ಥಿತರಿದ್ದರು.