ವರದಿ: ರಜಿತಾ ಕಾರ್ಯಪ್ಪ
ವೀರಾಜಪೇಟೆ, ಡಿ.10 : ನನ್ನ ಮನೆ ಬಿರುಗಾಳಿ ಮಳೆಗೆ ಬಿರುಕುಬಿಟ್ಟು ನಿಂತಿತ್ತು, ಅಧಿಕಾರಿಗಳು ಬಂದರು ಸಮೀಕ್ಷೆ ಮಾಡಿ ಹೋದರು ಬಳಿಕ 24 ಸಾವಿರ ಪರಿಹಾರ ನೀಡಿದರು. ಆದರೆ ಈ ನಡುವೆ ಮನೆ ಸಂಪೂರ್ಣ ಕುಸಿದು ಹೋಯಿತು. ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ, ನಿಮಗೆ 24 ಸಾವಿರ ಸಿಕ್ಕಿದೆ ಅದರಲ್ಲಿ ಮನೆ ಕಟ್ಟಿಕೊಳ್ಳಿ, ಮನೆಯನ್ನು ಪರಿಹಾರಕ್ಕಾಗಿ ಬೀಳಿಸಿದ್ದಿರ ಎಂಬ ಉಡಾಫೆ ಉತ್ತರ ನೀಡಿದರು. ಇಂದು ವಸತಿ ಹೀನಳಾಗಿ ಬಾಡಿಗೆ ಮನೆಯಲ್ಲಿದ್ದೇನೆ. ಅಧಿಕಾರಿಗಳು ಅವರ ಮನೆಯಿಂದ ಅಥವಾ ಜೇಬಿನಿಂದ ಹಣ ನೀಡಬೇಕೆ, ಕೋಟಿ ಕೋಟಿ ಹಣ ಏನಾಯಿತು, ಇಂದು ನಾವು ನೆಲೆ ಕಳೆದುಕೊಂಡು ಸಂಕಷ್ಟದಲ್ಲಿ ಬದಕು ನಡೆಸುವಂತಾಗಿದೆ ಎಂದು ಗರಂದೂರು ಗ್ರಾಮದ ಶಾಂತಿ ರಾಜು ಪತ್ರಿಕೆ ಮುಂದೆ ನೋವು ತೋಡಿಕೊಂಡರು.
ಅವರು ಇಂದು ವಿ.ಪೇ ಅಖಿಲ ಕೊಡವ ಸಮಾಜದಲ್ಲಿ ಸಹಾಯಧನ ವಿತರಣೆ ಸಮಾರಂಭದ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ಕಣ್ಣೀರು ಹಾಕಿದರು.
ಇಗ್ಗೋಡ್ಲುವಿನ ಕಾವೇರಮ್ಮ ಮಾತನಾಡಿ, ನನ್ನ ಪಕ್ಕದ ಮನೆಗಳು ನೆಲಸಮವಾಗಿ ಕೊಚ್ಚಿಹೋಗಿದೆ. ನನ್ನ ಮನೆ ಬಿರುಕುಬಿಟ್ಟು ನಿಂತಿದೆ. ಮನೆ ಸುರಕ್ಷಾ ಯೋಗ್ಯವಾಗಿಲ್ಲ ಸದ್ಯಕ್ಕೆ ಅಲ್ಲಿದ್ದೇನೆ ಯಾವ ಅಧಿಕಾರಿ ಬಂದಿಲ್ಲ, ನಮ್ಮಗೆ ಪರಿಹಾರವು ನೀಡಿಲ್ಲ. ನಾವು ದೂರು ನೀಡಿದರು ಯಾರು ಇಲ್ಲಿಯವರಗೆ ಸ್ಪಂದಿಸಿಲ್ಲ. ಮನೆ ಕುಸಿಯುವ ಭೀತಿಯಲ್ಲಿ ದಿನ ದೂಡುತ್ತಿದ್ದೇವೆ ಎಂದರು.
ಗರ್ವಾಲೆ ಗ್ರ್ರಾಮದ ಬಟ್ಟಿಯಂಡ ರಾಣಿಯವರು ಮಾತನಾಡಿ, ಆರಂಭದಲ್ಲಿ ಗ್ರಾ ಪಂ 3,800 ರೂ ನೀಡಿದೆ. ಅದು ಬಿಟ್ಟರೆ ಚಿಕ್ಕಾಸು ಪರಿಹಾರ ಬಂದಿಲ್ಲ, ಅಧಿಕಾರಿಗಳು ಅತ್ತ ಸುಳಿಯುತ್ತಿಲ್ಲ. ಜಿಲ್ಲಾಡಳಿತಕ್ಕೆ ನಮ್ಮನ್ನು ಕಾಣುತ್ತಿಲ್ಲ. ಬರೆ ಪತ್ರಿಕೆ , ಟಿವಿಯಲ್ಲಿ ಕೋಟಿ ಮಾತು ಕೇಳುತ್ತಿದ್ದೇವೆ ಅಷ್ಟೆ. ಇದೇ ಗ್ರಾಮದ ಬಾಚಮಂಡ ಭಾಗ್ಯವತಿ ಮಾತನಾಡಿ, ಮನೆ ಇದೆ , ಆದರೆ ಎರಡು ಎಕರೆ ತೋಟ ಕೊಚ್ಚಿಹೋಗಿದೆ, ಬದುಕಿಗೆ ಆಶ್ರಯವಿಲ್ಲ, ಪರಿಹಾರ ಕೋರಿದರೆ ಚಿಕ್ಕಾಸು ಪರಿಹಾರ ಬಂದಿಲ್ಲ, ಮಳೆ ಹಾನಿ ವೇಳೆ ಗ್ರಾಮ ಪಂಚಾಯಿತಿ 3,800 ರೂ ಮಾತ್ರ ನೀಡಿದೆ. ಎಂದರು.
ಒಟ್ಟಾರೆ ಇವರ ಅಭಿಪ್ರಾಯ ದಂತೆ ಅಧಿಕಾರಿಗಳು ಸಮರ್ಪಕ ವಾಗಿ ಸಮೀಕ್ಷೆ ನಡೆಸಿಲ್ಲ, ಒಂದು ದಾರಿಯಲ್ಲಿ ಹಾಗೆ ಬಂದು ಹೀಗೆ ಹೋಗಿದ್ದಾರೆ. ಎಲ್ಲಾ ಸಂಪರ್ಕ ಕಡಿದುಕೊಂಡು ಹಾನಿ ಪ್ರದೇಶದ ಒಳ ಭಾಗದಲ್ಲಿ ಇರುವ ಜನರ ನೋವು ಆಲಿಸಿಲ್ಲ. ದಾನಿಗಳು ಸಹ ಒಳ ಭಾಗವನ್ನು ತಲಪದೆ ಎದುರಿಗೆ ಸಿಕ್ಕವರಿಗೆ ಪರಿಹಾರ, ವಸ್ತು ನೀಡಿ ಹೋಗುತ್ತಾರೆ. ಮತ್ತೊಂದು ಸಮೀಕ್ಷೆ ಜಿಲ್ಲಾಡಳಿತ ಈಗ ಮಾಡಬೇಕು, ಪರಿಹಾರಕ್ಕೆ ಬಿಟ್ಟು ಹೋದವರನ್ನು ಸೇರಿಸಬೇಕು. ಸಮಗ್ರ ಪರಿಹಾರ ವಿತರಣೆ ಆಗಬೇಕು, ಸಂಘ ಸಂಸ್ಥೆಗಳು ಸಹ ಪರಿಹಾರ ವಂಚಿತರಾದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಪರಿಹಾರ ಎಲ್ಲವೂ ಉಳ್ಳವರ ಪಾಲಾಗುತ್ತದೆ ಎಂಬವದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.