ಸೋಮವಾರಪೇಟೆ,ಡಿ.10 : ತಲ್ತರೆಶೆಟ್ಟಳ್ಳಿ ಗ್ರಾಮದ ನಕಾಶೆಯಲ್ಲಿರುವ ದಾರಿಗೆ ಬೇಲಿ ಹಾಕಿರುವದನ್ನು ತೆರವುಗೊಳಿಸಲು ತಹಶೀಲ್ದಾರ್ ಕ್ರಮಕೈಗೊಳ್ಳಬೇಕೆಂದು ತಲ್ತರೆಶೆಟ್ಟಳ್ಳಿ ಗ್ರಾಮದ ಕೆ.ಪಿ. ಬಸಪ್ಪ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.
ತಮಗೆ ಸೇರಿದ ಜಮ್ಮಾ ಜಾಗದಲ್ಲಿ ಕಾಲು ದಾರಿಗೆ ಜಾಗ ಬಿಟ್ಟುಕೊಟ್ಟಿದ್ದರೂ ಸಹ ತಮ್ಮ ಮೇಲೆ ತಹಶೀಲ್ದಾರ್ಗೆ ಗ್ರಾಮದ ಗುರಪ್ಪ, ಇಂದಿರಾ, ಸೋಮಯ್ಯ, ಕಾಳಪ್ಪ ಅವರುಗಳು ಸುಳ್ಳು ದೂರು ನೀಡಿದ್ದಾರೆ. ತಕ್ಷಣ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಕಾಲು ದಾರಿಗೆ ಬೇಲಿ ಹಾಕಲಾಗಿದೆಯೇ? ಇಲ್ಲವೇ ಎಂಬದನ್ನು ಪರಾಮರ್ಶಿಸಬೇಕು ಎಂದು ಬಸಪ್ಪ ಒತ್ತಾಯಿಸಿದ್ದಾರೆ.
ದಾರಿ ವಿಚಾರಕ್ಕೆ ದೂರು ನೀಡಿರುವವರೇ ಗ್ರಾಮದ ನಕಾಶೆಯಲ್ಲಿರುವ ದಾರಿಯನ್ನು ಬಳಸಿಕೊಂಡು ಗದ್ದೆ ಮತ್ತು ತೋಟ ಮಾಡಿದ್ದಾರೆ. ತಕ್ಷಣ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ, ನಕಾಶೆಯಲ್ಲಿರುವ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಡಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಸತ್ಯವನ್ನು ಮರೆಮಾಚಿ ತಹಶೀಲ್ದಾರ್ ಮತ್ತು ಪೊಲೀಸ್ ಇಲಾಖೆಗೆ ಕೆಲವರು ತನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಇದು ಮುಂದುವರೆದರೆ ತಾನೂ ಸಹ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಬಸಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.