ಮಡಿಕೇರಿ, ಡಿ. 7: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದ ಹಿನ್ನೆಲೆ ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಸತಿಯುಕ್ತ ಶಾಲೆ ಹಾಗೂ ಶಕ್ತಿ ಪದವಿಪೂರ್ವ ಕಾಲೆÉೀಜಿನ ವತಿಯಿಂದ ಕೊಡಗನ್ನು ಒಳಗೊಂಡಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಿಗೆ ಅನ್ವಯವಾಗುವಂತೆ ತಾ. 19 ಮತ್ತು 20 ರಂದು ‘ಶಕ್ತಿ ಫೆಸ್ಟ್-2018’ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ. ‘ಶಕ್ತಿ ಫೆಸ್ಟ್-2018’ ಪ್ರಚಾರದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್‍ನ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಫೆಸ್ಟ್‍ನಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸ್ಪರ್ಧೆಗಳು 1ನೇ ತರಗತಿ ಮತ್ತು 2 ನೇ ತರಗತಿಯ ವಿದ್ಯಾರ್ಥಿಗಳ ಒಂದನೇ ವಿಭಾಗ, 3ನೇ-4ನೇ ತರಗತಿಯ 2ನೇ ವಿಭಾಗ, 5, 6, 7ನೇ ತರಗತಿ ಒಳಗೊಂಡ 3ನೇ ವಿಭಾಗ ಹಾಗೂ 8, 9, 10ನೇ ತರಗತಿ ಒಳಗೊಂಡ 4ನೇ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ಸ್ಪಧೆಗಳಲ್ಲಿ ನಾಲ್ಕು ಜಿಲ್ಲೆಗಳ ಯಾವದೇ ಮಾಧ್ಯಮದ ವಿದ್ಯಾರ್ಥಿಗಳು ಭಾಗವಹಿಸಬಹುದು. ಪ್ರತೀ ವಿಭಾಗದಲ್ಲಿ ಒಟ್ಟು 10 ಸ್ಪರ್ಧೆಗಳಿದ್ದು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನಗದು ಅಥವಾ ಪುಸ್ತಕ ರೂಪದಲ್ಲಿ ನೀಡಲಾಗುವದು. ಎಲ್ಲಾ ಸ್ಪರ್ಧೆಗಳಲ್ಲಿ ಒಟ್ಟಾಗಿ 1,25 ಲಕ್ಷದಷ್ಟು ಮೊತ್ತದ ಪುಸ್ತಕ ಹಾಗೂ ನಗದನ್ನು ಸ್ಪರ್ಧೆಯ ದಿನಗಳಂದೇ ಸಮಾರೋಪ ಸಮಾರಂಭದಲ್ಲಿ ವಿತರಿಸಲಾಗುವದು ಎಂದು ತಿಳಿಸಿದರು.
ಫೆಸ್ಟ್‍ನಲ್ಲಿ ಇಂಗ್ಲೀಷ್, ಕನ್ನಡ, ಹಿಂದಿ ಭಾಷೆಗಳ ಹಾಡುಗಳ ಗಾಯನ, ನಟನೆ, ಕತೆ ಹೇಳುವದು, ಚಿತ್ರಕಲೆ, ಕನ್ನಡ ಭಾವಗಾನ, ಕಸದಿಂದ ರಸ, ಕೊಲಾಝ್, ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ, ಛದ್ಮವೇಷ, ಸ್ಪೆಲ್ ಬೀ, ರಸಪ್ರಶ್ನೆ, ಕನ್ನಡ, ಹಿಂದಿ, ಇಂಗ್ಲೀಷ್‍ನಲ್ಲಿ ಭಾಷಣ, ದಾಸರ ಪದಗಳು, ಪೋಸ್ಟರ್ ಮೇಕಿಂಗ್, ಬೆಂಕಿಯಿಲ್ಲದೆ ಅಡುಗೆ, ಸೈನ್ಸ್ ಪ್ರಾಜೆಕ್ಟ್ ಮೊದಲಾದ ಸ್ಪರ್ಧೆಗಳು ನಡೆಯಲಿದೆ. ಒಂದು ಸಂಸ್ಥೆಯಿಂದ ಓರ್ವ ವಿದ್ಯಾರ್ಥಿ ಇಲ್ಲವೇ ಒಂದು ತಂಡ (ಸಮೂಹವಾಗಿದ್ದಲ್ಲಿ) ಒಂದು ವಿಷಯದಲ್ಲಿ ಮಾತ್ರ ಭಾಗವಹಿಸಬಹುದು ಎಂದು ತಿಳಿಸಿದರು.
ಸಂತ್ರಸ್ತ ಮಕ್ಕಳ ಶಿಕ್ಷಣಕ್ಕೆ ನೆರವು: ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತ ಪ್ರತಿಭಾನ್ವಿತ 5 ರಿಂದ 10 ಮಕ್ಕಳಿಗೆ ಶಿಕ್ಷಣ ಒದಗಿಸಲು ಸಂಸ್ಥೆ ನಿರ್ಧರಿಸಿದೆಯೆಂದು ಇದೇ ಸಂದರ್ಭ ಅವರು ತಿಳಿಸಿದರು. ಗೋಷ್ಠಿಯಲ್ಲಿ ಟ್ರಸ್ಟ್‍ನ ನಿರ್ದೇಶಕಿ ಪ್ರತಿಭಾ ಕೆ. ಹಾಗೂ ತರಬೇತುದಾರ ವಿಶಾಲ್ ಉಪಸ್ಥಿತರಿದ್ದರು.