ಮಡಿಕೇರಿ, ಡಿ. 7: ಸಮೀಪದ ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಅಂತರರಾಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಅಧ್ಯಯನ ತಂಡ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಿತು.

ಅಂತರರಾಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಗ್ರಾಮೀಣಾಭಿವೃದ್ಧಿ ಕಾರ್ಯಗಳ ಬಗ್ಗೆ ಅಧ್ಯಯನ ನಡೆಸಲು ಆಫ್ರಿಕಾ, ಶ್ರೀಲಂಕಾ, ನೈಜೇರಿಯ, ಕೀನ್ಯ, ಉಗಾಂಡ, ಇರಾಕ್, ಸೌತ್ ಆಫ್ರಿಕ, ಬಾಂಗ್ಲಾದೇಶ, ಉಜ್ಜೆಕಿಸ್ತಾನ್, ಬೋಟ್ಸ್ವಾನ್, ಈಜಿಪ್ಟ್, ಮೌರಿಶ್ಯಶ್, ಸೂಡಾನ್, ಅಲ್ಜೀರಿಯ, ತಾಜಾಕಿಸ್ತಾನ್, ನಮೀಬಿಯ ರಾಷ್ಟ್ರಗಳ 24 ಮಂದಿ ಹಿರಿಯ ಅಧಿಕಾರಿಗಳು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಡೆವಲೆಪ್‍ಮೆಂಟ್ ಹೈದರಾಬಾದ್ ಪ್ರಾಯೋಜಿತ ತಂಡದಲ್ಲಿ ಭಾಗವಹಿಸಿದ್ದರು.

ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಆಡಳಿತ ಮಂಡಳಿ ಸದಸ್ಯರುಗಳು, ಪಿಡಿಓ ಹಾಗೂ ಸಿಬ್ಬಂದಿ ವರ್ಗ ತಂಡವನ್ನು ಸ್ವಾಗತಿಸಿತು. ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಶುದ್ಧ ಕುಡಿಯುವ ನೀರಿನ ಘಟಕ, ಡಿಜಿಟಲ್ ಲೈಬ್ರರಿ, ಇ-ಆಡಳಿತ ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ಅದ್ಯಯನ ತಂಡಕ್ಕೆ ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.

ಸ್ಥಳೀಯ ಕೃಷಿ ಆರೋಗ್ಯ ಮಾರುಕಟ್ಟೆ ವ್ಯವಸ್ಥೆ ಇವುಗಳಲ್ಲಿ ಗ್ರಾಮ ಪಂಚಾಯಿತಿ, ಸಾರ್ವಜನಿಕ ಸಹಭಾಗಿತ್ವ ವ್ಯವಸ್ಥೆಗಳ ಕುರಿತು ತಂಡ ಚರ್ಚೆ ನಡೆಸಿತು. ಸ್ಥಳೀಯ ಚೆಶೈರ್ ಹೋಂ ಸಂಸ್ಥೆಗೆ ಹಾಗೂ ಪಂಚಾಯಿತಿ ಶುದ್ಧ ಕುಡಿಯುವ ನೀರಿನ ಘಟಕ, ತ್ಯಾಜ್ಯ ಪುನರ್ ಬಳಕೆ ಸಂಗ್ರಹಣಾ ಕೇಂದ್ರ, ಪಂಚಾಯಿತಿ ಟೈಲರಿಂಗ್ ತರಬೇತಿ ಕೇಂದ್ರಕ್ಕೆ ತಂಡ ಭೇಟಿ ನೀಡಿ ಪಂಚಾಯಿತಿ ಆಡಳಿತ ವ್ಯವಸ್ಥೆಯನ್ನು ಪ್ರಶಂಸೆ ವ್ಯಕ್ತಪಡಿಸಿತು.

ಗ್ರಾಮಸ್ಥರ ಕೋರಿಕೆ ಮೇರೆಗೆ ಆಫ್ರಿಕಾ 8 ದೇಶಗಳ ಪ್ರತಿನಿಧಿಗಳು ತಮ್ಮ ಸಾಂಪ್ರದಾಯಿಕ ನೃತ್ಯ ಪ್ರದರ್ಶನವನ್ನು ಪಾಲಿಬೆಟ್ಟ ಸಮುದಾಯ ಭವನ ಮುಂಭಾಗದಲ್ಲಿ ನಡೆಸಿದರು.

ಈ ಸಂದರ್ಭ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಡೆವಲೆಪ್‍ಮೆಂಟ್ ಹೈದರಾಬಾದ್‍ನ ಅಧಿಕಾರಿ ಪ್ರಮೋದ್ ಚೋಂದವಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಉಪಾಧ್ಯಕ್ಷ ರೇಖಾ ಗಣಪತಿ, ಸದಸ್ಯರುಗಳಾದ ಲಲಿತ, ಇಂದಿರಾ, ಸುಶೀಲ, ಬಾಬು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ. ಅಬ್ದುಲ್ಲ, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.