ಸೋಮವಾರಪೇಟೆ, ಡಿ. 7: ಇಲ್ಲಿನ ಇಂದಿರಾಗಾಂಧಿ ಅಭಿಮಾನಿಗಳ ಸಂಘದಿಂದ ತಾ. 21 ಮತ್ತು 22 ರಂದು ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾಟವನ್ನು ಸ್ಥಳೀಯ ಸಾಕಮ್ಮನ ಬಂಗಲೆಯ ಮುಂಭಾಗದಲ್ಲಿರುವ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಹುಟ್ಟುಹಬ್ಬದ ಅಂಗವಾಗಿ 32ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ತಂಡಗಳು ಭಾಗವಹಿಸಲಿವೆ ಎಂದರು. ಸಂಘದ ವತಿಯಿಂದ ಕಳೆದ 2 ದಶಕಗಳಿಂದಲೂ ಕಬಡ್ಡಿ, ಥ್ರೋಬಾಲ್, ವಾಲಿಬಾಲ್, ಕುಸ್ತಿ, ಕೇರಂ, ಸೈಕಲ್ ರೇಸ್, ರಸ್ತೆ ಓಟ, ಹಗ್ಗಜಗ್ಗಾಟ ಸೇರಿದಂತೆ ಇತರ ಕ್ರೀಡೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಕಳೆದ 31 ವರ್ಷಗಳಿಂದ ಸತತವಾಗಿ ಕಬಡ್ಡಿ ಪಂದ್ಯಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಪಂದ್ಯಾಟದಲ್ಲಿ ವಿಜೇತರಾಗುವ ತಂಡಗಳಿಗೆ ಆಕರ್ಷಕ ಟ್ರೋಫಿಯೊಂದಿಗೆ ಪ್ರಥಮ ಬಹುಮಾನವಾಗಿ 5 ಸಾವಿರ ನಗದು, ದ್ವಿತೀಯ ಬಹುಮಾನವಾಗಿ 3 ಸಾವಿರ ನಗದು, ತೃತೀಯ ಬಹುಮಾನವಾಗಿ 2 ಸಾವಿರ ನಗದು ಬಹುಮಾನ ನೀಡಲಾಗುವದು. ಇದೇ ಸಂದರ್ಭ ಪ್ರಾಥಮಿಕ ಶಾಲಾ ಮಕ್ಕಳಿಗೂ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ವಿಜೇತರಿಗೆ ತಾ. 22 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವದು. ಪಂದ್ಯಾಟದ ಬಗೆಗಿನ ಹೆಚ್ಚಿನ ಮಾಹಿತಿಗೆ ಮೊ. 9449791791, 9483843395 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಾಜಪ್ಪ, ಸಂಚಾಲಕ ಎಲ್. ರವಿ, ಸದಸ್ಯರಾದ ಮನೋಜ್, ಪುನೀತ್, ಪ್ರಸನ್ನ, ಹರೀಶ್ ಅವರುಗಳು ಉಪಸ್ಥಿತರಿದ್ದರು.