ಹೆಬ್ಬಾಲೆ, ಡಿ. 7: ಇಲ್ಲಿನ ಹೆಬ್ಬಾಲೆ ಮಾದರಿ ಯುವಕ ಸಂಘದ ವತಿಯಿಂದ ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿ ವಾರ್ಷಿಕ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಕಬಡ್ಡಿ ಪಂದ್ಯಾವಳಿಯಲ್ಲಿ ಹೆಬ್ಬಾಲೆ ಮನು ಫ್ರೆಂಡ್ಸ್ ತಂಡ ಬನಶಂಕರಿ ಟ್ರೋಫಿಯನ್ನು ಮುಡಿಗೇರಿಸಿ ಕೊಂಡಿದೆ.

ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಹೆಬ್ಬಾಲೆ ಮನು ಫ್ರೆಂಡ್ಸ್ ತಂಡ ಬಂಟ್ವಾಳ ಭದ್ರ ಚಾಲೆಂಜರ್ಸ್ ತಂಡವನ್ನು 20-12 ಅಂಕಗಳ ಅಂತರದಿಂದ ಮಣಿಸುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಬಂಟ್ವಾಳ ಭದ್ರ ಚಾಲೆಂಜರ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ಸ್ ಪಂದ್ಯಾದಲ್ಲಿ ಹೆಬ್ಬಾಲೆ ಮನು ಫ್ರೆಂಡ್ಸ್ ತಂಡವು ಕುಶಾಲನಗರ ಜೆಬಿಎಸ್ಸಿ ಬಿ ತಂಡವನ್ನು ಸೋಲಿಸಿ ಫೈನಲ್ ತಲಪಿತು. ಬಂಟ್ವಾಳ ಭದ್ರ ಚಾಲೆಂಜರ್ಸ್ ತಂಡವು ಕುಶಾಲನಗರ ಜೆಬಿಎಸ್ಸಿ ಎ ತಂಡವನ್ನು ಮಣಿಸಿ ಫೈನಲ್ ತಲಪಿತು. ಕುಶಾಲನಗರ ಜೆಬಿಎಸ್ಸಿ ಎ ತಂಡ ತೃತೀಯ ಸ್ಥಾನಗಳಿಸಿತು.

ಕಬಡ್ಡಿ ಕ್ರೀಡಾಕೂಟಕ್ಕೆ ಜಿ.ಪಂ. ಸದಸ್ಯ ಎಚ್.ಆರ್.ಶ್ರೀನಿವಾಸ್ ಚಾಲನೆ ನೀಡಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಮಧುಸೂದನ್, ಮಾದರಿ ಯುವಕ ಸಂಘದ ಅಧ್ಯಕ್ಷ ಎಚ್.ಆರ್. ಆದರ್ಶ, ಕಾರ್ಯದರ್ಶಿ ಎಚ್.ಟಿ. ಸಂತೋಷ್, ಖಜಾಂಜಿ ಎಚ್.ಟಿ. ಪುನೀತ್, ಮುಖಂಡರಾದ ಎಚ್.ಜೆ. ಶ್ರೀಧರ್, ಎಚ್.ಜೆ. ಸುದರ್ಶನ್, ಮನು, ನಾಗೇಶ್ ಇದ್ದರು.

ತೀರ್ಪುಗಾರರಾಗಿ ಕರುಂಬಯ್ಯ, ಬೋಜೇಗೌಡ, ಕೃಷ್ಣಮೂರ್ತಿ, ಪ್ರವೀಣ್, ಸಂತೋಷ್, ಆನಂದ್ ಕಾರ್ಯನಿರ್ವಹಿಸಿದರು. ರಾಜ್ಯದ ವಿವಿಧೆಡೆಗಳಿಂದ 21 ಕಬಡ್ಡಿ ತಂಡಗಳು ಪಾಲ್ಗೊಂಡಿದ್ದವು.

ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ರೂ.22,222 ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. 11,111 ನಗದು ಹಾಗೂ ಆಕರ್ಷಕ ಟ್ರೋಪಿ, ತೃತೀಯ ಬಹುಮಾನ ರೂ.5,555 ಹಾಗೂ ಆಕರ್ಷಕ ಟ್ರೋಫಿ ನಿಗದಿ ಪಡಿಸಿದ್ದು, ವಿಜೇತ ತಂಡಗಳಿಗೆ ತಾ. 8 ರಂದು (ಇಂದು) ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.