ಕೂಡಿಗೆ, ಡಿ. 7: ಕೂಡಿಗೆಯ ಸೈನಿಕ ಶಾಲೆಯ 2018-19ನೇ ಸಾಲಿನ ಅಂತರ ನಿಲಯ ವಾರ್ಷಿಕ ಅಥ್ಲೆಟಿಕ್ ಕ್ರೀಡಾಕೂಟ ಕ್ರೀಡಾ ಶಾಲಾ ಮೈದಾನದಲ್ಲಿ ನಡೆಯಿತು.

ಉದ್ಘಾಟನೆಯನ್ನು ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕಾಪ್ಟನ್ ಆರ್.ಆರ್. ಲಾಲ್ ಜ್ಯೋತಿ ಬೆಳೆಗಿಸುವ ಮೂಲಕ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕ್ರೀಡೆಯು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಪೂರಕವಾದ ಪಾತ್ರವನ್ನು ವಹಿಸುತ್ತದೆ.

ಪ್ರತಿಯೊಬ್ಬ ಕ್ರೀಡಾಪಟು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಬೇಕು. ಸಾಂಘಿಕ ಮತ್ತು ಕೌಶಲ್ಯಯುತ ಹೋರಾಟದ ಮೂಲಕ ಪ್ರಯತ್ನಿಸಿದಲ್ಲಿ ಸ್ಪರ್ಧೆಯಲ್ಲಿ ಗೆಲವು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಪ್ರಸ್ತುತ ಕ್ರೀಡಾಕೂಟದಲ್ಲಿ ನೂರು ಮೀಟರ್, ನಾನೂರು ಮೀಟರ್, ಎಂಟು ನೂರು ಮೀಟರ್, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ ಪಂದ್ಯಾಟಗಳು ಪತ್ಯೇಕವಾಗಿ ಶಾಲೆಯ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಯಿತು. ಶಾಲೆಯ ಭೋದಕ ಮತ್ತು ಭೋದಕೇತರ ವರ್ಗದವರಿಗೆ ಹಗ್ಗ ಜಗ್ಗಾಟ ಮತ್ತು ನಾನೂರು ಮೀಟರ್ ಓಟವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿರುವ ಕೂಡಿಗೆಯ ಸರಕಾರಿ ಪದವಿಪೂರ್ವ ಕಾಲೇಜಿನ ಶೈಲಾ ಹಾಗೂ ಕುಶಾಲನಗರ ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನ ಕ್ರೀಡಾಪಟು ರಾಶಿ ಅವರಿಗೆ ಸನ್ಮಾನ ಮಾಡಲಾಯಿತು.

ಕೆಡೆಟ್ ಶಿವಕುಮಾರ್ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಈ ಸಂದರ್ಭ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕ್ರೀಡಾಕೂಟದಲ್ಲಿ ಶಾಲೆಯ ಉಪ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಟಿ, ಆಡಳಿತಾಧಿಕಾರಿ ಗಳಾದ ಸ್ಕ್ವಾಡ್ರನ್ ಲೀಡರ್ ಡಿ. ಮಾಥ್ಯೂ, ವೈದ್ಯಾಧಿಕಾರಿ ಮಹೇಶ್ ಹಾಗೂ ಭೋದಕ ಹಾಗೂ ಭೋದ ಕೇತರ ವರ್ಗದವರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.