ಸಿದ್ದಾಪುರ, ಡಿ. 7: ಕುಶಾಲನಗರ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಡುವ ಗುಡ್ಡೆಹೊಸೂರು ಬಳಿ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಮರವನ್ನು ವಶಪಡಿಸಿಕೊಳ್ಳುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಕುಶಾಲನಗರ ವಲಯದ ಆನೆಕಾಡು ಶಾಖಾ ಸಿಬ್ಬಂದಿಗಳು ರಾತ್ರಿ ಸಮಯದಲ್ಲಿ ದಸ್ತು ತಿರುಗುತ್ತಿದ್ದ ಸಂದರ್ಭ ಗುಡ್ಡೆಹೊಸೂರು ಭಾಗದಿಂದ ನೀಲಿ ಬಣ್ಣದ ಟಾಟಾ ಸುಮೋ ವಾಹನವೊಂದು ಅನುಮಾನಸ್ಪದವಾಗಿ ತೆರಳುತ್ತಿತ್ತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸದರಿ ವಾಹನವನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಹಿಂಬಾಲಿಸಿಕೊಂಡು ಹೋದಾಗ ಟಾಟಾ ಸುಮೋ ವಾಹನವು ಮೈಸೂರುನತ್ತ ಸಾಗುತ್ತಿತ್ತು. ಕುಶಾಲನಗರದ ಕೊಪ್ಪ ಅರಣ್ಯ ತನಿಖಾ ಠಾಣೆಯಲ್ಲಿ ವಾಹನವನ್ನು ನಿಲ್ಲಿಸುವಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದರು. ಆದರೆ ಆರೋಪಿಗಳು ವಾಹನವನ್ನು ನಿಲ್ಲಿಸದೇ ಮುಂದೆ ತೆರಳುತ್ತಿರುವದನ್ನು ಕಂಡ ಅರಣ್ಯ ಸಿಬ್ಬಂದಿಗಳು ಇಲಾಖೆಯ ಜೀಪಿನಲ್ಲಿ ಅಡ್ಡಗಟ್ಟಿ ನಿಲ್ಲಿಸಿದಾಗ ಟಾಟಾ ಸುಮೋವನ್ನು ಮರಗಳ್ಳರು ರಸ್ತೆ ಬದಿ ನಿಲ್ಲಿಸಿ ಚಾಲಕನು ವಾಹನದಿಂದ ಇಳಿದು ಪರಾರಿಯಾಗಿರುತ್ತಾನೆ.
ಈ ಬಗ್ಗೆ ಪರಿಶೀಲಿಸಿದಾಗ ಟಾಟಾ ಸುಮೋ ವಾಹನದ ಸಂಖ್ಯೆ ಕೆಎ 01 ಎನ್ 8225ರಲ್ಲಿ ಮೂರು ಬೀಟೆ ನಾಟಗಳು ಕಂಡು ಬಂದಿತ್ತು. ಯಾವದೇ ಸಾಗಾಣಿಕ ರಹದಾರಿ ಇಲ್ಲದ ಹಿನ್ನೆಲೆಯಲ್ಲಿ ವಾಹನವನ್ನು ಹಾಗೂ ವಾಹನದಲ್ಲಿದ್ದ ಅಂದಾಜು ರೂ. 5 ಲಕ್ಷ ಮೌಲ್ಯದ ಬೀಟೆ ಮರಗಳನ್ನು ವಶಪಡಿಸಿಕೊಂಡು ಅರಣ್ಯ ಇಲಾಖಾಧಿಕಾರಿಗಳು ಮೊಕ್ಕದ್ದಮೆಯನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್ ಅರುಣ್‍ರವರ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಆನೆಕಾಡು ಶಾಖೆಯ ಉಪವಲಯ ಅರಣ್ಯಾಧಿಕಾರಿಗಳಾದÀ ಕೆ.ಪಿ. ರಂಜನ್ ಸಿಬ್ಬಂದಿಗಳಾದ ಸಿ.ಎನ್. ಪೂಣಚ್ಚ ಸಂಚು, ಹಿರೇಮಠ ಟಿ.ಕೆ ದಿನೇಶ್, ಚಾಲಕ ಬಿ.ಅರ್. ಸತೀಶ್, ಪೊನ್ನಪ್ಪ, ಶಾಂತ ಪ್ರದೀಪ ಪಾಲ್ಗೊಂಡಿದ್ದರು.
-ವಾಸು