ಮಡಿಕೇರಿ, ಡಿ. 8: ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆಯಿಂದ ಇಂದು ನಡೆದ ಪ್ರತಿಭಟನಾ ಸಭೆಯಲ್ಲಿ ಚತುಷ್ಪಥ ರಸ್ತೆ ಹಾಗೂ ರೈಲ್ವೇ ಯೋಜನೆ ಬೆಂಬಲಿತರು ಭಾಗಿಯಾಗಿ ಪ್ರತಿಭಟಿಸಿದ ಘಟನೆ ನಡೆಯಿತು.ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರಾದ ಮನು ಮುತ್ತಪ್ಪ, ಮಧು ಬೋಪಣ್ಣ, ಬಿ.ಟಿ. ದಿನೇಶ್, ಕಾಳನ ರವಿ, ಜಿನ್ನು ನಾಣಯ್ಯ, ಮಂಡೇಟಿರ ಅನಿಲ್ ಅಯ್ಯಪ್ಪ, ಶೋಭಾ ಮೋಹನ್, ಬಾಲಚಂದ್ರ ಕಳಗಿ, ಮಹೇಶ್ ಜೈನಿ, ಸೇರಿದಂತೆ ಸುಮಾರು ನೂರರಷ್ಟು ಮಂದಿ ಸಭಾ ಕಾರ್ಯಕ್ರಮಕ್ಕೂ ಮುನ್ನವೇ ಗಾಂಧಿ ಮೈದಾನಕ್ಕೆ ಆಗಮಿಸಿ ಆಸೀನರಾಗಿದ್ದರು. ಮನುಮುತ್ತಪ್ಪ, ಮಧು ಬೋಪಣ್ಣ ಮಾತನಾಡಿ ನಾವುಗಳು ಯೋಜನೆಯ ಪರವಾಗಿ ಚರ್ಚೆಗೆ ಸಿದ್ಧರಾಗಿ ಬಂದಿದ್ದೇವೆ ಎಂದರು. ಈ ವೇಳೆ ಪೊಲೀಸರು ಯೋಜನೆಯನ್ನು ಬೆಂಬಲಿಸುವದಾದರೆ ಪ್ರತ್ಯೇಕವಾಗಿ

(ಮೊದಲ ಪುಟದಿಂದ) ಸೇರಿ ಬೆಂಬಲ ನೀಡಿ, ಅದನ್ನು ಬಿಟ್ಟು ಕೊಡಗು ಮಾರಕ ಯೋಜನೆ ವಿರೋಧ ವೇದಿಕೆಯವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೊಂದಲ ಸೃಷ್ಟಿಸಬೇಡಿ ಎಂದರು. ವಿರೋಧಿ ವೇದಿಕೆಯ ಸದಸ್ಯರು ಗಾಂಧಿ ಮೈದಾನ ಪ್ರವೇಶಿಸುತ್ತಿದ್ದಂತೆ ಪೊಲೀಸರು ವೇದಿಕೆಯ ಪ್ರಮುಖರೊಂದಿಗೆ ಈ ಬಗ್ಗೆ ಮಾಹಿತಿ ನೀಡಿದಾಗ ಕಾರ್ಯಕ್ರಮದಲ್ಲಿ ಇರಲಿ ಆದರೆ ವೇದಿಕೆಯ ಸದಸ್ಯರುಗಳಿಗೆ ಯಾವದೇ ತೊಂದರೆ ಆಗದಂತೆ ಸೂಕ್ತ ರಕ್ಷಣೆ ಕಲ್ಪಿಸುವಂತೆ ಮನವಿ ಮಾಡಿದರು. ನಂತರ ವಿರೋಧಿ ವೇದಿಕೆಯ ಪ್ರಮುಖ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ದೀಪ ಬೆಳಗಿದರು. ಈ ವೇಳೆ ಯೋಜನೆ ಬೆಂಬಲಿತರಿಂದ ಧಿಕ್ಕಾರ ಘೋಷಣೆ ಕೇಳಿಬಂತು.

ಮುತ್ತಣ್ಣ ಅವರು ಕೈ ಮೇಲಕ್ಕೆತ್ತಿ ಧಿಕ್ಕಾರ ಘೋಷಣೆಗೆ ಪ್ರತಿರೋಧ ವೊಡ್ಡಿದರು. ಬಳಿಕ ಪ್ರಾರ್ಥನಾ ಗೀತೆ ಆರಂಭವಾಗುತ್ತಿದ್ದಂತೆ ರೈಲ್ವೇ ಯೋಜನೆ ಬೇಕು; ಚತುಷ್ಪಥ ರಸ್ತೆ ಬೇಕು ಎಂಬಿತ್ಯಾದಿ ಘೋಷಣೆಗಳನ್ನು ಮನುಮುತ್ತಪ್ಪ ನೇತೃತ್ವದಲ್ಲಿ ಕೂಗಲಾರಂಭಿಸಿದಾಗ ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದೆ ಯೋಜನೆ ಬೆಂಬಲಿತರನ್ನು ಅಲ್ಲಿಂದ ಕಳುಹಿಸಿದರು. ಈ ವೇಳೆ ಎರಡೂ ಬಣಗಳ ನಡುವೆ ಪರ-ವಿರೋಧ ಘೋಷಣೆಗಳು ಕೇಳಿ ಬಂದವು. ದಾರಿಯುದ್ದಕ್ಕೂ ಧಿಕ್ಕಾರದ ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ತೆರಳಿದರು.

ಪ್ರತಿಭಟನಾಕಾರರು ಅಲ್ಲಿಂದ ತೆರಳಿದ ಬಳಿಕ ಸಭಾ ಕಾರ್ಯ ಕ್ರಮದಲ್ಲಿ ಮಾರಕ ಯೋಜನೆ ವಿರೋಧಿ ವೇದಿಕೆಯ ಪ್ರಮುಖರು ಪ್ರತಿಭಟನಾಕಾರರ ವಿರುದ್ಧ ವಾಗ್ದಾಳಿ ನಡೆಸಿದರು. ಗಾಂಧಿ ಮೈದಾನದಲ್ಲಿ ಆರಂಭದಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಡಿವೈಎಸ್ಪಿ ಸುಂದರ್‍ರಾಜ್, ವೃತ್ತ ನಿರೀಕ್ಷಕರುಗಳಾದ ಅನೂಪ್, ಭರತ್, ಮೇದಪ್ಪ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು. ಒಂದು ಹಂತದಲ್ಲಿ ಪ್ರತಿಭಟನೆ ಕಾವೇರಿದಾಗ ಎಸ್ಪಿ ಡಾ. ಸುಮನ್ ಆಗಮಿಸಿ ಸ್ಥಳದಲಿದ್ದು, ಪರಿಸ್ಥಿತಿ ತಿಳಿಯಾದ ಬಳಿಕ ಹಿಂತಿರುಗಿದರು.