ಮಡಿಕೇರಿ, ಡಿ. 8: ಪೂರ್ವ ಹಿಮಾಲಯ ಹಾಗೂ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳು ಅಳಿವಿನಂಚಿನಲ್ಲಿದ್ದು, ಇವುಗಳನ್ನು ಸಂರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿ ಭಾರೀ ಗಂಡಾಂತರ ಬಂದೊದಗಲಿದೆ ಎಂದು ಖ್ಯಾತ ಪರಿಸರವಾದಿ ಸುರೇಶ್ ಹೆಬ್ಳಿಕರ್ ಆತಂಕ ವ್ಯಕ್ತಪಡಿಸಿದ್ದಾರೆ.ಚತುಷ್ಪಥ ಹೆದ್ದಾರಿ ಹಾಗೂ ರೈಲ್ವೇ ಯೋಜನೆ ವಿರೋಧಿಸಿ ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ದೇಶದ 6 ರಾಜ್ಯಗಳಲ್ಲಿ ಪಶ್ಚಿಮಘಟ್ಟಗಳಿದ್ದು, ಇವುಗಳಿಂದಾಗಿ ದೇಶಕ್ಕೆ ಶೇ. 40 ರಷ್ಟು ಗಾಳಿ, ನೀರು, ಖನಿಜ ಸಂಪತ್ತುಗಳು ಲಭಿವಿಸುತ್ತಿವೆ. ಹೀಗಿರುವಾಗ ಪರಿಸರ ನಾಶ ಮಾಡುವದರಿಂದ ಮುಂದೊಂದು ದಿನ ಬದುಕು ಸಾಗಿಸಲು ತೊಂದರೆ ಉಂಟಾಗಲಿದೆ. ಕೊಡಗಿನಲ್ಲೂ ಪರಿಸರ ಸಂರಕ್ಷಣೆ ಅತ್ಯಗತ್ಯವಾಗಿ ಆಗಬೇಕಿದೆ. ಕಾವೇರಿ ನದಿಯನ್ನು ಉಳಿಸಿಕೊಳ್ಳಬೇಕಿದೆ. ಇಲ್ಲಿನ ಪರಿಸರ ನಾಶದಿಂದ ಮುಂದಿನ ಪೀಳಿಗೆಗೆ ಕೊಡಗಿನಲ್ಲಿ ನೆಮ್ಮದಿಯ ಬದುಕು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕೊಡಗಿನ ಪರಿಸರದ ಬಗ್ಗೆ ಕೊಡಗಿನ ಜನತೆ ಅತೀವ ಕಾಳಜಿ ತೋರಿಸಬೇಕಿದೆ ಎಂದು ಸುರೇಶ್ ಹೆಬ್ಳಿಕರ್ ಕಿವಿಮಾತು ಹೇಳಿದರು.

ಕೊಡಗು ಮಾರಕ ಯೋಜನೆ ವಿರೋಧ ವೇದಿಕೆಯ ಅಧ್ಯಕ್ಷ ರಾಜೀವ್ ಬೋಪಯ್ಯ

(ಮೊದಲ ಪುಟದಿಂದ) ಮಾತನಾಡಿ, ಮರಳು ಹಾಗೂ ಮರ ವ್ಯಾಪಾರ ದಂಧೆ ನಡೆಸುವ ಮಂದಿ; ಸ್ವಾರ್ಥಕ್ಕಾಗಿ ಬದುಕುತ್ತಿರುವವರು ನಮ್ಮ ಹೋರಾಟಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಕಮಿಷನ್ ಆಸೆಗಾಗಿ ಚತುಷ್ಪಥ ರಸ್ತೆ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ. ಇಂತಹವರ ಬಗ್ಗೆ ವೇದಿಕೆ ತಲೆಕೆಡಿಸಿಕೊಳ್ಳುವದಿಲ್ಲ. ನಾವು ಈ ಮಣ್ಣನ್ನು ಪೂಜಿಸುವವರು ಇಂತಹ ಪವಿತ್ರ ಮಣ್ಣಿಗೆ ಧಕ್ಕೆ ತರುವ ಯೋಜನೆಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಹೇಳಿದರು.

ಯುನೈಟೆಡ್ ಕೊಡವ ಆರ್ಗನೈಜೇಷನ್ ಸಂಚಾಲಕ ಮಂಜು ಚಿಣ್ಣಪ್ಪ ಮಾತನಾಡಿ, ಕೊಡಗು ಮಾರಕ ಯೋಜನೆಗಳ ವಿರುದ್ಧ ನಾವು ಮಾಡುತ್ತಿರುವ ನ್ಯಾಯಯುತ ಹೋರಾಟಕ್ಕೆ ಅಡ್ಡಿ ಮಾಡುವವರಿಗೆ ಕೇವಲ ಪ್ರಚಾರ ಗಿಟ್ಟಿಕೊಳ್ಳುವ ದುರುದ್ದೇಶವಿದೆ ಹೊರತು ಕೊಡಗಿನ ಬಗ್ಗೆ ಯಾವದೇ ನೈಜ ಕಾಳಜಿ ಇಲ್ಲ ಎಂದು ಟೀಕಿಸಿದರು. ತಮ್ಮ ಸಂಘಟನೆ ವತಿಯಿಂದ ತಲಕಾವೇರಿ - ಭಾಗಮಂಡಲ ಪಾದಯಾತ್ರೆಯನ್ನು ಈ ಹಿಂದೆ ಕೈಗೊಂಡಾಗಲೂ ಕೆಲವರು ಅಡ್ಡಿ ಮಾಡಿದರು. ಆದರೂ ಪಾದಯಾತ್ರೆ ಯಶಶ್ವಿಯಾಯಿತು. ಇದು ಕೊಡಗಿನ ಮಣ್ಣಿನ ಸತ್ಯಕ್ಕೆ ಸಾಕ್ಷಿ. ಜನನಾಯಕರೆನಿಸಿಕೊಂಡವರು ಕೊಡಗಿಗೆ ಮಾರಕವಾದ ಯೋಜನೆಗಳನ್ನು ತಡೆಯಲು ವಿಫಲವಾಗಿರುವ ಹಿನ್ನೆಲೆಯಲ್ಲಿ ನಾವುಗಳು ಹೋರಾಟವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಹೇಳಿದರು.

ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಮಾತನಾಡಿ, ಕೊಡಗಿಗೆ ಮಾರಕವಾಗಿರುವ ಯೋಜನೆಗಳ ವಿರುದ್ಧ ನಾವುಗಳು ನ್ಯಾಯಯುತವಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ತಡೆ ಉಂಟುಮಾಡುವವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲು ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ, ನಮ್ಮ ಹೋರಾಟ ಯಾವದೇ ಕಾರಣಕ್ಕೂ ನಿಲ್ಲುವದಿಲ್ಲ ಎಂದು ಹೇಳಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಚಂದ್ರಮೋಹನ್ ಮಾತನಾಡಿ, ಕೊಡಗಿನಲ್ಲಿ ಕಾವೇರಿ ನದಿಯು ವೇಗದ ಅಭಿವೃದ್ಧಿಗೆ ಸಿಲುಕಿ ನಲುಗುತ್ತಿದೆ. ಕೊಡಗಿನಲ್ಲಿ ಯಾವದೇ ಯೋಜನೆಗಳನ್ನು ಜಾರಿಗೊಳಿಸುವ ಮುನ್ನ ಅದರ ಸಾಧಕ - ಬಾಧಕಗಳ ಬಗ್ಗೆ ಯಾರೂ ಚರ್ಚಿಸುತ್ತಿಲ್ಲ. ಏಕಾಏಕಿಯಾಗಿ ಯೋಜನೆಗಳನ್ನು ಹೇರುತ್ತಿರುವದರಿಂದ ಸಮಸ್ಯೆ ಉಂಟಾಗುತ್ತಿದೆ. ಎಂದರಲ್ಲದೆ, ಕಾವೇರಿ ನದಿ ಸಂರಕ್ಷಣೆಗೆ ಸರ್ಕಾರ ಯೋಜನೆ ರೂಪಿಸುವಂತೆ ಒತ್ತಾಯಿಸಿದರು.

ಮುಕ್ಕೋಡ್ಲುವಿನ ನಾಪಂಡ ರಘು ತಿಮ್ಮಯ್ಯ ಮಾತನಾಡಿ, ಕೊಡಗಿನ ಪರಿಸರಕ್ಕೆ ಮಾರಕವಾಗುವ ಯೋಜನೆಗಳಿಂದ ಕೊಡಗಿಗೆ ಆಪತ್ತು ತಪ್ಪಿದಲ್ಲ. ಆದ್ದರಿಂದ ಚತುಷ್ಪಥ ರಸ್ತೆ ಯೋಜನೆಯನ್ನು ಕೈಬಿಡುವಂತೆ ಮನವಿ ಮಾಡಿದರು. ‘ಕೊಡಗು ಮಾಡಲ್ ಫಾರೆಸ್ಟ್’ ಸಮಿತಿಯ ಸದಸ್ಯೆ ಮೀರಾ ರಾಜೇಶ್, ಬೆಂಗಳೂರಿನ ಪತ್ರಕರ್ತರ ಜೋಸೆಫ್ ಹೂವರ್ ಇವರುಗಳು ಮಾತನಾಡಿ, ಯಾವದೇ ಕಾರಣಕ್ಕೂ ಕೊಡಗಿಗೆ ಮಾರಕವಾಗುವ ಯೋಜನೆಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರಲ್ಲದೆ ಕೊಡಗಿನ ಉಳಿವಿಗೆ ನಡೆಯುವ ಹೋರಾಟಕ್ಕೆ ಸದಾ ಬೆಂಬಲ ನೀಡುವದಾಗಿ ಹೇಳಿದರು.

ಮೇಜರ್ ಬಿ.ಎ. ನಂಜಪ್ಪ ನಿರೂಪಿಸಿ, ಲೋಹಿತ್ ಪ್ರಾರ್ಥಿಸಿದರು. ಕಾರ್ಯಕ್ರಮಕ್ಕೂ ಮೊದಲು ಜ. ತಿಮ್ಮಯ್ಯ ಕ್ರೀಡಾಂಗಣದ ಬಳಿಯಿಂದ ಗಾಂಧಿ ಮೈದಾನದವರೆಗೆ ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆಯ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ ರೈಲು ಹಾಗೂ ಚತುಷ್ಪಥ ರಸ್ತೆ ಯೋಜನೆಗೆ ವಿರೋಧಿಸಿ ನಾಮಫಲಕಗಳು ಘೋಷಣೆಗಳು ಇದ್ದವು. ಕರ್ನಲ್ ಮುತ್ತಣ್ಣ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.