ಮಡಿಕೇರಿ, ಡಿ. 8: ಇಲ್ಲಿನ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಇತರರೊಡಗೂಡಿ ನಿನ್ನೆ ಮಧ್ಯಾಹ್ನ ಗಾಳಿಬೀಡುವಿನ ಕೂಟುಹೊಳೆ ಹಿನ್ನೀರಿನಲ್ಲಿ ಸ್ನಾನಕ್ಕೆ ತೆರಳಿದ ವೇಳೆ, ಆಕಸ್ಮಿಕ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇಲ್ಲಿಗೆ ಸಮೀಪದ ಉಡೋತ್ಮೊಟ್ಟೆ ನಿವಾಸಿ ಕೊಕ್ಕಲೆ ಎಸ್. ಮುತ್ತಪ್ಪ ಎಂಬವರ ಪುತ್ರ ಕೆ.ಎಂ. ರಕ್ಷಿತ್(20) ಹಾಗೂ ಮದೆ ಗ್ರಾಮದ ದೇಶಕೋಡಿ ಪೊನ್ನಪ್ಪ ಎಂಬವರ ಪುತ್ರ ಡಿ.ಪಿ. ಯಶವಂತ್ (20) ಎಂಬವರೇ ಮೃತ ದುರ್ದೈವಿಗಳು. ಮೃತರ ಪೋಷಕರ ಪ್ರಕಾರ ನಿನ್ನೆ ಬೆಳಿಗ್ಗೆ ಎಂದಿನಂತೆ ಈ ವಿದ್ಯಾರ್ಥಿಗಳು ಐಟಿಐ ಕಾಲೇಜಿಗೆ ತೆರಳಿದ್ದಾರೆ. ಅಲ್ಲದೆ ರಕ್ಷಿತ್ ಕಾಲೇಜಿಗೆ ಬರುವಾಗ ನಿತ್ಯವೂ ತನ್ನ ಸೋದರಿಯನ್ನು ಬೈಕ್ನಲ್ಲಿ (ಕೆ.ಎ. 12 ಕ್ಯೂ 9756) ಮಡಿಕೇರಿಗೆ ಕರೆತಂದು ಕಚೇರಿಯೊಂದರಲ್ಲಿ ಕೆಲಸಕ್ಕೆ ಬಿಟ್ಟು ತೆರಳುತ್ತಿದ್ದ. ನಿನ್ನೆಯೂ ಬಿಟ್ಟು ಹೋಗಿದ್ದು, ಸಂಜೆ ಆಕೆಯನ್ನು ಎಂದಿನಂತೆ ಮನೆಗೆ ಕರೆದೊಯ್ದಿರಲಿಲ್ಲ. ಇತ್ತ ಯಶವಂತ ಕೂಡ ಮನೆಗೆ ವಾಪಾಸಾಗಿಲ್ಲ.
ಆ ಮೇರೆಗೆ ಎರಡು ಕಡೆಯ ಪೋಷಕರು ತಮ್ಮ ಮಕ್ಕಳ ಹುಡುಕಾಟ ನಡೆಸಿದ್ದು, ಈ ವೇಳೆ ಪರಿಚಿತರೊಬ್ಬರು ಗಾಳಿಬೀಡು ಹಿನ್ನೀರು ಪ್ರದೇಶ ಬಳಿ ಬೈಕ್ ನಿಂತಿರುವ ಮಾಹಿತಿ ನೀಡಿದ್ದಾಗಿ ಗೊತ್ತಾಗಿದೆ. ಆ ಮೇರೆಗೆ ವಿದ್ಯಾರ್ಥಿಗಳ ಪೋಷಕರು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಕತ್ತಲೆಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಇಂದು ಬೆಳಿಗ್ಗೆ ಅಗ್ನಿಶಾಮಕ ತಂಡ ಹಾಗೂ ಈಜು ತಜ್ಞರೊಂದಿಗೆ ಘಟನೆ ಸ್ಥಳದಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಘಟನೆ ಸ್ಥಳದಲ್ಲಿ ರಕ್ಷಿತ್ಗೆ ಸೇರಿದ ಬೈಕ್ ಮಾತ್ರವಲ್ಲದೆ, ಇಬ್ಬರ ಪಾದರಕ್ಷೆಗಳು, ಬ್ಯಾಗ್ಗಳು ಹಾಗೂ ನೀರಿಗಿಳಿಯುವ ಮುನ್ನ ಬಿಚ್ಚಿಟ್ಟಿದ ಉಡುಪುಗಳು ಪತ್ತೆಯಾಗಿವೆ. ಆ ಮೇರೆಗೆ ನೀರಿನೊಳಗೆ ಮುಳುಗಿರುವ ಶಂಕೆಯೊಂದಿಗೆ ಹುಡುಕಾಟ ನಡೆಸಲಾಗಿ, ಇಂದು ಮಧ್ಯಾಹ್ನ ವೇಳೆಗೆ ಇಬ್ಬರ ಮೃತದೇಹ ಪತ್ತೆಯಾಗಿವೆ.
ಮಹಿಳೆ ನೀಡಿದ ಸುಳಿವು : ಈ ಸಂಬಂಧ ಕೂಟುಹೊಳೆ ಹಿನ್ನೀರು ಪ್ರದೇಶ ಬಳಿಯ ನಿವಾಸಿ, ಪಾರ್ವತಿ ಎಂಬವರು ‘ಶಕ್ತಿ’ಗೆ ಮಾಹಿತಿ ನೀಡಿ, ತಾನು ನಿನ್ನೆ ಮಧ್ಯಾಹ್ನ 12 ಗಂಟೆಯಿಂದ 1.30ರ ಅವಧಿಯೊಳಗೆ ಕೆಲವರು ಯುವಕರು ಈ ಸ್ಥಳದಲ್ಲಿ ಬೊಬ್ಬಿಡುತ್ತಾ ನೀರಿನಲ್ಲಿ ಇದ್ದುದ್ದನ್ನು ಗಮನಿಸಿದ್ದಾಗಿ ತಿಳಿಸಿದ್ದಾರೆ. ಆಕೆಯ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಅನಂತರ ಮುಳುಗು ತಜ್ಞರಾಗಿರುವ ಗೃಹ ರಕ್ಷಕ ದಳದ ಕೊತ್ತೊಳಿರ ರವಿ ಮುತ್ತಪ್ಪ ಇಬ್ಬರು ವಿದ್ಯಾರ್ಥಿಗಳ ಶವಗಳನ್ನು ಪತ್ತೆ ಹಚ್ಚಿ ಹೊರತೆಗೆಯುವಲ್ಲಿ ಸಫಲರಾದರು.
ನೀರಿನಿಂದ ಶವಗಳನ್ನು ಹೊರತೆಗೆದು ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯರಿಂದ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಪೋಷಕರಿಗೆ ಒಪ್ಪಿಸಲಾಯಿತು. ಮೃತ ವಿದ್ಯಾರ್ಥಿಗಳ ಪೋಷಕರು ಹಾಗೂ ಬಂಧುವರ್ಗದ ರೋಧನ ಪ್ರತ್ಯಕ್ಷದರ್ಶಿಗಳ ಮನ ಕಲಕುವಂತಿತ್ತು.