ಮಡಿಕೇರಿ, ಡಿ. 7: ಕಳೆದ ಮುಂಗಾರು ಮಳೆಯ ಪರಿಣಾಮ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಭವಿಸಿರುವ ಹಾನಿ ವೇಳೆ ರಾಜ್ಯದ ಜನತೆ ಹಾಗೂ ಸಂಘ ಸಂಸ್ಥೆಗಳಿಂದ ದೇಣಿಗೆ ರೂಪದಲ್ಲಿ ಅಂದಾಜು ರೂ. 202.23 ಕೋಟಿ ಹಣ ಮುಖ್ಯಮಂತ್ರಿ ನಿಧಿಗೆ ಜಮೆ ಆಗಿದ್ದು, ಕೊಡಗಿನ ಸಂತ್ರಸ್ತರ ಕಷ್ಟಗಳಿಗೆ ಎಲ್ಲಾ ರೀತಿ ಪರಿಹಾರ ಕಲ್ಪಿಸಲು ಸರಕಾರ ಬದ್ಧವೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.ಮಾದಾಪುರ ಬಳಿಯ ಜಂಬೂರುವಿನ 50 ಎಕರೆ ತೋಟಗಾರಿಕಾ ಸಸ್ಯ ಕ್ಷೇತ್ರದ ಜಾಗದಲ್ಲಿ ಇಂದು ಸಂತ್ರಸ್ತರಿಗೆ ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆಯೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರಕಾರಿ ನೌಕರರ ಸಂಘದಿಂದ ರೂ. 100 ಕೋಟಿ ಸಹಿತ ಇತರೆಡೆಗಳಿಂದ ರೂ. 102.23 ಕೋಟಿ ದೇಣಿಗೆ ಜಮೆಗೊಂಡಿದ್ದಾಗಿದೆ ಎಂದು ವಿವರಿಸಿದರು.
ಕೇಂದ್ರ ಸರಕಾರದಿಂದ ರೂ. 546 ಕೋಟಿ ನಿಧಿ ಬಿಡುಗಡೆಗೊಂಡಿದ್ದು, ಈ ಮೊತ್ತ ಕೊಡಗು ಸಹಿತ ಮಲೆನಾಡು ಜಿಲ್ಲೆಗಳು ಹಾಗೂ ಕರಾವಳಿ ಒಳಗೊಂಡು 8 ಜಿಲ್ಲೆಗಳ ಪ್ರಾಕೃತಿಕ ಹಾನಿಗಾಗಿ ಬಿಡುಗಡೆಗೊಂಡಿದ್ದಾಗಿದೆ ಎಂದು ಸಮರ್ಥನೆ ನೀಡಿದರು. ಯಾವದೇ ಸರಕಾರವಾದರೂ ಜನರ ತೆರಿಗೆ ಹಣ ಒದಗಿಸಲಿದ್ದು, ಈ ಬಗ್ಗೆ ಹುಂಬುತನ ಬೇಡವೆಂದು ವ್ಯಾಖ್ಯಾನಿಸಿದರು.
ಸಂತ್ರಸ್ತರಿಗಾಗಿ 2 ಬೆಡ್ ರೂಂ.ಗಳನ್ನು ಒಳಗೊಂಡಂತೆ ರೂ. 9.85 ಲಕ್ಷ ಮೊತ್ತದ ಸುಸಜ್ಜಿತ ಮನೆ ನಿರ್ಮಿಸಿಕೊಡಲಿದ್ದು, ಅಲ್ಲಿಯ ತನಕ ಮಾಸಿಕ ಬಾಡಿಗೆ ರೂ. 10 ಸಾವಿರ ಹಾಗೂ ಮನೆ ಸಾಮಗ್ರಿಗಳ ಬಾಬ್ತು ರೂ. 50 ಸಾವಿರ ಕಲ್ಪಿಸಿದ್ದು, ಜಿಲ್ಲಾಧಿಕಾರಿಗಳ ಮುಖಾಂತರ ಈ ಮೊತ್ತವನ್ನು ಫಲಾನುಭವಿಗಳು ಹೊಂದಿಕೊಳ್ಳಲು ಸೂಚಿಸಿರುವದಾಗಿ ಸ್ಪಷ್ಟಪಡಿಸಿದರು.
ಬೇಡಿಕೆ ಪರಿಶೀಲನೆ: ಕೊಡಗಿನಲ್ಲಿ ಸಂಕಷ್ಟದಲ್ಲಿ ಇರುವ ಕಾಫಿ ಬೆಳೆಗಾರರ ಸಹಿತ ಒಳ್ಳೆಮೆಣಸು, ಭತ್ತ, ತೋಟಗಾರಿಕಾ ಬೆಳೆಗಳ ಹಾನಿ ಸಂಬಂಧ ಸಂಕಷ್ಟದಲ್ಲಿರುವ ಎಲ್ಲ ಬೆಳೆಗಾರರಿಗೆ ಭೂಮಿ ಹಾನಿ ಸಹಿತ ನಷ್ಟ ಪರಿಹಾರ ಕಲ್ಪಿಸುವ ಭರವಸೆ ನೀಡಿದ ಮುಖ್ಯಮಂತ್ರಿ, ಸಾಲಮನ್ನಾ ಬಗ್ಗೆಯೂ ಪರಿಶೀಲಿಸಿ ಅಗತ್ಯ ಕ್ರಮವಹಿಸುವದಾಗಿ ಘೋಷಿಸಿದರು.
ಬೆಟ್ಟದಷ್ಟು ನಿರೀಕ್ಷೆ: ಜಿಲ್ಲೆಯ ಸಂತ್ರಸ್ತರ ಸಹಿತ ರಾಜ್ಯದ ವಿವಿಧೆಡೆಯ ರೈತವರ್ಗ ಸಹಿತ ಇತರ ಜನತೆಯ ಮುಂದೆ ಬೆಟ್ಟದಷ್ಟು ನಿರೀಕ್ಷೆಗಳಿದ್ದು, ಎಲ್ಲವನ್ನು ಗಣನೆಗೆ ತೆಗೆದುಕೊಂಡು ಹಂತ ಹಂತವಾಗಿ ಸರಕಾರ ಪರಿಹಾರ ಕಲ್ಪಿಸುವದಾಗಿ ಅವರು ಭರವಸೆ ನೀಡಿದರು.
ಕಷ್ಟಕಾಲದಲ್ಲಿ ರಾಜ್ಯದ ಮುಖ್ಯಮಂತ್ರಿ ಸಹಿತ ಎಲ್ಲ ಸಂಪುಟ ಸಹೋದ್ಯೋಗಿಗಳು, ಸಂಸದರು, ಶಾಸಕರು,
(ಮೊದಲ ಪುಟದಿಂದ) ಅಧಿಕಾರಿಗಳು ಒಗ್ಗೂಡಿ ಜನತೆಯ ಸಹಕಾರದಿಂದ ಸಮಸ್ಯೆ ಇತ್ಯರ್ಥ ಗೊಳಿಸುವ ದಿಸೆಯಲ್ಲಿ ಯಾವದೇ ರಾಜಕೀಯ ಮಾಡದೆ, ಮಾನವೀಯ ನೆಲೆಯಲ್ಲಿ ಸ್ಪಂದಿಸಬೇಕಿದೆ ಎಂದ ಅವರು, ಯಾರೊಬ್ಬರೂ ಸಾಮೂಹಿಕ ಪ್ರಯತ್ನವನ್ನು ತನ್ನಿಂದ ಎಂಬಂತೆ ಬಿಂಬಿಸಿಕೊಳ್ಳದಂತೆ ತಿಳಿ ಹೇಳಿದರು.
ವಿದ್ಯುತ್ ಉಪಕೇಂದ್ರ: ಜಂಬೂರುವಿನ ಸಂತ್ರಸ್ತರ ವಸತಿ ಯೋಜನೆ ಪ್ರದೇಶದಲ್ಲಿ ಮನೆಗಳೊಂದಿಗೆ ರಸ್ತೆ, ಚರಂಡಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವದರ ಜತೆಗೆ ವಿದ್ಯುತ್ ಕೊರತೆ ಎದುರಾಗದಂತೆ ಸಂಬಂಧಿಸಿದ ಇಲಾಖೆಯ ಉಪಕೇಂದ್ರವನ್ನು ಅಲ್ಲಿನ ಒಂದೂವರೆ ಎಕರೆಯಲ್ಲಿ ಕಲ್ಪಿಸುವದಾಗಿ ಮುಖ್ಯಮಂತ್ರಿ ಘೋಷಿಸಿದರು.
ಸಾಲಮನ್ನಾ: ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ರೂ. 2 ಲಕ್ಷ ಹಾಗೂ ಸಹಕಾರ ಬ್ಯಾಂಕುಲ್ಲಿ ರೂ. 1 ಲಕ್ಷ ಸಾಲ ಮನ್ನಾ ಮಾಡಲಾಗುವದು. ರೈತರು ಆತ್ಮಸ್ಥೈರ್ಯದಿಂದ ಬದುಕಬೇಕು ಎಂದು ಅವರು ಇದೇ ಸಂದರ್ಭ ಕರೆ ನೀಡಿದರು.
ಸರ್ಕಾರಿ ನೌಕರರಿಗೆ ಸಂಬಂಧಿಸಿ ದಂತೆ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೇ ಪದ್ಧತಿಯನ್ನು ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಅವರ ಬೇಡಿಕೆಯನ್ನು ಗೌರವಿಸುತ್ತೇನೆ. ಈ ಸಂಬಂಧ ಸಮಿತಿಯನ್ನು ರಚನೆ ಮಾಡಿ ಸಚಿವ ಸಂಪುಟದಲ್ಲಿಡಲಾಗು ವದು ಎಂದು ಕುಮಾರಸ್ವಾಮಿ ತಿಳಿಸಿದರು.
ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಮಾತನಾಡಿ ಕೊಡಗಿನ ಅಭಿವೃದ್ಧಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಯಾರೂ ಸಹ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಈಗಾಗಲೇ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆ ಮಾಡಲಾಗಿದ್ದು, ಕೊಡಗು ಅಭಿವೃದ್ಧಿಗೆ ಶ್ರಮಿಸಲಾಗುವದು. ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚಿನ ಹಣ ಬಿಡುಗಡೆಯಾಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ತಿಂಗಳಿಗೆ 55 ಮನೆ: ವಸತಿ ಸಚಿವ ಯು.ಟಿ. ಖಾದರ್ ಮಾತನಾಡಿ ಕೊಡಗಿನ ಸಂತ್ರಸ್ತರ ಕಣ್ಣೀರು ಒರೆಸಲು ಸರ್ಕಾರ ಸದಾ ಸಿದ್ಧವಾಗಿದೆ. ಸಂತ್ರಸ್ತರಿಗೆ ಉತ್ತಮ ಮನೆ ನಿರ್ಮಾಣ ಮಾಡ ಬೇಕು ಎಂಬ ಉದ್ದೇಶದಿಂದ 9.85 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸ ಲಾಗುತ್ತದೆ. ಒಂದು ತಿಂಗಳಲ್ಲಿ 55 ಮನೆಗಳನ್ನು ನಿರ್ಮಾಣ ಮಾಡಲಾಗು ವದು ಎಂದು ಸಚಿವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಮಾತನಾಡಿ ಕೊಡಗು ಪುನರ್ ನಿರ್ಮಾಣ ಸೇರಿದಂತೆ ಸರ್ಕಾರ ಎಲ್ಲಾ ರೀತಿಯ ಕ್ರಮಕೈಗೊಂಡಿದೆ. ಈಗಾಗಲೇ ಪ್ರಾಧಿಕಾರ ರಚನೆ ಮಾಡಲಾಗಿದ್ದು, ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಮಾತನಾಡಿ, ಕೇಂದ್ರ ಸರ್ಕಾರದಿಂದ ರೂ. 546 ಕೋಟಿ ಬಿಡುಗಡೆಯಾಗಿದ್ದು, ಪ್ರವಾಹ ಮತ್ತು ಭೂಕುಸಿತ ಪ್ರದೇಶಗಳಿಗೆ ನೀಡಲಾಗಿದೆ. ಇನ್ಫೋಸಿಸ್ ಸುಧಾಮೂರ್ತಿ ಅವರು ರೂ. 25 ಕೋಟಿ ಮನೆ ನಿರ್ಮಾಣಕ್ಕೆ ನೀಡಲಿದ್ದಾರೆ. ಮತ್ತೊಂದು ಸಂಸ್ಥೆ ಮನೆ ನಿರ್ಮಾಣಕ್ಕೆ ಕೈಜೋಡಿಸಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದಿಂದ ರೂ. 100 ಕೋಟಿ ಚೆಕ್ನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂಘದ ಅಧ್ಯಕ್ಷ ರಾಮು ಹಾಗೂ ಬಳಗ ಹಸ್ತಾಂತರಿಸಿದರು. ಪ್ರಕೃತಿ ವಿಕೋಪ ಸಂಬಂಧ ಜಿಲ್ಲಾಡಳಿತ ಹೊರ ತಂದಿರುವ ಕಿರುಚಿತ್ರ ಪ್ರದರ್ಶಿಸಲಾಯಿತು. ಪ್ರವಾಸೋದ್ಯಮ ಇಲಾಖೆಯ ಮೂರು ಮಿನಿ ಬಸ್ಗಳನ್ನು ಇದೇ ವೇಳೆ ಜಿಲ್ಲೆಗೆ ನೀಡಲಾಯಿತು.
ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಶಾಸಕ ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಎಸ್.ಎಲ್. ಬೋಜೇಗೌಡ, ಉಸ್ತುವಾರಿ ಕಾರ್ಯದರ್ಶಿ ವಿ. ಅನ್ಬುಕುಮಾರ್, ಮೈಸೂರು ವಲಯದ ಐಜಿಪಿ ಶರತ್ಚಂದ್ರ, ಸುಮನ್ ಡಿ.ಪಿ., ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ. ರಾಮು ಇತರ ಜನಪ್ರತಿನಿಧಿ ಗಳು, ವಿವಿಧ ಮುಖಂಡರು ಇದ್ದರು.
ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸ್ವಾಗತಿಸಿದರು. ಮಾದಾಪುರ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ನಿರೂಪಿಸಿ, ವಂದಿಸಿದರು.