ಮಡಿಕೇರಿ, ಡಿ. 7: ಪುಟ್ಟ..., ಪುಟ್ಟ ಬಡ ಕೂಲಿ ಕಾರ್ಮಿಕರ ಮಕ್ಕಳು ಅಕ್ಷರ ಕಲಿಯುವ ಸರಕಾರಿ ಶಾಲೆಗೆ ನುಗ್ಗಿ ತರಗತಿಯೊಳಗಿದ್ದ ಪುಟ್ಟ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಭೂಪನೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಪ್ರಸಂಗ ನಡೆದಿದೆ.ಬೇತ್ರ್ರಿ ಗ್ರಾಮ ನಿವಾಸಿ ಆಟೋ ಚಾಲಕನಾಗಿದ್ದ ರಜಾಕ್ ಎಂಬಾತ ತನ್ನ ಮಾರುತಿ ಕಾರಿನಲ್ಲಿ (ಕೆಎ 13 ಎಂ2961) ಮಡಿಕೇರಿ ಕಡೆಗೆ ಹೋಗಿ ಬರುವಾಗ ಹಾಕತ್ತೂರು, ಕಗ್ಗೋಡ್ಲು ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ವಿದ್ಯಾರ್ಥಿನಿಯರನ್ನು ಛೇಡಿಸುತಿದ್ದನೆನ್ನಲಾಗಿದೆ. ಮೊನ್ನೆ ಬೆಳಿಗ್ಗೆ ಈತ ಕಗ್ಗೋಡ್ಲು ಪ್ರಾಥಮಿಕ ಶಾಲೆಗೆ ಹೋಗಿದ್ದಾನೆ ಶಾಲೆಯಲ್ಲಿ ಬೆಳಿಗ್ಗೆ 8.30ರ ವೇಳೆಗೆ ನಾಲ್ಕೈದು ಪುಟ್ಟ ವಿದ್ಯಾರ್ಥಿನಿಯರು ಇದ್ದರು. ಅವರ ಬಳಿ ಶಿಕ್ಷಕರು ಎಷ್ಟೊತ್ತಿಗೆ ಬರುತ್ತಾರೆಂದು ಕೇಳಿದ್ದಾನೆ. ಮಕ್ಕಳು 9.30 ಆಗುತ್ತದೆ ಎಂದು ಹೇಳಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಂಡ ಈತ ಮಕ್ಕಳನ್ನು ತರಗತಿಯೊಳಗೆ ಕೂರಿಸಿಕೊಂಡು ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಪುಟ್ಟ ಮಕ್ಕಳು ರಾತ್ರಿ ಕಾರು ಸಂಖ್ಯೆ ಸಹಿತ ಪೋಷಕರ ಗಮನಕ್ಕೆ ತಂದಾಗ ಪೋಷಕರು ಗ್ರಾಮಸ್ಥರಿಗೆ ಮಾಹಿತಿ ನೀಡಿ ಪೊಲೀಸರಿಗೂ ಮಾಹಿತಿ ನೀಡಿದ್ದು, ಪೊಲೀಸರ ಸಹಿತ ಗ್ರಾಮಸ್ಥರು ಈತನ ಬರುವಿಕೆಗೆ ಕಾದು ಕುಳಿತಿದ್ದಾರೆ. ಆದರೆ ನಿನ್ನೆ ಆತ ಬರಲಿಲ್ಲ.

ಇಂದು ಬೆಳಿಗ್ಗೆ ಈತನ ಕಾರು ಹಾಕತ್ತೂರು ಬಳಿ ಬಂದಾಗ ಅಲ್ಲಿನವರು ಉಳಿದವರಿಗೆ ಮಾಹಿತಿ ನೀಡಿದ್ದಾರೆ. ಎಲ್ಲರೂ ಬೆಳಿಗ್ಗೆಯಿಂದ ಕಾದು ಕುಳಿತಿದ್ದಾರೆ. ಸಂಜೆ 4 ಗಂಟೆ ವೇಳೆಗೆ ಕಾರು ಮಡಿಕೇರಿಯಿಂದ ವಾಪಸ್ಸಾಗುತ್ತಿದ್ದ ಸಂದರ್ಭ ಹಾಕತ್ತೂರು ಬಳಿ ಅಡ್ಡಗಟ್ಟಿದ್ದಾರೆ. ಶಾಲಾ ಮಕ್ಕಳನ್ನು ಕರೆಸಿ ವಿಚಾರಿಸಿದಾಗ ಅವರುಗಳು ಈತನೇ ಕಿರುಕುಳ ನೀಡಿದ್ದಾಗಿ ಹೇಳಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿ ಗ್ರಾಮಾಂತರ ಪೊಲೀಸರ ವಶಕ್ಕೊಪ್ಪಿಸಲಾಗಿದೆ.

ಇಂದು ಮುಖ್ಯಮಂತ್ರಿ ಆಗಮಿಸಿದ್ದ ಹಿನ್ನೆಲೆಯಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳು ಅಲ್ಲಿಗೆ ತೆರಳಿದ್ದರಿಂದ ರಾತ್ರಿ 9 ಗಂಟೆ ಕಳೆದರೂ, ಮೊಕದ್ದಮೆ ದಾಖಲಾಗಲಿಲ್ಲ. ಅಲ್ಲದೆ, ಪುಟ್ಟ ವಿದ್ಯಾರ್ಥಿನಿಯರೂ ಕೂಡ ರಾತ್ರಿವರೆಗೆ ಠಾಣೆಯಲ್ಲಿ ಇದ್ದರು. ಅವರುಗಳನ್ನು ನಾಳೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವದಾಗಿ ಹೇಳಿ ರಾತ್ರಿ ವೇಳೆ ಮನೆಗೆ ಕಳುಹಿಸಲಾಯಿತು. ಈತ ಬೇತ್ರಿಯಲ್ಲಿ ಆಟೋ ಚಾಲಿಸುವ ಸಂದರ್ಭ ಕೂಡ ಹೆಣ್ಣುಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಸುಮನ ಡಿ.ಪಿ. ಅವರು, ಈ ಬಗ್ಗೆ ದೂರು ದಾಖಲಾಗಿದೆ. ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವದಾಗಿ ತಿಳಿಸಿದ್ದಾರೆ. ಗ್ರಾಮಸ್ಥರು, ಗ್ರಾ.ಪಂ. ಸದಸ್ಯರುಗಳು ತಡರಾತ್ರಿವರೆಗೂ ಠಾಣೆ ಎದುರು ಜಮಾಯಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದುದು ಕಂಡುಬಂದಿತು.