ಮಡಿಕೇರಿ, ಡಿ. 7: ಕೊಡಗು ಜಿಲ್ಲೆಯಲ್ಲಿ ಉದ್ಯಮಗಳನ್ನು ಸ್ಥಾಪಿಸಲು ವಿಫುಲ ಅವಕಾಶಗಳಿದ್ದು, ಇಲ್ಲಿನ ಸಂಪನ್ಮೂಲ ಕ್ರೋಢೀಕರಿಸಿಕೊಂಡು ಇಲ್ಲಿಯೇ ಕೈಗಾರಿಕೋದ್ಯಮಗಳನ್ನು ಸ್ಥಾಪಿಸಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿಯನ್ನು ಬಲಗೊಳಿಸುವಂತೆ ಹಿರಿಯ ಅಧಿಕಾರಿಗಳು ಕರೆ ನೀಡಿದರು.ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಕೂರ್ಗ್ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೈಗಾರಿಕಾ ಅಭಿವೃದ್ಧಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಹಣಕಾಸು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಶಿವಪ್ರಕಾಶ್ ಅವರು ಮುಂದಿನ ವರ್ಷದಲ್ಲಿ ಸಂಸ್ಥೆ 60ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಶೇಷತೆ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಉದ್ದಿಮೆಗಳನ್ನು ಕಲ್ಪಿಸಿಕೊಡಲು ಯೋಜನೆ ರೂಪಿಸಲಾಗುತ್ತಿದೆ. ಹಿಂದೆ ಸಂಸ್ಥೆಯಿಂದ ನೀಡಲಾಗುತ್ತಿದ್ದ ಸಾಲಕ್ಕೆ ಶೇ.20ರಿಂದ 24ರಷ್ಟು ಬಡ್ಡಿ ವಿಧಿಸಲಾಗುತ್ತಿತ್ತು. ಇದೀಗ ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು. ಕೊಡಗು ಜಿಲ್ಲೆಗೆ 2165 ವಿವಿಧ ಘಟಕಗಳ ಸ್ಥಾಪನೆಗೆ ವರ್ಷದಲ್ಲಿ ರೂ. 200 ಕೋಟಿ ಸಾಲ ನೀಡಲಾಗಿದೆ. ರಾಜ್ಯದ ಇತರ ಜಿಲ್ಲೆಗಳಿಗೆ

(ಮೊದಲ ಪುಟದಿಂದ) ಹೋಲಿಸಿದರೆ ಇದು ತೀರಾ ಕಡಿಮೆ. ಇಲ್ಲಿ ಸಾಕಷ್ಟು ಅನುಕೂಲತೆಗಳಿದ್ದು, ಉದ್ದಿಮೆಗಳನ್ನು ಸ್ಥಾಪಿಸುವಂತೆ ಹೇಳಿದರು. ಕಾಫಿ ಉದ್ದಿಮೆ ಕಾರ್ಮಿಕರ ಕೊರತೆ, ಯುವ ಪೀಳಿಗೆಯ ನಿರಾಸಕ್ತಿ, ಬೆಳೆ- ಬೆಲೆ ಕುಸಿತದಿಂದಾಗಿ ಸಂಕಷ್ಟದಲ್ಲಿದೆ. ಹಾಗಾಗಿ ಬೇರೆ ರೀತಿಯ ಉತ್ಪಾದನಾ ಚಟುವಟಿಕೆಗಳೊಂದಿಗೆ ಉದ್ದಿಮೆಗಳನ್ನು ಸ್ಥಾಪಿಸಬಹುದಾಗಿದೆ. ಪ್ರವಾಸೋದ್ಯಮಕ್ಕೆ ಇಲ್ಲಿನ ಪರಿಸರ ಕೂಡ ಪೂರಕವಾಗಿದ್ದು, ಮೂಲಭೂತ ಸೌಕರ್ಯಗಳೊಂದಿಗೆ ಸ್ಥಾಪನೆ ಮಾಡಬಹುದಾಗಿದೆ. ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಸಾಲದ ಭದ್ರತೆಗಾಗಿ ಕಾಫಿ ತೋಟಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಸಮಾವೇಶ ಉದ್ಘಾಟಿಸಿದ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ರಮೇಶ್ ಮೂರ್ತಿ ಅವರು ಮಾತನಾಡಿ, ದೊಡ್ಡ ಉದ್ಯಮಗಳಲ್ಲಿ ಪೈಪೋಟಿ ಹಾಗೂ ಜಾಗತೀಕರಣದಿಂದಾಗಿ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ ದೇಶದಲ್ಲಿ ಸಣ್ಣ ಕೈಗಾರಿಕೆಗಳ ಅವಲಂಬನೆ ಹೆಚ್ಚಾಗಿದ್ದು, ಇದರಿಂದಾಗಿ ಉದ್ಯೋಗಾವಕಾಶ ಕೂಡ ಸಿಗಲಿದೆ ಎಂದರು. ಈ ಸಾಲಿನ ಕೈಗಾರಿಕಾ ನೀತಿಯಲ್ಲಿ 4 ವಲಯಗಳನ್ನಾಗಿ ಮಾಡಲಾಗಿದ್ದು, ಕೊಡಗಿನಲ್ಲಿ ವೀರಾಜಪೇಟೆ ತಾಲೂಕು ವಲಯ 1 ಹಾಗೂ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕುಗಳು ವಲಯ 2ಕ್ಕೆ ಒಳಪಡಲಿದೆ. ವಲಯ ಒಂದು ಅತಿ ಹಿಂದುಳಿದ ತಾಲೂಕು ಎಂದೂ, ವಲಯ 2 ಹಿಂದುಳಿದ ತಾಲೂಕು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ವಲಯ 1 ಹಾಗೂ 2ಕ್ಕೆ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಮೈಕ್ರೋ ಮ್ಯಾನ್ಯುಫಾಕ್ಚರಿಂಗ್ ಇಂಡಸ್ಟ್ರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪಡೆದ ಸಾಲಕ್ಕೆ ಅತಿ ಹೆಚ್ಚಿನ ಮೊತ್ತದ ಸಹಾಯಧನ ದೊರಕಲಿದೆ ಎಂದು ಮಾಹಿತಿ ನೀಡಿದರು.

ಅತಿಹೆಚ್ಚು ವಿದ್ಯುತ್ ಬಳಕೆ ಮಾಡುವ ಕೈಗಾರಿಕಾ ಉದ್ದಿಮೆಗಳ ವಿದ್ಯುತ್ ಬಿಲ್ ತೆರಿಗೆಯನ್ನು ಮರಳಿ ಪಡೆಯುವ ಅವಕಾಶವಿದೆ. ಘಟಕಗಳ ಯೋಜನಾ ವೆಚ್ಚಗಳಿಗೆ ರೂ. 2 ಲಕ್ಷದವರೆಗೆ ಸಹಾಯಧನ ಸಿಗಲಿದೆ. ಪರಿಶಿಷ್ಟರಿಗೆ ಕೈಗಾರಿಕೆಗೆ ಜಾಗ ಖರೀದಿಗೆ ಶೇ.50ರಷ್ಟು ಸಹಾಯಧನ ನೀಡಲಾಗುವದೆಂದು ತಿಳಿಸಿದರು. ಜಿಲ್ಲೆಯಲ್ಲಿ ಮತ್ತೊಂದು ಕೈಗಾರಿಕಾ ಬಡಾವಣೆ ಸ್ಥಾಪನೆಗೆ ಜಾಗ ಪರಿಶೀಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಉದ್ದಿಮೆ ಸ್ಥಾಪನೆಗೆ ಸಾಕಷ್ಟು ಅವಕಾಶಗಳಿವೆ. ಸಂಬಾರ ಪದಾರ್ಥಗಳು ಹಾಗೂ ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಹೇರಳವಾದ ಸಂಪನ್ಮೂಲಗಳಿವೆ. ಅಲ್ಲದೆ ಇಲ್ಲಿನ ಸಂಬಾರ ಪದಾರ್ಥ ಹಾಗೂ ಆಹಾರೋತ್ಪನ್ನಗಳಿಗೆ ಬಹು ಬೇಡಿಕೆ ಇದೆ. ಆಹಾರ ಸಂಸ್ಕರಣ ಘಟಕಗಳಿಗೆ ಶೇ. 35ರಷ್ಟು ಸಹಾಯಧನ ಸಿಗಲಿದೆ ಎಂದು ಮಾಹಿತಿ ನೀಡಿದರು.

ಇಲ್ಲಿನ ಉದ್ಯಮಿಗಳು ಹೊರ ಜಿಲ್ಲೆಗಳಿಗೆ ತೆರಳಿ ಉದ್ದಿಮೆ ಸ್ಥಾಪಿಸುವದಕ್ಕಿಂತ ಇಲ್ಲಿಯೇ ಸ್ಥಾಪಿಸಿ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸುವಂತೆ ಹೇಳಿದರು. ರಾಜ್ಯ ಹಣಕಾಸು ಸಂಸ್ಥೆಯ ಶಾಖಾ ವ್ಯವಸ್ಥಾಪಕ ಶ್ರೀನಿವಾಸ್ ಸ್ವಾಗತಿಸಿದರು. ಸಿಬ್ಬಂದಿ ಯಶಿಕಾ ಪ್ರಾರ್ಥಿಸಿದರು. ವಿವಿಧೆಡೆಗಳಿಂದ ಆಗಮಿಸಿದ್ದ ಉದ್ಯಮಿಗಳು ಸಂವಾದದ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಂಡರು.