ಒಡೆಯನಪುರ, ಡಿ. 7: ಕೊಡ್ಲಿಪೇಟೆ ಕಿರಿಕೊಡ್ಲಿ ಎಸ್‍ಜಿಎಸ್ ವಿದ್ಯಾಪೀಠದ ಭದ್ರಮ್ಮ ಮಹಾಂತಪ್ಪ ಪ್ರಾರ್ಥನಾ ಮಂದಿರದಲ್ಲಿ ತಾ. 8 ರಂದು (ಇಂದು) ನಡೆಯಲಿರುವ ಮಕ್ಕಳ 2ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕಸಾಪ, ಕೊಡ್ಲಿಪೇಟೆ ಹೋಬಳಿ ಕಸಾಪ ಘಟಕ ಹಾಗೂ ಕೊಡ್ಲಿಪೇಟೆ ಕಿರಿಕೊಡ್ಲಿ ಎಸ್‍ಜಿಎಸ್ ವಿದ್ಯಾಪೀಠ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ 2ನೇ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯಾಪೀಠದ ಭದ್ರಮ್ಮ ಮಹಾಂತಪ್ಪ ಪ್ರಾರ್ಥನಾ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಪಟ್ಟಣದ ಮುಖ್ಯ ರಸ್ತೆಯಿಂದ ಸಮ್ಮೇಳನ ನಡೆಯುವ ವಿದ್ಯಾಪೀಠದವರೆಗೆ ಎರಡು ಬದಿಗಳಲ್ಲಿ ತಳಿರು ತೋರಣ ಕಟ್ಟಲಾಗಿದೆ. ವಿದ್ಯಾಪೀಠದ ಹೆಬ್ಬಾಗಿಲಿನಲ್ಲಿ ಸ್ವಾಗತ ದ್ವಾರವನ್ನು ನಿರ್ಮಿಸಲಾಗಿದೆ. 2 ಸಾವಿರ ಅಸನಗಳ ವ್ಯವಸ್ಥೆ ಮಾಡಲಾಗಿದೆ. ಕೊಡಗು ಜಿಲ್ಲೆ ಸೇರಿದಂತೆ ಪಕ್ಕದ ಜಿಲ್ಲೆಯ ಸಕಲೇಶಪುರ ಮತ್ತು ಅರಕಲಗೂಡು ಕಡೆಗಳಿಂದ ಅಂದಾಜು 2 ಸಾವಿರಕ್ಕಿಂತ ಹೆಚ್ಚಿನ ಮಕ್ಕಳು ಪಾಲ್ಗೊಳ್ಳುವರೆಂದು ಸಂಘಟಕರ ನಿರೀಕ್ಷೆಯಾಗಿದೆ.