ಮಡಿಕೇರಿ, ಡಿ.7: ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಮಾನವ ಕುಲಕ್ಕೆ ನೀಡಿರುವ ಶಾಂತಿಯ ಸಂದೇಶವನ್ನು ಜನ ಸಾಮಾನ್ಯರಿಗೆ ಮನವರಿಕೆ ಮಾಡುವ ದಿಸೆಯಲ್ಲಿ ಡಿ.9ರಂದು ನಾಪೋಕ್ಲುವಿನಲ್ಲಿ ವಿಶ್ವ ಪ್ರವಾದಿಯ ಸಂದೇಶ ರ್ಯಾಲಿ ಹಾಗೂ ಸೌಹಾರ್ದ ಸಮ್ಮೇಳನ ನಡೆಯಲಿದೆ.
ಗುರುವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಾಲ್ಕುನಾಡು ಮುಸ್ಲಿಂ ಜಮಾಅತ್ ಒಕ್ಕೂಟದ ಅಧ್ಯಕ್ಷ ಪಿ.ಎಂ. ಖಾಸಿಂ ಅವರು, ಗುಲಾಮಗಿರಿಯ ವಿರುದ್ಧ ಹೋರಾಟ ನಡೆಸಿದ ಪ್ರವಾದಿಯವರು ಗುಲಾಮರನ್ನು ತಮ್ಮ ಸಹೋದರರಂತೆ ಕಂಡರು. ಮಹಿಳೆಯರಿಗೆ ವಿಮೋಚನೆ ಕೊಡಿಸಿದರು. ಕೂಲಿ ಕಾರ್ಮಿಕರ ಶ್ರಮದ ಬೆವರು ಆರುವ ಮುನ್ನವೇ ಅವರಿಗೆ ಅವರ ದುಡಿಮೆಯ ಫಲ (ವೇತನ) ನೀಡಬೇಕೆಂಬ ಸಂದೇಶವನ್ನು ಸಾರಿದ್ದರು. ಸಾಮಾಜಿಕ ಪರಿವರ್ತನೆಯ ಅವರ ಹಲವಾರು ವಿಚಾರಗಳನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಸಂವಿಧಾನದಲ್ಲಿ ಅಳವಡಿಸಿದರು ಎಂದು ತಿಳಿಸಿದರು.
ಪ್ರವಾದಿಯವರ ಸಂದೇಶವನ್ನು ಎಲ್ಲಾ ಸಮುದಾಯದ ಜನ ಸಾಮಾನ್ಯರಿಗೂ ತಿಳಿಯಪಡಿಸುವ ನಿಟ್ಟಿನಲ್ಲಿ ಡಿ.9ರಂದು ಮಧ್ಯಾಹ್ನ 1ಗಂಟೆಗೆ ನಾಪೋಕ್ಲು ಹಳೆ ತಾಲೂಕಿನಿಂದ ಮಾರುಕಟ್ಟೆ ಆವರಣ ದವರೆಗೆ ಪ್ರವಾದಿಯವರ ಸಂದೇಶ ಸಾರುವ ಸಂದೇಶ ರ್ಯಾಲಿಯನ್ನು ಆಯೋಜಿಸಲಾಗಿದ್ದು, 3 ಗಂಟೆಗೆ ಸಭಾ ಕಾರ್ಯಕ್ರಮ ಆಯೋಜಿಸ ಲಾಗಿದೆ ಎಂದು ತಿಳಿಸಿದರು.
ತಮ್ಮ ಅಧ್ಯಕ್ಷತೆಯಲ್ಲಿ ನಡೆಯವ ಸೌಹಾರ್ದ ಸಮ್ಮೇಳನದಲ್ಲಿ ಕುರ್ಆನ್ನ್ನು ಅಧ್ಯಯನ ಮಾಡಿರುವ ವಿವಿಧ ಧರ್ಮಗಳ ಪ್ರಮುಖರು ಉಪನ್ಯಾಸ ನೀಡಲಿದ್ದಾರೆ. ಅದರಲ್ಲಿ ಪ್ರಮುಖವಾಗಿ ಬೆಂಗಳೂರಿನ ಹೈಕೋರ್ಟ್ ವಕೀಲ ಅನಂತ ನಾಯಕ್, ಪಾರ್ವತೀಶ್ ಬಿಳಿದಾಲೆ, ಸುಳ್ಯ ಬಂಟಮಲೆ ಅಕಾಡೆಮಿಯ ಎ.ಕೆ. ಹಿಮಕರ, ಕುಶಾಲನಗರ ಸಿಎಸ್ಐ ಮಂಡೋ ಸ್ಮಾರಕ ಚರ್ಚ್ನ ರೆ| ಹೇಮಚಂದ್ರಕುಮಾರ್, ಬೆಂಗಳೂರಿನ ಶಾಫಿ ಸಅದಿ, ಮಂಗಳೂರಿನ ಅನೀಸ್ ಕೌಸರ್ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷ ನಾಸಿರ್ ಮಕ್ಕಿ ಕುಂಜಿಲ, ಸಂಚಾಲಕ ಪಿ.ಎಂ. ಹನೀಫ್ ಚೆರಿಯಪರಂಬು, ಹಂಸ ಪಡಿಯಾಣಿ ಹಾಗೂ ಸಲೀಂ ಕಲ್ಲುಮೊಟ್ಟೆ ಉಪಸ್ಥಿತರಿದ್ದರು.