ಮಡಿಕೇರಿ, ಡಿ. 8: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗಾಗಿ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮೂರು ಮಿನಿ ಬಸ್‍ಗಳ ಸೌಲಭ್ಯ ಕಲ್ಪಿಸಲಾಗಿದೆ. ರಾಜ್ಯ ಪ್ರವಾಸೋದ್ಯಮ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಉಪಸ್ಥಿತಿಯಲ್ಲಿ ನಿನ್ನೆ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಈ ಮಿನಿ ಬಸ್‍ಗಳಿಗೆ ಚಾಲನೆ ನೀಡಿದರು.

ಆ ಪ್ರಕಾರ ಪ್ರವಾಸಿ ಬಸ್ ಪ್ರಯಾಣಿಕರು ಕೊಡಗಿನ ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಲು ದಿನವೊಂದಕ್ಕೆ ರೂ. 400 ರಂತೆ ಪ್ರತಿಯೊಬ್ಬ ಪಾವತಿಸಬೇಕಿದೆ. ಮುಖ್ಯವಾಗಿ ಪ್ರವಾಸೋದ್ಯಮದಿಂದ ಮೂರು ಮಾರ್ಗಗಳನ್ನು ಗುರುತಿಸಿದ್ದು, ಈ ಎಲ್ಲ ಮಾರ್ಗಗಳಲ್ಲಿ ಸಂದರ್ಶಿಸಲು ಒಬ್ಬೊಬ್ಬರು ತಲಾ ರೂ. 400 ರಂತೆ ಒಟ್ಟು 1200 ಮೊತ್ತ ಪಾವತಿಸಬೇಕಿದೆ.

ಮೊದಲ ಆದ್ಯತೆಯೊಂದಿಗೆ ಮಡಿಕೇರಿ ನಗರದಿಂದ ಭಾಗಮಂಡಲ, ತಲಕಾವೇರಿ ಕ್ಷೇತ್ರಗಳು, ಪಾಡಿ ಇಗ್ಗುತ್ತಪ್ಪ ದೇವಾಲಯ, ನಾಲ್ಕುನಾಡು ಅರಮನೆ ಸಂದರ್ಶಿಸಬಹುದಾಗಿದೆ. ಇನ್ನು ಎರಡನೆಯ ಮಾರ್ಗವಾಗಿ ಅಬ್ಬಿಜಲಪಾತ, ಮಡಿಕೇರಿ ಅರಮನೆ, ಗದ್ದುಗೆ ಹಾಗೂ ಮಾಂದಲಪಟ್ಟಿ, ರಾಜಾಸೀಟ್ ಇತ್ಯಾದಿ ನೋಡಬಹುದಾಗಿದೆ.

ಅಂತೆಯೇ ಮೂರನೆಯ ಮಾರ್ಗದ ಪ್ರವಾಸದಲ್ಲಿ ಕುಶಾಲನಗರ ವ್ಯಾಪ್ತಿಯ ನಿಸರ್ಗಧಾಮ, ದುಬಾರೆ ಹಾಗೂ ಬೈಲುಕುಪ್ಪೆ ಗೋಲ್ಡನ್ ಟೆಂಪಲ್, ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಅನುಕೂಲತೆ ಕಲ್ಪಿಸಲಾಗಿದೆ. ಈ ತಾಣಗಳ ಸಂದರ್ಶಿಸಲು ಇಲಾಖೆಯಿಂದ ‘ಕೊಡಗು ದರ್ಶನ’ ಹೆಸರಲ್ಲಿ ಪ್ರಯಾಣ ವ್ಯವಸ್ಥೆ ರೂಪಿಸಲಾಗಿದೆ.