ಮಡಿಕೇರಿ, ಡಿ. 7: ಕೊಡಗಿನಲ್ಲಿ ಸಂಬಂಧಿಸಿರುವ ಪ್ರಾಕೃತಿಕ ವಿಕೋಪದ ಸಂದರ್ಭ ಕೇಂದ್ರ ಸರಕಾರದಿಂದ ಎಲ್ಲ ರೀತಿ ಸ್ಪಂದಿಸಿದ್ದು, ರಾಜ್ಯದಿಂದ ಸಮರ್ಪಕ ನೆರವು ನೀಡಿಲ್ಲ ಎಂಬ ಟೀಕೆಯೊಂದಿಗೆ ಸಂಸದ ಪ್ರತಾಪ್ ಸಿಂಹ ಅಸಮಾಧಾನ ತೋಡಿಕೊಂಡಿದ್ದಾರೆ. ಪ್ರತಿಯಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ವಸತಿ ಸಚಿವರು ಮಾತಿನ ಏಟಿಗೆ ಪ್ರತಿಯೇಟು ನೀಡಿದ್ದಾರೆ.ಇಂದು ಜಂಬೂರುವಿನಲ್ಲಿ ಜಿಲ್ಲೆಯ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಭೂಮಿ ಪೂಜೆ ನೆರವೇರಿಸಿದ ಬೆನ್ನಲ್ಲೇ; ಸಮಾರಂಭದ ವೇದಿಕೆಯಲ್ಲಿ ಏನೋ ಗೊಂದಲ, ಕಸಿವಿಸಿ ಎದುರಾಯಿತು. ಸಂಸದ ಪ್ರತಾಪ್ ಸಿಂಹ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹಾಗೂ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರುಗಳ ಆಸನದತ್ತ ತೆರಳಿ ಏನೋ ಮಾಹಿತಿ ಕಲೆ ಹಾಕಿದರು.ತಮ್ಮ ಸರದಿ ಬಂದಾಗ ಮಾತು ಆರಂಭಿಸಿ ಕೇಂದ್ರ ರಕ್ಷಣಾ ಸಚಿವರ ಸಹಿತ ತಾನು ಕೊಡಗಿನ ಪ್ರಾಕೃತಿಕ ವಿಕೋಪ ಸಂದರ್ಭ ನಿರ್ವಹಿಸಿದ ಕೆಲಸಗಳು ಹಾಗೂ ಕೇಂದ್ರ ಸರಕಾರ ಕಲ್ಪಿಸಿರುವ ನೆರವಿನ ವಿವರ ನೀಡಿದರು.ಈ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಡಿಮಿಡಿಗೊಂಡಂತೆ ಕಂಡು ಬಂದರಲ್ಲದೆ, ಏನೋ ಆಕ್ಷೇಪಿಸತೊಡಗಿದರು. ಪ್ರತಿಯಾಗಿ ವಸತಿ ಸಚಿವ ಯು.ಟಿ. ಖಾದರ್ ಮಾತು ಆರಂಭಿಸಿ ಕೇಂದ್ರದ ನೆರವು ಜನರ ಹಣವೇ ಆಗಿದ್ದು, ರಾಜ್ಯಕ್ಕೆ ಭಿಕ್ಷೆಯಲ್ಲ ಎಂಬಿತ್ಯಾದಿ ಪ್ರತಿನುಡಿಯಾಡಿದರು.
ಬಳಿಕ ಮುಖ್ಯಮಂತ್ರಿಯ ಸರದಿ ಬಂದಾಗ ಕೇಂದ್ರ ಸರಕಾರ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಬೇಡಿಕೆಯಂತೆ ನಷ್ಟ ಪರಿಹಾರ ಕಲ್ಪಿಸದೆ ಎನ್.ಡಿ.ಆರ್.ಎಫ್. ನಿಧಿಯನ್ನು ನಿಯಮಾನುಸಾರ ಷರತ್ತು ವಿಧಿಸಿ ನೀಡಿದ್ದಾಗಿ ಸಮರ್ಥಿಸಿಕೊಂಡರು.
ಆ ಮುನ್ನ ಮಾತನಾಡಿದ್ದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು, ಕೊಡಗಿನಲ್ಲಿ 3 ಸಾವಿರಕ್ಕೂ ಅಧಿಕ ಸಂತ್ರಸ್ತರಿದ್ದು, ಲಕ್ಷಗಟ್ಟಲೆ ಎಕರೆ ಆಸ್ತಿ ಪಾಸ್ತಿ ಹಾನಿಯೊಂದಿಗೆ
ಅಪಾರ ಮೊತ್ತದ ನೆರವು ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಮಾವಣೆಗೊಂಡಿದ್ದಾಗಿ ಹೇಳಿಬಿಟ್ಟರು.
ಈ ಎಲ್ಲದರ ನಡುವೆ ಸಂಸದರ ಮಾತಿನ ನಡುವೆ ಮುಖ್ಯಮಂತ್ರಿ ಜತೆ ಪಿಸುಗುಟ್ಟ ತೊಡಗಿದ ಇತರ ಸಚಿವರು ಶಾಸಕರುಗಳು ಮೌನಕ್ಕೆ ಶರಣಾಗಿ ಬಿಟ್ಟರು! ಈ ಅಚ್ಚರಿನಡುವೆ ಆಯಾ ಮುಖಂಡರ ಮಾತಿಗೆ ರಾಜಕೀಯ ಕಾರ್ಯಕರ್ತರು ಹೋ... ಎನ್ನ ತೊಡಗಿದಲ್ಲದೆ, ಚಪ್ಪಾಳೆ ಮೂಲಕ ಮನರಂಜನೆಯಲ್ಲಿ ತೊಡಗಿದ್ದು ಸಂತ್ರಸ್ತರ ಸಭೆಯಲ್ಲಿ ಎದ್ದು ಕಾಣುವಂತಾಯಿತು.
- ಶ್ರೀಸುತ