ಮಡಿಕೇರಿ, ಡಿ. 7: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯುವದು ಸೇರಿದಂತೆ ಯಾವದೇ ರೀತಿಯ ಅಪರಾಧಗಳನ್ನು ತಡೆಯುವಲ್ಲಿ ಎಲ್ಲರೂ ಕೈಜೋಡಿಸುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಕರೆ ನೀಡಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ಮಕ್ಕಳ ವಿಶೇಷ ಪೊಲೀಸ್ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಪೊಲೀಸ್ ಕ್ಯಾಂಟಿನ್ ಮೇಲಿನ ಸಭಾಂಗಣದಲ್ಲಿ ನಡೆದ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ, ರಕ್ಷಣೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ತಡೆ ಕುರಿತು ಅರಿವು ಕಾರ್ಯಾಗಾರದಲ್ಲಿ ಪಾಲ್ಗೊಂಡು ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ಪ್ರತೀ ಡಿಸೆಂಬರ್ ಮಾಹೆಯನ್ನು ಅಪರಾಧ ತಡೆ ಮಾಸಾಚರಣೆಯಾಗಿ ಆಚರಿಸುತ್ತಾ ಬಂದಿದ್ದು, ಈ ಬಾರಿ ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಪ್ರವೃತ್ತ ರಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಮಾತನಾಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಇರುವಂತಹ ಕಾರ್ಯಕ್ರಮಗಳು ಮತ್ತು ದೌರ್ಜನ್ಯಕ್ಕೆ ಒಳಗಾದಾಗ ನೀಡುವ ಪರಿಹಾರದ ಕುರಿತು ಮಾಹಿತಿ ನೀಡಿದರು.

ಸಂತ್ರಸ್ತ ಪರಿಹಾರ ಕಾಯ್ದೆ 2011ರ ನೂತನ ತಿದ್ದುಪಡಿ ಅನ್ವಯ ಮಹಿಳೆಯರ ಮೇಲೆ ಯಾವದೇ ದೌರ್ಜನ್ಯ ನಡೆದ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ದೂರು ಸ್ವೀಕಾರವಾದ ಕೂಡಲೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತರಬೇಕಾಗಿರುವದು ಕಡ್ಡಾಯ ವಾಗಿರುತ್ತದೆ.

ಇದರ ಅನ್ವಯ ಮಧ್ಯಂತರ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ನೀಡಲಾಗುವದು ಎಂದು ಅವರು ತಿಳಿಸಿದರು.

ಪ್ರಥಮ ಮಾಹಿತಿ ವರದಿ ಬಂದ ತಕ್ಷಣ ಸಂತ್ರಸ್ತರಿಗೆ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಇರುವಂತಹ ನೆರವು ಕುರಿತು ತಿಳಿಸಲು ಎಲ್ಲಾ ಪೊಲೀಸ್ ಠಾಣಾ ಅಧಿಕಾರಿಗಳು ಗಮನ ಹರಿಸಬೇಕು.

ಆ ನಿಟ್ಟಿನಲ್ಲಿ ಸಂತ್ರಸ್ತರಿಗೆ ಇದರ ಬಗ್ಗೆ ಅರಿವು ಮೂಡಿಸಿ ಸಂತ್ರಸ್ತರ ಪರಿಹಾರ ತಿದ್ದುಪಡಿ ಕಾಯ್ದೆ 2011 ರನ್ವಯ ಸಿಗುವಂತಹ ಪರಿಹಾರವನ್ನು ಸಂತ್ರಸ್ತರಿಗೆ ತಲಪಿಸಲು ಪೊಲೀಸ್ ಇಲಾಖೆಯ ಸಹಕಾರ ಅತ್ಯಗತ್ಯ ಎಂದು ಅವರು ತಿಳಿಸಿದರು.

ಪೋಕ್ಸೋ ಕಾಯ್ದೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಹಲವು ಮಾಹಿತಿಯನ್ನು ಕಾರ್ಯಾಗಾರದಲ್ಲಿ ಅವರು ನೀಡಿದರು.

ಜಿ.ಪಂ. ಸಿಇಓ ಕೆ. ಲಕ್ಷ್ಮಿಪ್ರಿಯ ಮಾತನಾಡಿ, ಪೊಲೀಸ್ ಕಾಯ್ದೆಯಲ್ಲಿ ಕಾಲ ಕಾಲಕ್ಕೆ ಆಗುವಂತಹ ತಿದ್ದುಪಡಿಗಳನ್ನು ಇಲಾಖೆ ಅಧಿಕಾರಿಗಳು ತಿಳಿದುಕೊಂಡು ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಜವಾಬ್ದಾರಿಯುತವಾಗಿ ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಂತಾಗಬೇಕು ಎಂದರು.

ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ನಾಗಪ್ಪ, ವಕೀಲರು ಹಾಗೂ ಆಂತರಿಕ ದೂರು ಸಮಿತಿ ಅಧ್ಯಕ್ಷೆ ಕೆ.ಎಂ. ಮೀನಾಕುಮಾರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಸೂರಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇತರರು ಇದ್ದರು.

ಡಿವೈಎಸ್‍ಪಿ ಸುಂದರರಾಜ್ ಅವರು ಸ್ವಾಗತಿಸಿದರು. ಪೊಲೀಸ್ ಇಲಾಖೆಯ ಎನ್. ಕುಮಾರಿ ಪ್ರಾರ್ಥಿಸಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ನಿರೂಪಿಸಿದರು.