ಮಡಿಕೇರಿ, ಡಿ. 7: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ನಡೆಯಲಿರುವ 26ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಕೊಡಗು ಜಿಲ್ಲೆಯಿಂದ 10 ಮಂದಿ ಬಾಲ ವಿಜ್ಞಾನಿಗಳು ಆಯ್ಕೆಗೊಂಡಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ವತಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರದ ರೋಟರಿ ಮಿಸ್ಟಿ ಹಿಲ್ಸ್‍ನ ಸಹಯೋಗದೊಂದಿಗೆ ಭಾರತೀಯ ವಿದ್ಯಾಭವನ, ಕೊಡಗು ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ 26ನೇ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉತ್ತಮವಾಗಿ ವೈಜ್ಞಾನಿಕ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳು ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಲಿದ್ದಾರೆ.

ಜಿಲ್ಲಾಮಟ್ಟದಿಂದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಗೊಂಡ ಶಾಲೆಯ ವಿದ್ಯಾರ್ಥಿಗಳು ತಾವು ಮಂಡಿಸಿದ ಪ್ರಬಂಧದ ವಿಷಯ ಹಾಗೂ ಮಾರ್ಗದರ್ಶಿ ಶಿಕ್ಷಕರ ವಿವರವನ್ನು ಆವರಣದಲ್ಲಿ ನೀಡಲಾಗಿದೆ.

ಕಿರಿಯರ ವಿಭಾಗದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಎನ್. ನಿರುತ್ ಮತ್ತು ಸಫಾನ್ ಬಶೀರ್ ಆರೋಗ್ಯ ಮತ್ತು ನೈರ್ಮಲ್ಯ (ಮಾರ್ಗದರ್ಶಿ ಶಿಕ್ಷಕರಾದ ಇಶ್ರತ್), ಬಿ.ಎಂ. ಸುಬ್ರಮಣಿ (ಮಾರ್ಗದರ್ಶಿ ಶಿಕ್ಷಕಿ ಶರ್ಮಿಳಾ) ಆರೋಗ್ಯ ಮತ್ತು ನೈರ್ಮಲ್ಯ, ಗಾನಶ್ರೀ ಕೆ. ಫಾತಿಮಾ ಶಾಲೆ ಕುಶಾಲನಗರ ( ಮಾರ್ಗದರ್ಶಿ ಶಿಕ್ಷಕಿ ಪ್ರಮೀಳಾ) ಕಸದಿಂದ ರಸ, ಬಿ. ವರ್ಷಿತ ಜ್ಞಾನಗಂಗಾ ಹಾರಂಗಿ (ಮಾರ್ಗದರ್ಶಿ ಶಿಕ್ಷಕಿ ಜಯಶ್ರೀ) ಕಸದಿಂದ ರಸ, ಹಿರಿಯ ವಿಭಾಗದಲ್ಲಿ ಪಿ. ಹಿತೇಶ್‍ರೈ ಜ್ಞಾನಗಂಗಾ ವಸತಿ ಶಾಲೆ ಹಾರಂಗಿ ಕಸದಿಂದ ರಸ (ಮಾರ್ಗದರ್ಶಿ ಶಿಕ್ಷಕಿ ಟಿ.ಎಸ್. ಸೌಮ್ಯ), ಹೆಚ್.ಎಸ್. ತೇಜನ ವಿದ್ಯಾನಿಕೇತನ ಶಾಲೆ ಕೂಡಿಗೆ (ವೀಣಾ) ಆರೋಗ್ಯ ಮತ್ತು ನೈರ್ಮಲ್ಯ, ಯೋಗೀಶ್ ಎನ್. ಪಾಟೀಲ್, ಸರ್ಕಾರಿ ಪ್ರೌಢಶಾಲೆ ಸುಂಟಿಕೊಪ್ಪ, (ಟಿ.ಜಿ. ಪ್ರೇಮಕುಮಾರ್) - ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ, ಹಿತೇಶ್ ಕಾರ್ಯಪ್ಪ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ (ಜಯಶ್ರೀ ಟಿ.) ಪರಿಸರ ವ್ಯವಸ್ಥೆ, ಆಯಿಷಾದಿಶಾ ಎಎಲ್‍ಜಿ ಕ್ರೆಸೆಂಟ್ ಶಾಲೆ ಮಡಿಕೇರಿ (ನೃತ್ಯ ಬಿ.ಜಿ) ಕಸದಿಂದ ರಸ ಲೇಖನ ಮುತ್ತಕ್ಕ ಎಂ.ಎಸ್. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ (ಶಿಲ್ಪಾ ಪೊನ್ನಮ್ಮ) - ಪರಿಸರ ವ್ಯವಸ್ಥೆ.

ಕಿರಿಯ ವಿಜ್ಞಾನಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದ ರೋಟರಿ ಮಿಸ್ಟಿ ಹಿಲ್ಸ್‍ನ ಅಧ್ಯಕ್ಷ ಜಿ.ಆರ್. ರವಿಶಂಕರ್ ಮಾತನಾಡಿ, ಈ ಸಮಾವೇಶ ಮಕ್ಕಳನ್ನು ಭವಿಷ್ಯದ ವಿಜ್ಞಾನಿಗಳಾಗಿ ರೂಪಿಸಲು ಸಹಕಾರಿಯಾಗಿದೆ. ಕೊಡಗಿನಲ್ಲಿ ಈ ಸಮಾವೇಶವನ್ನು ಸಂಘಟಿಸುತ್ತಿರುವ ರಾಜ್ಯ ವಿಜ್ಞಾನ ಪರಿಷತ್‍ನ ಜಿಲ್ಲಾ ಸಮಿತಿಯ ಕಾರ್ಯ ಶ್ಲಾಘನೀಯವಾದುದು ಎಂದರು.

ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ ಮಾತನಾಡಿ, ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಸರ್ಕಾರ ಶೌಚಾಲಯ ನಿರ್ವಹಣೆಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿದ್ದು, ಅದರ ಬಳಕೆಯತ್ತ ಗಮನ ಹರಿಸಬೇಕು. ಕಸ ವಿಲೇವಾರಿ ಮಾಡಿ ಸಾವಯವ ಕೃಷಿಗೆ ಬಳಸಬೇಕು ಎಂದರು. ರಾಜ್ಯ ವಿಜ್ಞಾನ ಪರಿಷತ್‍ನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಟಿ.ಜಿ. ಪ್ರೇಮಕುಮಾರ್, ಮಕ್ಕಳಿಗೆ ವಿಜ್ಞಾನ ಸಮಾವೇಶದ ವೈಜ್ಞಾನಿಕ ಅಗತ್ಯತೆ ಕುರಿತು ತಿಳಿಸಿದರು. ತೀರ್ಪುಗಾರರ ಪರವಾಗಿ ಉಪನ್ಯಾಸಕ ಜಿ. ಶ್ರೀನಾಥ್, ಸುಳ್ಯ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಕೆ. ನಾಗರಾಜ್ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಬಿ.ಕೆ. ರಾಧಾಕೃಷ್ಣ ಸಮಾವೇಶದ ಜಿಲ್ಲಾ ಸಂಯೋಜಕ ಸಿ.ಎಸ್. ಸುರೇಶ್, ಶೈಕ್ಷಣಿಕ ಸಂಯೋಜಕ ಜಿ. ಶ್ರೀಹರ್ಷ, ಮಾರ್ಗದರ್ಶಿ ಶಿಕ್ಷಕರು ಪಾಲ್ಗೊಂಡಿದ್ದರು.