ಮಡಿಕೇರಿ, ಡಿ. 7 : ಆಧ್ಯಾತ್ಮಿಕ ಗುರು ಸಯ್ಯದ್ ಅಬ್ದುರ್ರಹಮಾನ್ ಅಲ್‍ಬುಖಾರಿ ಅವರ ಹೆಸರಿನಲ್ಲಿ ಕೇರಳದ ಕಣ್ಣೂರಿನ ಎಟ್ಟಿಕುಳಂನಲ್ಲಿ ನಡೆಯುವ ತಾಜುಲ್ ಉಲಮಾ ವಾರ್ಷಿಕ ಉರೂಸ್ ಸಮಾರಂಭ ತಾ.7 ರಿಂದ ಆರಂಭಗೊಂಡಿದ್ದು, ತಾ. 9 ರವರೆಗೆ ನಡೆಯಲಿದೆ ಎಂದು ಮದನೀಸ್ ಅಸೋಸಿಯೇಷನ್‍ನ ಕೊಡಗು ಜಿಲ್ಲಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಅಬೂಬಕ್ಕರ್ ಮದನಿ ಮಾಲ್ದಾರೆ ಅವರು, ಈ ಉರೂಸ್ ಸಮಾರಂಭದಲ್ಲಿ ಕೊಡಗಿನ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಮದನಿ ಪದವೀಧರರು ಹಾಗೂ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ನುಡಿದರು.
ತಾಜುಲ್ ಉಲಮಾ ಉರೂಸ್‍ನ ಅಂಗವಾಗಿ ಈ ಮೂರು ದಿನಗಳ ಕಾಲ ಧಾರ್ಮಿಕ ಉಪನ್ಯಾಸ, ಬುರ್ದಾ ಮಜ್ಲಿಸ್, ಖತ್ಮುಲ್ ಖುರ್‍ಆನ್, ರಾತೀಬ್, ಸೌಹಾರ್ದ ಸಂಗಮ, ಮಾಲೆ ಮೌಲಿದ್ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮದನೀಸ್ ಅಸೋಸಿಯೇಷನ್‍ನ ಅಧ್ಯಕ್ಷ ಉಸ್ಮಾನ್ ಮದನಿ ಕೊಳಕೇರಿ, ಉಪಾಧ್ಯಕ್ಷ ಇಬ್ರಾಹಿಂ ಮದನಿ ಹಾಕತ್ತೂರು, ಕಾರ್ಯದರ್ಶಿ ಅಬ್ದುಲ್ ಹಮೀದ್ ಮದನಿ ಹಾಗೂ ಸದಸ್ಯ ಸಲಾಂ ಮದನಿ ಕೊಂಡಂಗೇರಿ ಉಪಸ್ಥಿತರಿದ್ದರು.