ವೀರಾಜಪೇಟೆ, ಡಿ. 7: ಮಡಿಕೇರಿ ತಾಲೂಕಿನ ನರಿಯಂದಡ ಕೇಂದ್ರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಕರೆದಿದ್ದ ಮಹಾ ಸಭೆಯನ್ನು ವೀರಾಜಪೇಟೆ ಜೂನಿಯರ್ ಸಿವಿಲ್ ನ್ಯಾಯಾಲಯ ತಾ. 21ರವರೆಗೆ ನಡೆಸದಂತೆ ತಡೆಯಾಜ್ಞೆ ನೀಡಿದೆ.

ಶಾಲೆಯಲ್ಲಿ ನಡೆದ ಆಂತರಿಕ ವಿಚಾರದಲ್ಲಿ ಹಿಂದಿನ ಅಧ್ಯಕ್ಷ ಚೇನಂಡ ಗಿರೀಶ್, ಕಾರ್ಯದರ್ಶಿ ಸುರೇಶ್ ಅವರನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಅವರುಗಳು ಈ ಬಗ್ಗೆ ವೀರಾಜಪೇಟೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಆದರೂ ಶಿಕ್ಷಣ ಸಂಸ್ಥೆಯು ತಾ. 8ರಂದು (ಇಂದು) ಎಸ್.ಎಸ್. ಸುಮಂತ್ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆಯನ್ನು ನಡೆಸುವಂತೆ ನಿಗದಿಪಡಿಸಲಾಗಿತ್ತು. ನವೆಂಬರ್ 19 ರಂದು ಮಡಿಕೇರಿ ಬಿ.ಇ.ಒ. ಶಾಲೆಯ ಆಡಳಿತ ಮಂಡಳಿಯ ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಯಾವದೇ ಸಭೆ ಸಮಾರಂಭವನ್ನು ನಡೆಸದಂತೆ ನಿರ್ದೇಶನ ನೀಡಿದ್ದರು. ಶಿಕ್ಷಣಾಧಿಕಾರಿಗಳ ಆದೇಶವನ್ನೂ ಧಿಕ್ಕರಿಸಿ ಆಡಳಿತ ಮಂಡಳಿ ಸಭೆ ನಡೆಸಲು ಮುಂದಾಗಿರುವದಕ್ಕೆ ಇದೀಗ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಮಾಜಿ ಅಧ್ಯಕ್ಷ ಗಿರೀಶ್ ಹಾಗೂ ಸುರೇಶ್ ಪರ ಕೊಕ್ಕಂಡ ಅಪ್ಪಣ್ಣ ಹಾಗೂ ಆಟ್ರಂಗಡ ಲೋಹಿತ್ ವಕಾಲತು ವಹಿಸಿದ್ದರು.