ಮಡಿಕೇರಿ, ಡಿ. 6: ಪೊಲೀಸರ ಸರ್ಪಗಾವಲು, ನಿಷೇಧಾಜ್ಞೆ ನಡುವೆ ಮಡಿಕೇರಿಯಲ್ಲಿ ಬಾಬ್ರಿ ಮಸೀದಿ ಧ್ವಂಸ ವಿಚಾರದಲ್ಲಿ ಯಾವದೇ ವಿಜಯೋತ್ಸವ, ಕರಾಳ ದಿನಾಚರಣೆ ನಡೆಯಲಿಲ್ಲ.ಬಾಬ್ರಿ ಮಸೀದಿ ಧ್ವಂಸಗೊಂಡ ಡಿ. 6 ರಂದು ಪ್ರತಿವರ್ಷ ಹಿಂದೂ ಸಂಘಟನೆಗಳಿಂದ ವಿಜಯೋತ್ಸವ ಆಚರಿಸಿಕೊಂಡು ಬರಲಾಗುತ್ತಿತ್ತು. ಕೆಲ ವರ್ಷಗಳಿಂದ ಮುಸ್ಲಿಂ ಸಂಘಟನೆಗಳು ಈ ದಿವಸವನ್ನು ಕರಾಳ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಹಲವು ಬಾರಿ ಅಶಾಂತಿ ವಾತಾವರಣಗಳೂ ನಿರ್ಮಾಣಗೊಂಡಿದ್ದವು.ಈ ಹಿನ್ನೆಲೆಯಲ್ಲಿ ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳು 114 ಸೆಕ್ಷನ್‍ನಡಿ ನಿಷೇಧಾಜ್ಞೆ ಹೇರಿದ್ದರು. ಇತ್ತ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹಾಗಾಗಿ ಯಾವದೇ ಆಚರಣೆಗಳು ನಡೆಯಲಿಲ್ಲ.

ಪೊಲೀಸ್ ಕಾವಲು: ಸಾಮಾನ್ಯವಾಗಿ ಹಿಂದೂ ಸಂಘಟನೆಗಳು ವಿಜಯೋತ್ಸವ ಆಚರಣೆ ಮಾಡುವ ಪೇಟೆ ಶ್ರೀ ರಾಮಮಂದಿರದ ಬಳಿ ಹಾಗೂ ಎಸ್‍ಡಿಪಿಐ ಸಂಘಟನೆ ಕರಾಳ ದಿನಾಚರಣೆ ಮಾಡುವ ಇಂದಿರಾ ಗಾಂಧಿ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಡಿವೈಎಸ್‍ಪಿ, ವೃತ್ತ ನಿರೀಕ್ಷಕರುಗಳು, ಠಾಣಾಧಿಕಾರಿಗಳು, ಸಂಚಾರಿ ಠಾಣಾಧಿಕಾರಿಗಳು, ಪೊಲೀಸರು ಲಾಠಿಯೊಂದಿಗೆ ನಿಂತಿದ್ದರು. ಇಂದಿರಾ ಗಾಂಧಿ ವೃತ್ತದಲ್ಲಿ ಒಂದು ಕೆಎಸ್‍ಆರ್‍ಪಿ, ಒಂದು ಡಿಎಆರ್ ತುಕಡಿ, ರಾಮಮಂದಿರ, ಜಾಮೀಯಾ ಮಸೀದಿ ಬಳಿ ಹಾಗೂ ಬನ್ನಿಮಂಟಪದ ಬಳಿ ಒಂದೊಂದು ಕೆಎಸ್‍ಆರ್‍ಪಿ ತುಕಡಿಗಳಿದ್ದವು.

(ಮೊದಲ ಪುಟದಿಂದ) ಇಂದಿರಾಗಾಂಧಿ ವೃತ್ತ, ಬನ್ನಿಮಂಟಪ, ರಾಮಮಂದಿರ, ಮಸೀದಿ ಬಳಿ ಸಿಸಿ ಕ್ಯಾಮರಾದ ಕಣ್ಗಾವಲಿದ್ದವು. ಸ್ವತಃ ಪೊಲೀಸ್ ಉನ್ನತಾಧಿಕಾರಿ ಇಂದಿರಾಗಾಂಧಿ ವೃತ್ತದಿಂದ ರಾಮಮಂದಿರದವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಬಂದೋಬಸ್ತ್ ವ್ಯವಸ್ಥೆಯಲ್ಲಿದ್ದರು.

ಮಂದಿರದಲ್ಲಿ ಭಜನೆ: ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೇಟೆ ಶ್ರೀ ರಾಮಮಂದಿರದ ಒಳಗಡೆ ಭಜನೆ ಕಾರ್ಯಕ್ರಮ ನಡೆಸಿದರು. ಕಾರ್ಯಕರ್ತರು ಹೊರಬರು ವವರೆಗೂ ಪೊಲೀಸರು ದೇವಾಲಯದ ಗೇಟ್‍ನಲ್ಲಿಯೇ ಕಾವಲಿದ್ದರು.

ನಿಷೇಧಾಜ್ಞೆ ಇದ್ದುದರಿಂದ ಕಾರ್ಯಕರ್ತರು ಕೂಡ ಗುಂಪಾಗಿ ಹೊರ ಬರಲಿಲ್ಲ. ಭಜನೆ ಮುಗಿದ ನಂತರ ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿರುವಂತೆ ಅಲ್ಲಿದ್ದ ಪೊಲೀಸರು ಘೋಷಣೆ ಕೂಗಿದರೆ ಬಂಧಿಸುವದಾಗಿ ಎಚ್ಚರಿಸಿದ್ದರಿಂದ ಕಾರ್ಯಕರ್ತರು ಸುಮ್ಮನಾದರು. ಪೊಲೀಸ್ ಕಾವಲು ಎಷ್ಟರಮಟ್ಟಿಗೆ ಇತ್ತೆಂದರೆ ಈಡುಗಾಯಿಯನ್ನು ಕೂಡ ದೇವಾಲಯದ ಹೊರಗೆ ರಸ್ತೆಯಲ್ಲಿ ಒಡೆಯಲು ಅವಕಾಶ ನೀಡಲಿಲ್ಲ. ಕೊನೆಗೆ ಆವರಣದೊಳಗಡೆಯೇ ಒಡೆಯಲಾಯಿತು. ಎಲ್ಲಿ, ಏನಾಗುತ್ತಿದೆ ಎಂಬ ಗಾಬರಿಯೊಂದಿಗೆ ನೋಡುತ್ತಿದ್ದ ಸಾರ್ವಜನಿಕರನ್ನು ಕೂಡ ಪೊಲೀಸರು ಅಟ್ಟುತ್ತಿದ್ದುದು ಕಂಡುಬಂದಿತು.

ವಿಫಲ ಯತ್ನ: ಇತ್ತ ಇಂದಿರಾಗಾಂಧಿ ವೃತ್ತ ಬಳಿಗೆ ಮಹದೇವಪೇಟೆ ಕಡೆಯಿಂದ ಎಸ್‍ಡಿಪಿಐ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆಗೆ ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಿ ಹಿಮ್ಮೆಟ್ಟಿಸಿದರು.

ಈ ಸಂದರ್ಭ ಕೆಲಕಾಲ ವಾಗ್ವಾದ ಏರ್ಪಟ್ಟಿತು. ‘ಹಿಂದೂಗಳು ಆಚರಣೆ ಮಾಡುತ್ತಿದ್ದಾರೆ, ನಮಗೂ ಅವಕಾಶ ಕೊಡಿ’ ಎಂದು ಕಾರ್ಯಕರ್ತರು ಕೇಳಿದರು. ‘ಹಿಂದೂಗಳು ದೇವಾಲಯದ ಒಳಗಡೆ ಮಾಡುತ್ತಿದ್ದಾರೆ. ನೀವುಗಳು ಕೂಡ ಮಸೀದಿ, ಸಭಾಂಗಣದಲ್ಲಿ ಮಾಡಿ; ರಸ್ತೆಗೆ ಬಂದರೆ ಬಂಧಿಸುತ್ತೇವೆ’ ಎಂದು ಸ್ಥಳದಲ್ಲಿದ್ದ ವೃತ್ತ ನಿರೀಕ್ಷಕರು ಹೇಳಿ ವಾಪಸ್ ಕಳುಹಿಸಿದರು.

ಸೋಮವಾರಪೇಟೆಯಲ್ಲಿ

ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿಯನ್ನು ಕರಸೇವಕರು ಧ್ವಂಸಗೊಳಿಸಿದ ಡಿ. 6ನ್ನು ಸೋಮವಾರಪೇಟೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ವಿಜಯೋತ್ಸವ ದಿನವನ್ನಾಗಿ ಆಚರಿಸಿದರು.

ಇಲ್ಲಿನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು, ಪಟ್ಟಣದಲ್ಲಿ ಪಟಾಕಿ ಸಿಡಿಸಿ ರಾಮಮಂದಿರ ನಿರ್ಮಾಣದ ಪರ ಘೋಷಣೆ ಕೂಗಿದರಲ್ಲದೆ, ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಸೇರಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ದರ್ಶನ್ ಜೋಯಪ್ಪ, ಅಯೋಧ್ಯೆ ಯಲ್ಲಿದ್ದ ರಾಮಮಂದಿರವನ್ನು ಕೆಡವಿ ಬಾಬರಿ ಮಸೀದಿ ನಿರ್ಮಿಸಿದ್ದನ್ನು, ಕರಸೇವಕರು ಕೆಡವಿದ ದಿನವನ್ನು ಇಡೀ ಹಿಂದೂ ಸಮಾಜ ವಿಜಯೋತ್ಸವ ದಿನವನ್ನಾಗಿ ಆಚರಿಸಬೇಕಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕೆನ್ನುವದು ಎಲ್ಲರ ಆಶಯವಾಗಿದೆ ಎಂದರು.

ವಿಜಯೋತ್ಸವದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿ ಗಳಾದ ಸುಭಾಶ್ ತಿಮ್ಮಯ್ಯ, ಎಂ.ಬಿ. ಉಮೇಶ್, ಬನ್ನಳ್ಳಿ ಗೋಪಾಲ್, ಟಿ.ಕೆ. ರಮೇಶ್, ಅರೆಯೂರು ಜಯಣ್ಣ, ಬಂಗೀರಮನೆ ಸತೀಶ್, ತಿಮ್ಮಯ್ಯ, ಮೋಹನ್, ಮಲ್ಲೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ವೀರಾಜಪೇಟೆಯಲ್ಲಿ

1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ದಿನವನ್ನು ಹಿಂದೂ ಪರ ಸಂಘಟನೆಗಳು ಇಂದು ಗಡಿಯಾರ ಕಂಬದ ಬಳಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದವು.

ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಭಾ.ಜ.ಪ. ಸಂಘಟನೆಗಳು ನಗರದ ಗಡಿಯಾರ ಕಂಬದ ಬಳಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದವು. ಆರಂಭದಲ್ಲಿ ಗಣಪತಿ ದೇವಾಲಯದಲ್ಲಿ ಶ್ರೀರಾಮನ ಹೆಸರಿನಲ್ಲಿ ಪೂಜೆ ಸಲ್ಲಿಸಿದರು.

ಭಜರಂಗದಳ ತಾಲೂಕು ಸಂಚಾಲಕ ವಿವೇಕ್ ರೈ, ಜಿಲ್ಲಾ ಮುಖಂಡ ನಾಗೇಶ್, ನಗರ ಸಂಚಾಲಕ ದಿನೇಶ್ ನಾಯರ್, ವಿಶ್ವ ಹಿಂದೂ ಪರಿಷತ್ ನಗರ ಸಂಚಾಲಕ ಪೊನ್ನಪ್ಪ ರೈ ಆರ್.ಎಸ್.ಎಸ್. ನಗರ ಪ್ರಮುಖ ಹೇಮಂತ್, ಭಾ.ಜ.ಪ. ನಗರ ಅಧ್ಯಕ್ಷ ಅನಿಲ್ ಮಂದಣ್ಣ, ಸಾಯಿನಾಥ್ ನಾಯಕ್, ರಚನ್ ಮೇದಪ್ಪ ಮುಂತಾದವರು ಪಾಲ್ಗೊಂಡಿದ್ದರು.