ಮಡಿಕೇರಿ, ಡಿ. 6: ಪ್ರಾಕೃತಿಕ ವಿಕೋಪದಿಂದ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗಾಗಿ ಪುನರ್ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡುವ ಕಾಮಗಾರಿಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಾ. 7ರಂದು (ಇಂದು) ಮಾದಾಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಪೂರ್ವ ಸಿದ್ಧತೆ ಬಿರುಸಿನಿಂದ ನಡೆದಿದೆ.ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ವಸತಿ ಸಚಿವ ಯು.ಟಿ. ಖಾದರ್, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಗ್ರಾಮೀಣ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಸೇರಿದಂತೆ ಕೊಡಗಿನ ಎಲ್ಲಾ ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ 10.45ರ ಸುಮಾರಿಗೆ ವಿಶೇಷ ಹೆಲಿಕಾಪ್ಟರ್‍ನಲ್ಲಿ ರಾಜ್ಯದ ಮುಖ್ಯಮಂತ್ರಿ ಸಹಿತ ಸಚಿವರ ತಂಡ ಗರಗಂದೂರು ಚೆನ್ನಮ್ಮ ವಿದ್ಯಾ ಸಂಸ್ಥೆಯ ಕೆಳಗಿನ (ಮೊದಲ ಪುಟದಿಂದ) ಮೈದಾನದಲ್ಲಿ ರೂಪಿಸಿರುವ ಎರಡು ಹೆಲಿಪ್ಯಾಡ್ ಗಳಲ್ಲಿ ಬಂದಿಳಿಯಲಿದ್ದಾರೆ. ಅನತಿ ದೂರದಲ್ಲಿರುವ ಮಾದಾಪುರ ಪ್ಲಾಂಟರ್ಸ್ ಕ್ಲಬ್ ಅತಿಥಿ ಗೃಹದಲ್ಲಿ ಆತಿಥ್ಯ ಸ್ವೀಕರಿಸಲಿದ್ದಾರೆ.

ಹೆಲಿಪ್ಯಾಡ್‍ನಲ್ಲಿ ಇಳಿಯುತ್ತಿ ದ್ದಂತೆಯೇ ಜಿಲ್ಲಾ ಆಡಳಿತದಿಂದ ಸ್ವಾಗತದೊಂದಿಗೆ ಕೊಡಗು ಪೊಲೀಸ್ ತಂಡದಿಂದ ಮುಖ್ಯಮಂತ್ರಿಗಳು ಗೌರವ ರಕ್ಷೆ ಸ್ವೀಕರಿಸಲು ಅಣಿಗೊಳಿಸ ಲಾಗಿದೆ. ಪ್ಲಾಂಟರ್ಸ್ ಕ್ಲಬ್‍ನಿಂದ ರಸ್ತೆ ಮಾರ್ಗವಾಗಿ ಸುಮಾರು 4 ಕಿ.ಮೀ. ದೂರದ ಜಂಬೂರುವಿನ ತೋಟಗಾರಿಕಾ ಕ್ಷೇತ್ರದ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿದ್ದಾರೆ.

ಭೂಮಿಪೂಜೆ : ಮಾದಾಪುರ ತೋಟಗಾರಿಕಾ ಕ್ಷೇತ್ರದ ಸರ್ವೆ ನಂ. 33/1ರ 50 ಎಕರೆ ವಿಶಾಲ ಪ್ರದೇಶದಲ್ಲಿ ಸಂತ್ರಸ್ತರ ವಸತಿಗಳ ಪುನರ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿರುವ ಮುಖ್ಯಮಂತ್ರಿ ಹಾಗೂ ಗಣ್ಯರು 12.15ರ ವೇಳೆಗೆ, ಅದೇ ಸ್ಥಳದಲ್ಲಿ ಸಜ್ಜುಗೊಂಡಿರುವ ವಿಶಾಲ ಸಭಾಂಗಣದಲ್ಲಿ ಸಂತ್ರಸ್ತರ ಸಭೆ ನಡೆಸಲಿದ್ದಾರೆ. ಸುಮಾರು 2000 ಮಂದಿ ಆಸನ ಸಹಿತ ಸಜ್ಜುಗೊಳಿಸಿರುವ ಕಾರ್ಯಕ್ರಮದಲ್ಲಿ ವಸತಿ ಯೋಜನೆ ಕುರಿತು ಫಲಾನುಭವಿಗಳಿಗೆ ಮಾಹಿತಿ ನೀಡಲಿದ್ದಾರೆ.

ಆಯ್ಕೆ ಪತ್ರ ವಿತರಣೆ: ಇದೇ ಸಂದರ್ಭ ಪುನರ್ವಸತಿಗಾಗಿ ಗುರುತಿಸಲ್ಪಟ್ಟಿರುವ ಸಂತ್ರಸ್ತರಿಗೆ 40x30 ವಿಸ್ತೀರ್ಣದ ನಿವೇಶನದಲ್ಲಿ ರೂ. 9.85 ಲಕ್ಷ ಮೊತ್ತದ ಎರಡು ಬೆಡ್ ರೂಂಗಳಿಂದ ಕೂಡಿದ ಮನೆ ಪಡೆಯುವ ಅರ್ಹರಿಗೆ ಆಯ್ಕೆ ಪತ್ರ ವಿತರಣೆಗೆ ಚಾಲನೆ ದೊರೆಯಲಿದೆ.

ಪೂರ್ವ ತಯಾರಿ: ತೋಟಗಾರಿಕೆ ಇಲಾಖೆಯ ನಿವೇಶನದಲ್ಲಿ ಭೂಮಿ ಪೂಜೆ ಸಂಬಂಧ ರಾಜೀವ್‍ಗಾಂಧಿ ಗ್ರಾಮೀಣ ಜನತೆಯ ಪುನರ್ವಸತಿ ಯೋಜನಾ ನಿಗಮ ವತಿಯಿಂದ ನಿವೇಶನಗಳ ಗುರುತಿಸುವಿಕೆಯೊಂದಿಗೆ, ಇಂದು ಸರ್ವೆ ಕೆಲಸ ಕೂಡ ಭರದಿಂದ ಸಾಗಿದೆ. ಈ ವೇಳೆ ಸಂಬಂಧಿಸಿದ ನಿಗಮದ ಯೋಜನಾ ನಿರ್ದೇಶಕ ಶ್ರೀನಿವಾಸ್ ಮಾಹಿತಿ ನೀಡುತ್ತಾ 2 ಬೆಡ್‍ರೂಂಗಳ ಸುಸಜ್ಜಿತ ಮನೆಗಳನ್ನು ಫಲಾನುಭವಿಗಳ ಬೇಡಿಕೆಗೆ ಅನುಗುಣವಾಗಿ ಹಂತ ಹಂತವಾಗಿ ನಿರ್ಮಿಸಿಕೊಡಲಾಗುವದು ಎಂದರು.

ರಸ್ತೆ ದುರಸ್ತಿ: ಮುಖ್ಯಮಂತ್ರಿ ಆಗಮನ ಹಿನ್ನೆಲೆಯಲ್ಲಿ ಗರಗಂದೂರು ಹೆಲಿಪ್ಯಾಡ್‍ನಿಂದ ಪ್ಲಾಂಟರ್ಸ್ ಕ್ಲಬ್ ಮುಖಾಂತರ ಮಾದಾಪುರ ಪಟ್ಟಣ ಹಾದು ಜಂಬೂರು ತೋಟಗಾರಿಕಾ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟಿರುವ ನಿವೇಶನಗಳ ಕಾರ್ಯಕ್ರಮ ಸ್ಥಳದವರೆಗೆ ಅಲ್ಲಲ್ಲಿ ರಸ್ತೆ ಬದಿ ಮಳೆಗಾಲದಲ್ಲಿ ಕುಸಿದಿದ್ದ ಮಣ್ಣು ಇತ್ಯಾದಿ ತೆರವುಗೊಳಿಸಿ, ರಸ್ತೆ ಗುಂಡಿಗಳನ್ನು ಮುಚ್ಚಿ ಡಾಮರೀಕರಣಗೊಳಿಸುವ ಕೆಲಸ ಭರದಿಂದ ಸಾಗಿದೆ.

ಅಧಿಕಾರಿಗಳ ಸಮಾಲೋಚನೆ : ಮೊನ್ನೆಯಷ್ಟೇ ಕೊಡಗು ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಜಿಲ್ಲೆಗೆ ಭೇಟಿ ನೀಡಿ, ಪೂರ್ವ ಸಿದ್ಧತಾ ಸಭೆ ನಡೆಸಿದ್ದು, ಆ ಮೇರೆಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ನೇತೃತ್ವದಲ್ಲಿ ಅಧಿಕಾರಿಗಳು ಸಮಾಲೋಚನೆ ನಡೆಸಿ ಮುಖ್ಯಮಂತ್ರಿ ಭೇಟಿ ಸಂಬಂಧ ಕಾರ್ಯಕ್ರಮ ರೂಪಿಸುವಲ್ಲಿ ಮುಂದಾಗಿದ್ದಾರೆ. ಉಪವಿಭಾಗಾಧಿಕಾರಿ ಜವರೇಗೌಡ, ಕುಶಾಲನಗರ ಡಿವೈಎಸ್‍ಪಿ ಮುರುಳಿಧರ್, ಲೋಕೋಪಯೋಗಿ ಇಂಜಿನಿಯರ್ ವಿನಯ್ ಸಹಿತ ಮಾದಾಪುರದಲ್ಲಿ ಮೊಕ್ಕಾಂ ಹೂಡಿರುವ ಇತರ ಅಧಿಕಾರಿಗಳ ತಂಡ ಮುಖ್ಯಮಂತ್ರಿ ಹಾಗೂ ಇತರ ಗಣ್ಯರ ಭೇಟಿ ಸಂಬಂಧ ಎಲ್ಲಾ ಪೂರ್ವ ಸಿದ್ಧತೆ ನೋಡಿಕೊಳ್ಳತೊಡಗಿದ್ದಾರೆ. ಬೆಳಿಗ್ಗೆ 10.45ಕ್ಕೆ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಹಿತ ಸಚಿವರುಗಳು, ಕಾರ್ಯಕ್ರಮದ ಬಳಿಕ ಭೋಜನ ಸ್ವೀಕರಿಸಿ 3 ಗಂಟೆಗೆ ಮಂಡ್ಯ ಜಿಲ್ಲೆಯತ್ತ ಮತ್ತೆ ಹೆಲಿಕ್ಯಾಪ್ಟರ್‍ನಲ್ಲಿ ಪ್ರಯಾಣ ಮುಂದುವರೆಸಲಿದ್ದಾರೆ.

ಪೊಲೀಸ್ ಭದ್ರತೆ: ರಾಜ್ಯ ಸರಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಹಿತ ಸಚಿವರ ದಂಡು ಆಗಮಿಸುವ ಬೆನ್ನಲ್ಲೇ ಪೊಲೀಸ್ ಇಲಾಖೆ ಎಲ್ಲಾ ಭದ್ರತಾ ಕ್ರಮ ಕೈಗೊಂಡಿದೆ. ಗುಪ್ತಚರ ವಿಭಾಗ ಅಧಿಕಾರಿಗಳ ಸಹಿತ ಡಿವೈಎಸ್‍ಪಿ ಮುರುಳಿಧರ್ ಎಲ್ಲವನ್ನು ಗಮನಿಸುತ್ತಿದ್ದು, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನ ನೀಡುತ್ತಿದ್ದಾರೆ.

ಸಾರ್ವಜನಿಕರಿಗೆ ಸಲಹೆ : ಸಭಾ ಕಾರ್ಯಕ್ರಮ ಸ್ಥಳದಲ್ಲೇ ಕೊಡಗಿನ ಸಂಘ - ಸಂಸ್ಥೆಗಳು, ರಾಜಕೀಯ ಮುಖಂಡರು, ಕಾರ್ಯಕರ್ತರ ಸಹಿತ ಯಾರೂ ಬೇಕಾದರೂ ತಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಮನವಿ ಸಲ್ಲಿಸಬಹುದಾಗಿದೆ. ಬದಲಾಗಿ ಹೆಲಿಪ್ಯಾಡ್ ಹಾಗೂ ವಿಶ್ರಾಂತಿ ಸ್ಥಳಗಳಲ್ಲಿ ಸಾರ್ವಜನಿಕ ಪ್ರವೇಶ ಇರುವದಿಲ್ಲ. ಸುರಕ್ಷತಾ ಸಲುವಾಗಿ ಇತ್ತ ಎಲ್ಲರೂ ಸಹಕರಿಸುವಂತೆ ಪೊಲೀಸ್ ವರಿಷ್ಠರು ಸಲಹೆ ನೀಡಿದ್ದಾರೆ.

- ಶ್ರೀಸುತ