ಮಡಿಕೇರಿ, ಡಿ.6 : ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೆಲವು ಪರಿಸರವಾದಿಗಳು ಮೈಸೂರು-ಬೆಂಗಳೂರಿನಲ್ಲಿರುವ ಕೊಡಗಿನ ಮೂಲ ನಿವಾಸಿಗಳನ್ನು ಭಾವನಾತ್ಮಕ ವಾಗಿ ಪ್ರಚೋದಿಸುವ ಮೂಲಕ ಕೊಡಗಿನ ಅಭಿವೃದ್ಧಿಗೆ ತಡೆಯೊಡ್ಡುತ್ತಿ ದ್ದಾರೆ ಎಂದು ಆರೋಪಿಸಿರುವ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ತಾ.8 ರಂದು ನಡೆಸಲು ಉದ್ದೇಶಿಸಿ ರುವ ಪ್ರತಿಭಟನೆಯನ್ನು ತೀವ್ರವಾಗಿ ವಿರೋಧಿಸುವದಾಗಿ ತಿಳಿಸಿದ್ದು, ಕುಶಾಲನಗರದಲ್ಲಿ ಪ್ರತಿರೋಧ ಒಡ್ಡುವದಾಗಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೊಡಗಿನ ಕೆಲವು ಪರಿಸರವಾದಿಗಳ ಮಾನಸಿಕ ಕೋಟಲೆ ಹೆಚ್ಚುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡುವ ಮೂಲಕ ಕೊಡಗನ್ನು ಶಿಲಾಯುಗಕ್ಕೆ ಒಯ್ಯುವ ಪ್ರಯತ್ನಗಳು ನಡೆಯುತ್ತಿದೆ ಎಂದು ಟೀಕಿಸಿದರು.

ಮೈಸೂರು- ಮಡಿಕೇರಿ ನಡುವಿನ ರಸ್ತೆಯನ್ನು ಈಗಾಗಲೇ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಮಾರ್ಗವನ್ನು ಚತುಷ್ಪಥ ರಸ್ತೆಯನ್ನಾಗಿ ಮಾರ್ಪಡಿಸಲಾಗುತ್ತಿದೆ. ಆದರೆ ಕೊಡಗಿನ ಪರಿಸರ ವಾದಿಗಳೆಂದು ಕರೆಸಿಕೊಳ್ಳುತ್ತಿರುವ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ತಮ್ಮ ನಿಲುವನ್ನೇ ಜನಾಭಿಪ್ರಾಯ ಎಂದು ಬಿಂಬಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ದಕ್ಷಿಣ ಕೊಡಗಿನ ಕೆಲವು ಮಂದಿ ತಮ್ಮ ಅಭಿಪ್ರಾಯ ಉತ್ತರ ಕೊಡಗಿನ ಎಲ್ಲಾ ಜನರ ಅಭಿಪ್ರಾಯ ಎಂದು ಬಿಂಬಿಸುತ್ತಿದ್ದಾರೆ. ಆದರೆ ಉತ್ತರ ಕೊಡಗಿನಲ್ಲಿ ಅವರ ಈ ನಿಲುವಿಗೆ ಬೆಂಬಲ ದೊರಕದ ಹಿನ್ನೆಲೆಯಲ್ಲಿ ಕೊಡಗನ್ನು ತ್ಯಜಿಸಿ ಮೈಸೂರು, ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವವರನ್ನು ಭಾವನಾತ್ಮಕ ವಾಗಿ ಬ್ಲಾಕ್‍ಮೈಲ್ ಮಾಡಿ ತಮ್ಮ ಹೋರಾಟಕ್ಕೆ ಜನಬೆಂಬಲ ಇರುವದಾಗಿ ಬಿಂಬಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದುವರೆಗೂ ಪರಿಸರವಾದಿಗಳ ಹೇಳಿಕೆಗಳನ್ನು ಕಡೆಗಣಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಇದನ್ನು ಸಹಿಕೊಂಡಿರಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಜನಾಂದೋಲನ ರೂಪಿಸುವದರೊಂದಿಗೆ ಅವರ ಈ ನಿಲುವುಗಳಿಗೆ ತೀವ್ರ ಪ್ರತಿರೋಧ ಒಡ್ಡಲಾಗುವದು ಎಂದು ಹೇಳಿದರು.

ಮೈಸೂರು- ಮಡಿಕೇರಿ ನಡುವೆ ಚತುಷ್ಪಥ ರಸ್ತೆ ನಿರ್ಮಾಣವಾದರೆ ಲಕ್ಷಾಂತರ ಮರಗಳು ನಾಶವಾಗಲಿವೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿ ಮೈಸೂರು, ಮಂಡ್ಯ, ಬೆಂಗಳೂರು, ತಮಿಳುನಾಡಿನ ಜನರಿಗೆ ಕುಡಿಯಲು ನೀರಿಲ್ಲದಂತಾಗಲಿದೆ ಎಂಬ ಹೇಳಿಕೆಗಳ ಮೂಲಕ ಹೊರಗಿನ ಜನರನ್ನು ಎತ್ತಿಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಶಶಿಧರ್, ಕೊಡಗಿನ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಲು ಕೊಡಗಿನವರೇ ಇಲ್ಲಿರುವಾಗ, ಹೊರಗಿನವರು ಮೂಗು ತೂರಿಸುವ ಅಗತ್ಯವಿಲ್ಲ ಎಂದು ಹೇಳಿದರು.

ರೈಲು, ಚತುಷ್ಪಥ ರಸ್ತೆಗಳು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ವಾಗಿದ್ದು, ಪ್ರಸಕ್ತ ಕೊಡಗು ಜಿಲ್ಲೆ ಪ್ರವಾಸೋದ್ಯಮದಲ್ಲಿ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವದರಿಂದ ಇಲ್ಲಿನ ಸಾವಿರಾರು ಮಂದಿ ಉದ್ಯೋಗ ಕಂಡುಕೊಳ್ಳಲು ಸಾಧ್ಯವಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಯಿಂದ ಜಿಲ್ಲೆಗೆ ಬರುವ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಇದರಿಂದಾಗಿ ಹಾಲಿ ಇರುವ ಹೆದ್ದಾರಿಯಲ್ಲಿ ಅಪಘಾತಗಳ ಪ್ರಮಾಣವೂ ಅಧಿಕವಾಗುತ್ತಿದೆ. ಇದನ್ನು ತಡೆಯಬೇಕಾದರೆ ವೈಜ್ಞಾನಿಕವಾಗಿ ನಿರ್ಮಾಣವಾಗುವ ಚತುಷ್ಪಥ ರಸ್ತೆಯ ಅಗತ್ಯವಿದೆ ಎಂದು ಶಶಿಧರ್ ಪ್ರತಿಪಾದಿಸಿದರು.

ಕೊಡಗಿನಲ್ಲಿ ಅನಾವೃಷ್ಟಿಯಾಗಲು ಮರ ಹನನ ಕಾರಣ ಎಂದು ಹೇಳುವ ಈ ಪರಿಸರವಾದಿಗಳು ಪ್ರಸಕ್ತ ಸುರಿದಿರುವ ಅತಿವೃಷ್ಟಿಗೂ ಮರ ಹನನ ಕಾರಣ ಎನ್ನುವ ವೈರುಧ್ಯದ ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಲ್ಲದೆ ಚತುಷ್ಪಥ ರಸ್ತೆ ನಿರ್ಮಾಣದಿಂದ ಸುಮಾರು 9 ಸಾವಿರದಷ್ಟು ಮರಗಳನ್ನು ಕಡಿಯಬೇಕಾಗಿದ್ದರೂ, ಪರಿಸರವಾದಿಗಳು ನಾಲ್ಕು ಲಕ್ಷ ಮರಗಳನ್ನು ಕಡಿಯಲಾಗುತ್ತದೆ ಎಂಬ ಅಸಂಬದ್ಧವಾದ ಹೇಳಿಕೆ ನೀಡುತ್ತಿದ್ದಾರೆ. ಪರಿಸರದ ಬಗ್ಗೆ ಅತೀವ ಕಾಳಜಿ ತೋರುವ ಈ ಪರಿಸರವಾದಿಗಳು ತಮ್ಮ ಸಂಘಟನೆಯ ಮೂಲಕ ಮರಗಿಡ ಬೆಳೆಸುವ ಎಷ್ಟು ಚಟುವಟಿಕೆಗಳನ್ನು ನಡೆಸಿದ್ದಾರೆ ಎಂದು ಶಶಿಧರ್ ಪ್ರಶ್ನಿಸಿದರು.

ವಿದೇಶಿ ದೇಣಿಗೆಗಾಗಿ ಅನಾವಶ್ಯಕವಾಗಿ ಅಭಿವೃದ್ಧಿಗೆ ಅಡ್ಡಿಪಡಿಸುವ ಮತ್ತು ಜನರಿಗೆ ತೊಂದರೆ ನೀಡುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು.

ತಾ.8ರಂದು ಆಯೋಜಿಸಿರುವ ರ್ಯಾಲಿಗೆ ಬೆಂಗಳೂರು- ಮೈಸೂರಿ ನಿಂದ ಬರುವ ವಾಹನಗಳನ್ನು ಕುಶಾಲನಗರದಲ್ಲಿಯೇ ತಡೆಯುವ ಮೂಲಕ ಸಾಂಕೇತಿಕವಾದ ಪ್ರತಿ ರೋಧವನ್ನು ಒಡ್ಡಲಾಗುವದು ಎಂದು ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಜನಾಂ ದೋಲನ ರೂಪಿಸಿ ಸಮಾನ ಮನಸ್ಕರನ್ನು ಒಗ್ಗೂಡಿಸಿ ಪಕ್ಷಾತೀತ ಹಾಗೂ ಜಾತ್ಯತೀತವಾದ ಬೃಹತ್ ಹೋರಾಟವನ್ನು ಆಯೋಜಿಸ ಲಾಗುವದು ಎಂದು ಶಶಿಧರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎಂ. ಲತೀಫ್, ಕುಶಾಲನಗರ ಎಪಿಎಂಸಿ ಅಧ್ಯಕ್ಷ ರಮೇಶ್, ಪ್ರಮುಖರಾದ ಸಾದಿಕ್, ಸಬಾಸ್ಟಿನ್ ಹಾಗೂ ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.