ಕುಶಾಲನಗರ, ನ. 25: ಶಿಬಿರಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ಎನ್.ಎಸ್. ರಮೇಶ್ ಕರೆ ನೀಡಿದ್ದಾರೆ.
ಶಿರಂಗಾಲ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2018-19ರ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಭವಿಷ್ಯದ ಉತ್ತಮ ನಾಗರಿಕರಾಗಬೇಕು. ಈ ನಿಟ್ಟಿನಲ್ಲಿ ಬದುಕು ರೂಪಿಸಿಕೊಳ್ಳಲು ಅಗತ್ಯವಾದ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕಾಗಿದೆ ಎಂದರು. ಕಾಲೇಜಿನ ಹಿರಿಯ ಉಪನ್ಯಾಸಕಿ ಕೆ.ಕೆ. ಭವಾನಿ ಮಾತನಾಡಿ, ಶಿಬಿರದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಹಂಡ್ರಂಗಿ ನಾಗರಾಜ್ ಅವರು ಶಿಬಿರಕ್ಕೆ ಶುಭ ಕೋರಿ ವಿದ್ಯಾರ್ಥಿಗಳಿಗೆ ಶಿಬಿರದ ಮೂಲಕ ನಾಯಕತ್ವದ ಗುಣ ರೂಪಿಸಿಕೊಳ್ಳಲು ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಅರಿಯುವದರೊಂದಿಗೆ ಅದಕ್ಕೆ ಪರಿಹಾರ ಕಂಡುಕೊಳ್ಳುವ ಅವಕಾಶ ಲಭಿಸುತ್ತದೆ ಎಂದರು.
ಶಿರಂಗಾಲ ಸರಕಾರ ಪದವಿಪೂರ್ವ ಕಾಲೇಜು ರಜತ ಮಹೋತ್ಸವ ಆಚರಣೆಗೆ ಸಿದ್ಧವಾಗಿದ್ದು, ಈ ಸಂಬಂಧ ಹಲವು ಯೋಜನೆಗಳನ್ನು ರೂಪಿಸುವದಾಗಿ ಮಾಹಿತಿ ಒದಗಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎನ್.ಬಿ. ಮಹೇಶ್, ಸ್ಥಳೀಯ ದೇವತಾ ಸಮಿತಿ ಅಧ್ಯಕ್ಷ ಎನ್.ಎನ್. ಚಂದ್ರಶೇಖರ್, ಕಾರ್ಯದರ್ಶಿ ಸಿ.ಎನ್. ಲೋಕೇಶ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹೆಚ್.ಬಿ. ಹರೀಶ್, ಮುಖ್ಯ ಶಿಕ್ಷಕ ಸೋಮಯ್ಯ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಸಿ. ಸುರೇಶ್, ಶಿಬಿರಾಧಿಕಾರಿಗಳಾದ ಸಿ.ಎಸ್. ಹೇಮಲತಾ ಮತ್ತು ಸಹ ಶಿಬಿರಾಧಿಕಾರಿಗಳು ಇದ್ದರು.