ಕುಶಾಲನಗರ, ನ. 25: ಕುಶಾಲನಗರ ಗಣಪತಿ ದೇವಸ್ಥಾನ ವಾರ್ಷಿಕ ರಥೋತ್ಸವ ಅಂಗವಾಗಿ ಡಿಸೆಂಬರ್ 5 ರಿಂದ 3 ದಿನಗಳ ಕಾಲ ನಡೆಯಲಿರುವ ಗೋ ಪ್ರದರ್ಶನದ ಹಿನ್ನೆಲೆ ಕುಶಾಲ ನಗರದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೋಪ್ರದರ್ಶನದ ಸಂಬಂಧ ಡಿ. 5 ರಂದು ಬೆಳಿಗ್ಗೆ ಸೋಮೇಶ್ವರ ದೇವಾಲಯದ ಬಳಿಯಿಂದ ಹಸು, ಎತ್ತುಗಳನ್ನು ಮೆರವಣಿಗೆ ಮೂಲಕ ಜಾತ್ರಾ ಮೈದಾನಕ್ಕೆ ಕರೆದೊಯ್ಯುವ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಜಾತ್ರೆಗೆ ತರಲಾಗುವ ರೈತರ ರಾಸುಗಳನ್ನು ಪಶು ವೈದ್ಯರಿಂದ ತಪಾಸಣೆಗೆ ಒಳಪಡಿಸುವದು, ರೈತರಿಗೆ ಗುರುತಿನ ಚೀಟಿ ನೀಡುವದರೊಂದಿಗೆ ಅಗತ್ಯ ಸೌಲಭ್ಯ ಕಲ್ಪಿಸುವದು, ಹಸು, ಎತ್ತುಗಳ ಜೊತೆಗೆ ಜಾತ್ರೆಯಲ್ಲಿ ಎಮ್ಮೆ, ಆಡು, ಕುರಿ, ಕೋಳಿ, ಶ್ವಾನಗಳನ್ನು ಕೂಡ ಪ್ರದರ್ಶನಕ್ಕಿಡಲು ವ್ಯವಸ್ಥೆ ಕಲ್ಪಿಸಲಾಗುವದು ಎಂದು ವಿ.ಎನ್. ವಸಂತಕುಮಾರ್ ತಿಳಿಸಿದ್ದಾರೆ.

ಪಶು ವೈದ್ಯರಿಂದ ತಪಾಸಣೆಗೆ ಒಳಪಟ್ಟು ವಿಜೇತರಾಗುವ ಪ್ರಾಣಿಗಳ ಮಾಲೀಕರಿಗೆ ಆಕರ್ಷಕ ಬಹುಮಾನ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಜಾತ್ರೋತ್ಸವದ ಸಮಾರೋಪದ ಅಂಗವಾಗಿ ಕುಶಾಲನಗರದ ಮುಖ್ಯ ರಸ್ತೆಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಸಾಂಸ್ಕøತಿಕ ಮೆರವಣಿಗೆ ನಡೆಸಲು ನಿರ್ಧರಿಸಲಾಯಿತು. ಕುಶಾಲನಗರದ ಪ್ರಮುಖ ದೇವಾಲಯಗಳ ಸಮಿತಿಗಳ ಮೂಲಕ ಕಲಾತಂಡಗಳ ವ್ಯವಸ್ಥೆ ಸಜ್ಜುಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭ ವಿವಿಧ ಸಮಿತಿಗಳ ಪ್ರಮುಖರಾದ ಎಂ.ಕೆ. ದಿನೇಶ್, ಅಮೃತ್, ವಿ.ಪಿ. ಶಶಿಧರ್, ಜಿ.ಎಲ್. ನಾಗರಾಜ್, ಎಸ್.ಎನ್. ನರಸಿಂಹಮೂರ್ತಿ ಮತ್ತಿತರರು ಇದ್ದರು.