ಗೋಣಿಕೊಪ್ಪ ವರದಿ, ನ. 24 : ದಕ್ಷಿಣ ಕೊಡಗಿನಲ್ಲಿ ಹುತ್ತರಿ ನಮ್ಮೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನದಲ್ಲಿ ಸಾಮೂಹಿಕವಾಗಿ ದೇವಕದ್, ಮನೆಯ ಗದ್ದೆಗಳಲ್ಲಿ ಗುರು ಕದ್ ಹೀಗೆ ಕದಿರು ತೆಗೆದು ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳಲಾಯಿತು. ಆಚರಣೆಯಂತೆ ಕದಿರು ತೆಗೆಯುವ ಮುನ್ನ ಗಾಳಿಯಲ್ಲಿ ಗುಂಡು ಹೊಡೆದು ತೆಗೆಯಲಾಯಿತು.ವಿವಿಧ ಗ್ರಾಮಗಳಲ್ಲಿ ಪದ್ಧತಿ ಯಂತೆ ಹಗಲು ಹಾಗೂ ರಾತ್ರಿ ಕದಿರು ತೆಗೆಯಲಾಯಿತು. ಮಳೆಯ ಸಿಂಚನದ ನಡುವೆ ಧಾನ್ಯಲಕ್ಷ್ಮಿಯನ್ನು ಮನೆ ಮನೆಗೆ ಬರಮಾಡಿಕೊಳ್ಳಲಾಯಿತು. ಶ್ರೀ ಇಗ್ಗುತ್ತಪ್ಪ ಕೊಡವ ಸಂಘದ ವತಿಯಿಂದ ಬ್ರಿಗೇಡಿಯರ್ (ನಿ) ಮನೆಯಪಂಡ ದೇವಯ್ಯ ಅವರ ಗದ್ದೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯಲಾಯಿತು. ಕೊಡವ ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಉತ್ತಪ್ಪ ಮುಂದಾಳತ್ವದಲ್ಲಿ ಸದಸ್ಯರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡರು.
ಮಾಯಮುಡಿ : ಕಮಟೆ ಮಹಾ ದೇವರ ದೇವಸ್ಥಾನದಲ್ಲಿ ರಾತ್ರಿ ಕದಿರು ತೆಗೆಯಲಾಯಿತು.
(ಮೊದಲ ಪುಟದಿಂದ) ಕಾಡಾನೆಗಳಿಂದ ದೇವರ ಗದ್ದೆ ನೆಡಲಾಗದೆ ಗ್ರಾಮದ ಕೃಷಿಕನ ಗದ್ದೆಯಿಂದ ಕೊಯ್ಲು ಮಾಡಿಕೊಂಡು ಭತ್ತದ ತೆನೆಗಳನ್ನು ದೇವಸ್ಥಾನದ ಆವರಣದಲ್ಲಿ ಇರಿಸಿ ಹಬ್ಬ ಚರಿಸಲಾಯಿತು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸಣ್ಣುವಂಡ ರಮೇಶ್ ಮುಂದಾಳತ್ವದಲ್ಲಿ ಪೂಜೆ, ಸಲ್ಲಿಸಿ ದೇವರಿಗೆ ಕದಿರು ಅರ್ಪಿಸಲಾಯಿತು. ನೂರಾರು ಕೃಷಿಕರು ಪಾಲ್ಗೊಂಡಿದ್ದರು.
ಬಾಳಾಜಿ: ಮಾನಿಲ್ ಅಯ್ಯಪ್ಪ ದೇವಸ್ಥಾನದಲ್ಲಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್ ಮುಂದಾಳತ್ವದಲ್ಲಿ ದೇವಕದ್ ತೆಗೆಯಲಾಯಿತು.
ತೆರಾಲು ಅಯ್ಯಪ್ಪ ದೇವರಿಗೆ ಕದಿರು ತೆಗೆಯಲಾಯಿತು. ಗ್ರಾಮಸ್ಥರು ತಮ್ಮ ಗುರುಕಾರೊಣನಿಗೆ ರಾತ್ರಿ ಕದಿರು ತೆಗೆದು ಮನೆಯಲ್ಲಿ ಸಂಭ್ರಮಿಸಿದರು. ನಿಟ್ಟೂರು ಕಾಲಭೈರವ ದೇವಸ್ಥಾನದಲ್ಲಿ ಹಗಲು ಕದಿರು ತೆಗೆಯಲಾಯಿತು. ಶಂಖನಾದದೊಂದಿಗೆ ಲಕ್ಷ್ಮಿಯನ್ನು ದೇವಸ್ಥಾನದವರೆಗೆ ಬರಮಾಡಿಕೊಳ್ಳಲಾ ಯಿತು. ನಾಲ್ಕೇರಿ ಮಹಾದೇಶ್ವರ ದೇವಸ್ಥಾನ, ಮಹಾಲಿಂಗೇಶ್ವರಾ, ಮಂದತ್ತವ್ವ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಕದಿರು ತೆಗೆದು ಪೂಜೆ ಸಲ್ಲಿಸಲಾಯಿತು.
ಬೆಸಗೂರು ಗ್ರಾಮದಲ್ಲಿ ಹಗಲು ಕದಿರು ತೆಗೆಯಲಾಯಿತು. ದೇವನೂರು ಬಸವೇಶ್ವರ ದೇವಸ್ಥಾನದಲ್ಲಿ ಕದಿರು ತೆಗೆಯಲಾಯಿತು.
ನೊಕ್ಯಾ ಗ್ರಾಮದ ಶ್ರೀಕೃಷ್ಣ ಬಲರಾಮ ದೇವಸ್ಥಾನ ಗದ್ದೆಯಲ್ಲಿ ಕಾಡಾನೆಗಳಿಂದ ಕಾಪಾಡಿಕೊಂಡ ಭತ್ತದ ತೆನೆಯನ್ನು ದೇವಸ್ಥಾನ ಉಸ್ತುವಾರಿ ಚೆಪ್ಪುಡೀರ ಕಾರ್ಯಪ್ಪ ಮುಂದಾಳತ್ವದಲ್ಲಿ ಕದಿರು ತೆಗೆದು ಹುತ್ತರಿ ಆಚರಿಸಲಾಯಿತು. ಗ್ರಾಮಸ್ಥರು ಒಂದಾಗಿ ಸೇರಿ ಆಚರಿಸಿದರು. ನೊಕ್ಯ ಬಸವೇಶ್ವರ ದೇವಸ್ಥಾನದಲ್ಲಿ ದೇವಸ್ಥಾನ ಸಮಿತಿ ಉಸ್ತುವಾರಿ ಶಿವಣ್ಣ ಮುಂದಾಳತ್ವದಲ್ಲಿ ಕದಿರು ತೆಗೆಯಲಾಯಿತು.
ಧನುಗಾಲ ಮುರುಡೇಶ್ವರ ದೇವಸ್ಥಾನದಲ್ಲಿ ಹಗಲು ಕದಿರು ತೆಗೆದು ದೇವರಿಗೆ ಅರ್ಪಿಸಿದರು. ಪಾಲಿಬೆಟ್ಟ ಚೆಷೈರ್ಹೋಂ ಅಂಗವಿಕಲ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುತ್ತರಿ ನಮ್ಮೆಯ ವಿಶೇಷ ಖಾದ್ಯವಾದ ತಂಬಿಟ್ಟು ವಿತರಿಸಿ ಹುತ್ತರಿ ಆಚರಿಸಿದರು. ಸ್ವತಃ ಶಿಕ್ಷಕರು ತಂಬಿಟ್ಟು ತಯಾರಿಸಿ ಮಕ್ಕಳಿಗೆ ನೀಡಿ ಸಂಭ್ರಮಿಸಿದರು.
ಬೇಗೂರು ಗ್ರಾಮದ ಪೂಳೆಮಾಡು ಈಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಆಚರಣೆ ನಡೆಯಿತು. ಹಗಲು ಹೊತ್ತು ಕದಿರು ತೆಗೆದು ಬರಮಾಡಿಕೊಂಡರು.
ವೀರಾಜಪೇಟೆ ಕೊಡವ ಸಮಾಜ
ವೀರಾಜಪೇಟೆ : ವೀರಾಜಪೇಟೆಯ ಕೊಡವ ಸಮಾಜದಿಂದ ಪ್ರತಿ ವರ್ಷದಂತೆ ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕ ಬದ್ಧವಾಗಿ ವಿಧಿ ವಿದಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನಿನ್ನೆ ದಿನ ರಾತ್ರಿ ಆಚರಿಸಲಾಯಿತು.
ತಾ. 23ರಂದು ರಾತ್ರಿ ಕೊಡವ ಸಮಾಜದ ನೆಲ್ಲಕ್ಕಿಯಲ್ಲಿ ನೆರೆ ಕಟ್ಟಲಾಯಿತು. ಕೊಡವ ಸಮಾಜದ ಗದ್ದೆಯಲ್ಲಿ ಸಮುದಾಯದ ಹಿರಿಯರಾದ ಕೂತಂಡ ನಾಣಯ್ಯ ಅವರ ನೇತೃತ್ವದಲ್ಲಿ ಪೂಜೆ ಪುನಸ್ಕಾರಗಳೊಂದಿಗೆ ಕದಿರು ತೆಗೆಯಲಾಯಿತು. ಕದಿರು ತೆಗೆದ ನಂತರ ಮೆರವಣಿಗೆಯಲ್ಲಿ ಸಾಮೂಹಿಕವಾಗಿ ಕೊಡವ ಸಮಾಜದ ಸಭಾಂಗಣಕ್ಕೆ ಬಂದ ಸಮುದಾಯದವರು ನೆಲ್ಲಕ್ಕಿಯಲ್ಲಿ ಕದಿರಿಗೆ ಪೂಜೆ ಸಲ್ಲಿಸಿದ ನಂತರ ಕದಿರನ್ನು ಎಲ್ಲರಿಗೂ ವಿತರಿಸಲಾಯಿತು.
ಇದೇ ಸಂದರ್ಭ ಪಾಯಸ, ತಂಬಿಟ್ಟು ವಿಶೇಷ ತಿನಿಸುಗಳನ್ನು ವಿತರಿಸಲಾಯಿತು.
ಹುತ್ತರಿ ಆಚರಣೆ ಸಂದರ್ಭ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ, ಗೌರವ ಕಾರ್ಯದರ್ಶಿ ಕುಲ್ಲಚಂಡ ಪೂಣಚ್ಚ, ಸಹ ಕಾರ್ಯದರ್ಶಿ ಕನ್ನಂಬೀರ ಚಿಣ್ಣಪ್ಪ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಮುದಾಯದ ಕುಟುಂಬಗಳು ಹಾಜರಿದ್ದರು.
ಪೊನ್ನಂಪೇಟೆ ಸಮಾಜ
ಶ್ರೀಮಂಗಲ: ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಹುತ್ತರಿ ಹಬ್ಬವನ್ನು ಸಾಮೂಹಿಕವಾಗಿ ನಡೆಸಲಾಯಿತು. ಪದ್ಧತಿಯಂತೆ ನೆರೆ ಕಟ್ಟುವದು, ಫಲಾಹಾರ ಕಾರ್ಯಕ್ರಮ ನಡೆಸಲಾಯಿತು. ದುಡಿಕೊಟ್ಟ್ಪಾಟ್, ನೆರೆಕದ್ ಮತ್ತು ತಳಿಯತಕ್ಕಿ ಬೊಳಕ್ ನೊಂದಿಗೆ ಗದ್ದೆಗೆ ತೆರಳಿ ಕದಿರು ತೆಗೆಯಲಾಯಿತು. ನಂತರ ಪುತ್ತರಿ ಪ್ರಯುಕ್ತ ವಿಶೇಷವಾದ ತಂಬಿಟ್ಟು, ಗೆಣಸು, ಪಾಯಸವನ್ನು ಸಾಮೂಹಿಕವಾಗಿ ಸೇವಿಸಲಾಯಿತು.
ಈ ಸಂದರ್ಭ ಸಮಾಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ,Àಸಮಾಜದ ಸಾಂಸ್ಕøತಿಕ ಉಸ್ತುವಾರಿ ಕಾಳಿಮಾಡ ಮೋಟಯ್ಯ, ಉಪಾಧ್ಯಕ್ಷ ಚೆಪ್ಪುಡಿರ ಪಿ. ಬೋಪಣ್ಣ, ಕಾರ್ಯದರ್ಶಿ ಪೊನ್ನಿಮಾಡ ಎಸ್. ಸುರೇಶ್, ಜಂಟಿ ಕಾರ್ಯದರ್ಶಿ ಅಪ್ಪಂಡೇರಂಡ ಶಾರದ, ಖಜಾಂಚಿ ಮೂಕಳೇರ ಪಿ. ಲಕ್ಷ್ಮಣ, ನಿರ್ದೇಶಕರುಗಳಾದ ಮಲ್ಲಮಾಡ ಪ್ರಭು ಪೂಣಚ್ಚ, ಮೂಕಳಮಾಡ ಅರಸು ನಂಜಪ್ಪ, ಅಡ್ಡಂಡ ಸುನೀಲ್ ಸೋಮಯ್ಯ, ಚೆಪ್ಪುಡಿರ ರಾಕೇಶ್ ದೇವಯ್ಯ, ಮಂಡಚಂಡ ದಿನೇಶ್ಚಿಟ್ಟಿಯಪ್ಪ, ಚೆಪ್ಪುಡಿರ ರೂಪಾಉತ್ತಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಹಾಜರಿದ್ದರು.
ಮೃತ್ಯುಂಜಯ ದೇವಸ್ಥಾನ
ಹುತ್ತರಿ ಪ್ರಯುಕ್ತ ಇತಿಹಾಸ ಪ್ರಸಿದ್ಧ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ತಕ್ಕ ಮುಖ್ಯಸ್ಥರ ನೇತೃತ್ವದಲ್ಲಿ ದೇವಕದ್ ತೆಗೆಯುವ ಕಾರ್ಯಕ್ರಮ ಸಾಂಪ್ರಾದಾಯಿಕವಾಗಿ ನಡೆಯಿತು.
ದೇವಸ್ಥಾನದಲ್ಲಿ ಊರು ನಾಡಿನವರು ಸೇರಿ ಪದ್ಧತಿಯಂತೆ ಮಲ್ಲೆಂಗಡ ಪೆಮ್ಮಯ್ಯ ಅವರ ಗದ್ದೆಯಲ್ಲಿ ಕದಿರು ತೆಗೆಯಲು ಒಡ್ಟೋಲಗ, ತಳಿಯತಕ್ಕಿ ಬೊಳಕ್ ನೊಂದಿಗೆ ತೆರಳಿ ಗದ್ದೆಯಲ್ಲಿ ಅರ್ಚಕರು ಪೂಜೆ ಸಲ್ಲಿಸಿದ ನಂತರ, ಗಾಳಿಯಲ್ಲಿ ಗುಂಡು ಹೊಡೆದು ಕದಿರು ತೆಗೆಯುವ ಪದ್ಧತಿಗೆ ಚಾಲನೆ ನೀಡಲಾಯಿತು.
ದೇವತಕ್ಕ ಕುಟುಂಬದ ಅಣ್ಣೀರ ದಾದ ಗಣಪತಿ ಸಾಂಪ್ರದಾಯಿಕ ಕದಿರು ಕುಯ್ದರು. ನೂರಾರು ಜನರು ಕದಿರಿನೊಂದಿಗೆ ಪೊಲಿ ಪೊಲಿ ದೇವಾ ಎನ್ನುತ್ತಾ, ಪಟಾಕಿ ಹಾಗೂ ಒಡ್ಡೊಲಗದ ಸಂಭ್ರಮದಲ್ಲಿ ಮೃತ್ಯುಂಜಯ ದೇವರಿಗೆ ದೇವ ಕದಿರು ಒಪ್ಪಿಸಿದರು. ಒಪ್ಪಿಸಿದ ನಂತರ ಗ್ರಾಮದ ಇತರ ಹಲವು ದೇವಸ್ಥಾನದಲ್ಲಿ ಪದ್ಧತಿಯಂತೆ ನಿಗದಿತ ಗದ್ದೆಗಳಲ್ಲಿ ಕದಿರು ತೆಗೆಯಲಾಯಿತು. ಕದಿರು ತೆಗೆದ ನಂತರ ಭಕ್ತಾದಿಗಳಿಗೆ ಸಾಮೂಹಿಕ ಊಟ-ಉಪಚಾರ ನಡೆಯಿತು. ಈ ಸಂದರ್ಭ ನಾಡ್ತಕ್ಕ ಕುಟುಂಬದ ಹಿರಿಯರಾದ ಕಾಯಪಂಡ ಅಯ್ಯಪ್ಪ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಕಾಯಪಂಡ ಕಾವೇರಪ್ಪ, ಕಾರ್ಯದರ್ಶಿ ಅಣ್ಣೀರ ಪ್ರವೀಣ್, ಅರ್ಚಕರಾದ ಗಿರೀಶ್, ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.
ತಾ. 26ರಂದು ಆಚರಣೆ
ಟಿ.ಶೆಟ್ಟಿಗೇರಿಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೆರ್ಮಾಳ್ ಪಟ್ಟಿಯ ಎದುರಿಗೆ ಇರುವ ತಾವಳಗೇರಿ ಮೂಂದ್ನಾಡ್ ಕೋಲ್ ಮಂದ್ನಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ತಾ. 26 ರಂದು ಹುತ್ತರಿ ಕೋಲ್ಮಂದ್ ನಡೆಯಲಿದೆ.
ಅಂದು ಅಪರಾಹ್ನ 1.30 ಗಂಟೆಗೆ ಕೊರಕೋಟ್ ಅಯ್ಯಪ್ಪ ಹಾಗೂ ತಾವಳಗೇರಿ ಮಾದೇವರ ಕುದುರೆಗಳು ಮಂದ್ ಪ್ರವೇಶಿಸುವದರೊಂದಿಗೆ ಪುತ್ತರಿ ನಾಡ್ಕೋಲ್ಗೆ ಚಾಲನೆ ಸಿಗಲಿದೆ. 1.35ಕ್ಕೆ ಮಂದ್ ಪುಡಿಪೊ, ನಾಡ್ಕೋಲ್ಗೆ, ಪೊನ್ನಂಪೇಟೆ ಕೊಡವ ಸಮಾಜದ ಸದಸ್ಯರಿಂದ ಉಮ್ಮತ್ತಾಟ್, ಪುತ್ತರಿ ಕೋಲಾಟ್, ಬೊಳಕಾಟ್, ಕತ್ತಿಯಾಟ್, ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆ ಮಕ್ಕಳಿಂದ ಉಮ್ಮತ್ತಾಟ್, ಪುತ್ತರಿ ಕೋಲಾಟ್ ಹಾಗೂ ವಿವಿಧ ನೃತ್ಯ ಪ್ರದರ್ಶನಗಳು ನಡೆಯಲಿದೆ.
ಈ ಸಂದರ್ಭ ಸಾಧಕರಿಗೆ ಸನ್ಮಾನ ನಡೆಯಲ್ಲಿದ್ದು, ತಾವಳಗೇರಿ ಮೂಂದ್ನಾಡ್ ವ್ಯಾಪ್ತಿಯ ನಿವೃತ್ತ ಸೈನಿಕ ಪೆಮ್ಮಣಮಾಡ ಗಣಪತಿ ಅವರನ್ನು ಸನ್ಮಾನಿಸಲಾಗುವದು.
ತಾವಳಗೇರಿ ಮಹಾದೇವ, ಭದ್ರಕಾಳಿ, ಕೊರಕೋಟ್ ಅಯ್ಯಪ್ಪ, ವಗರೆಈಶ್ವರ ಹಾಗೂ ನೆಮ್ಮಲೆದುರ್ಗಿ, ಅಯ್ಯಪ್ಪ, ಮಹಾದೇವ ದೇವಸ್ಥಾನ ಸಮಿತಿ ಹಾಗೂ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಮಂದ್ ನಮ್ಮೆಯು ಸಂಜೆ 5 ಗಂಟೆಗೆ ಕುದುರೆಗಳನ್ನು ಆಯಾಯ ದೇವಸ್ಥಾನಕ್ಕೆ ಹಿಂತಿರುಗಿಸುವದರೊಂದಿಗೆ ಮುಕ್ತಾಯಗೊಳ್ಳಲಿದೆ.
ಐತಿಹಾಸಿಕ ಹಿನ್ನಲೆ ಇರುವ ತಾಳೇರಿ ನಾಡ್, ಮರೆನಾಡ್ ಹಾಗೂ ತೊಡನಾಡ್ಗೆ ಒಳಪಟ್ಟ ಗ್ರಾಮಗಳು ಸೇರಿ ನಡೆಸುತ್ತಿದ್ದ ವಿಜೃಂಭಣೆಯ ನಾಡ್ಕೋಲ್ ಮಂದ್ ನಮ್ಮೆ ಇದೀಗ ಜನಾಕರ್ಷಣೆಯ ಉತ್ಸವವಾಗಿ ನಡೆಯುತ್ತದೆ.