ಸೋಮವಾರಪೇಟೆ, ನ. 24: ಸಂವಿಧಾನಾತ್ಮಕ ಅಳವಡಿಕೆಯಾಗಿರುವ ಕಾನೂನುಗಳನ್ನು ಸಮಾಜದಲ್ಲಿ ಅನುಷ್ಠಾನಕ್ಕೆ ತಂದು ಸುವ್ಯವಸ್ಥೆ ಕಾಪಾಡುವ ಮಹತ್ತರ ಜವಾಬ್ದಾರಿ ಹೊಂದಿರುವ ಭಾವೀ ಪೊಲೀಸರನ್ನೇ ತನ್ನ ಕುತಂತ್ರದ ಮೂಲಕ ಮೋಸ ಮಾಡಲು ಹೊರಟಿದ್ದ ನಕಲಿ ಉತ್ತರ ಪತ್ರಿಕೆ ಜಾಲವನ್ನು ಭೇದಿಸುವಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣದ ಮಾಸ್ಟರ್ ಮೈಂಡ್‍ನನ್ನು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾ. 25ರಂದು (ಇಂದು) ನಡೆಯಬೇಕಿದ್ದ ಪೊಲೀಸ್ ಹುದ್ದೆಗೆ ಆಯ್ಕೆಯ ಲಿಖಿತ ಪರೀಕ್ಷೆಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ.ತುಮಕೂರು ಜಿಲ್ಲೆಯ ಶಿವಕುಮಾರ್ ಎಂಬಾತನೇ ಸಿಸಿಬಿ ವಶಕ್ಕೆ ಒಳಗಾದ ಕುತಂತ್ರಿಯಾಗಿದ್ದು, ಸುಮಾರು 115 ಮಂದಿ ಭಾವೀ ಪೊಲೀಸರು ವಂಚಕನ ಕುಂತಂತ್ರದಿಂದ ಅಂತಿಮ ಕ್ಷಣದಲ್ಲಿ ಬಚಾವಾಗಿದ್ದಾರೆ. ತಾ.25ರಂದು (ಇಂದು) ಕರ್ನಾಟಕದಾದ್ಯಂತ ಪೊಲೀಸ್ ಪ್ರವೇಶ ಪರೀಕ್ಷೆ ಇದ್ದು, ಈ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳನ್ನು ಸಂಪರ್ಕಿಸಿರುವ ಖತರ್ ನಾಕ್ ಖದೀಮನಾಗಿರುವ ಶಿವಕುಮಾರ್, ತನಗೆ ಇಲಾಖೆಯಲ್ಲಿ ಉನ್ನತ ಮಟ್ಟದ ಸಂಪರ್ಕವಿದ್ದು, ನಿಮಗಳಿಗೆ ಪರೀಕ್ಷೆಗೂ ಮೊದಲೇ ಉತ್ತರ ಪತ್ರಿಕೆ ನೀಡುವದಾಗಿ ನಂಬಿಸಿದ್ದಾನೆ. ಈತನ ಆಮಿಷಕ್ಕೆ ಒಳಗಾದ ರಾಜ್ಯದ ಬಹುತೇಕ ಜಿಲ್ಲೆಗಳ ಸುಮಾರು 115 ಮಂದಿ ಪರೀಕ್ಷಾರ್ಥಿಗಳು ಸಮ್ಮತಿ ಸೂಚಿಸಿದ್ದಾರೆ. ಅಂತಿಮವಾಗಿ ಪ್ರತಿಯೋರ್ವ ಅಭ್ಯರ್ಥಿಗಳಿಂದ ತಲಾ 5 ರಿಂದ 6 ಲಕ್ಷ ರೂಪಾಯಿಗಳನ್ನು ಕಂತುಗಳ ಮೂಲಕ ಪಡೆದಿದ್ದು, ನಿನ್ನೆ ದಿನ ಹಾಸನಕ್ಕೆ ಬರುವಂತೆ ತಿಳಿಸಿದ್ದಾನೆ.
ಅದರಂತೆ ಅಭ್ಯರ್ಥಿಗಳು ಹಾಸನಕ್ಕೆ ರಾತ್ರಿ 11ರ ಸುಮಾರಿಗೆ ಬಂದಿದ್ದು, ಅಲ್ಲಿ ವಸತಿ ಮಾಡಿದ ನಂತರ ಇಂದು ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಕೊಡ್ಲಿಪೇಟೆಯ ಕಲ್ಲುಮಠದ ವಿದ್ಯಾಸಂಸ್ಥೆಗೆ ಕರೆತಂದಿದ್ದಾನೆ. ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಎಲ್ಲಾ ಪರೀಕ್ಷಾರ್ಥಿಗಳಿಗೆ ಉತ್ತರ ಪತ್ರಿಕೆ ನೀಡುವ ಸಂದರ್ಭ ಯಸಳೂರು ಪೊಲೀಸ್ ಠಾಣಾಧಿಕಾರಿ ಸುಬ್ಬಯ್ಯ, ಪೇದೆ ರಂಗಸ್ವಾಮಿ ಅವರುಗಳ ಸಹಕಾರದೊಂದಿಗೆ ಬೆಂಗಳೂರು ಸಿಸಿಬಿಯ ಸರ್ಕಲ್ ಇನ್ಸ್ ಪೆಕ್ಟರ್ ವೇಣುಗೋಪಾಲ್ ಸೇರಿದಂತೆ 6 ಮಂದಿ ಸಿಬ್ಬಂದಿಗಳು ದಿಢೀರ್ ಧಾಳಿ ನಡೆಸಿದ್ದಾರೆ.
ದಿಢೀರ್ ಧಾಳಿಯಿಂದ ಪ್ರಕರಣದ ರೂವಾರಿ ಶಿವಕುಮಾರ್ ಚೇತರಿಸಿ ಕೊಳ್ಳುವ ಮೊದಲೇ ಪೊಲೀಸರ ಬಂದಿಯಾಗಿದ್ದಾನೆ.