ಮಂಡ್ಯ, ನ. 24: ಜಿಲ್ಲೆಯ ಪಾಂಡವವಪುರ ಬಳಿ ನಡೆದ ಭೀಕರ ಬಸ್ ದುರಂತದಿಂದ ಸುಮಾರು 30 ಮಂದಿ ಮೃತಪಟ್ಟಿದ್ದಾರೆ. ಈ ಅಪಘಾತಕ್ಕೆ ಬಸ್ ಸ್ಟೇರಿಂಗ್ ಲಾಕ್ ಆಗಿದ್ದೆ ಕಾರಣ ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ (ಕೆಎ-19, 5676) ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿತ್ತು. ಈ ವೇಳೆ ಚಿಕ್ಕಬ್ಯಾಡರಹಳ್ಳಿ-ಕನಗನಮರಡಿ ಮಾರ್ಗದಲ್ಲಿ ಹೋಗುತ್ತಿದ್ದಂತೆ ವಿ.ಸಿ. ನಾಲೆಗೆ ಉರುಳಿ ನೇರವಾಗಿ ಬಸ್ ಮುಳುಗಿತು. ಪರಿಣಾಮ ಬಸ್ಸಿನಿಂದ ಹೊರಬರಲಾಗದೆ ಪ್ರಯಾಣಿಕರು ಪರದಾಡಿ ಜಲಸಮಾಧಿಯಾಗಿದ್ದಾರೆ. ಇನ್ನೂ ಅಪಘಾತದಲ್ಲಿ ಗಿರೀಶ್ ಮತ್ತು ಬಾಲಕ ಲೋಹಿತ್ ಎಂಬಿಬ್ಬರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಸ್ಥಳದಲ್ಲಿದ್ದವರು ಅಪಘಾತದ ಬಗ್ಗೆ ಮಾತನಾಡಿ, ಈ ಮಾರ್ಗದಲ್ಲಿ ಅಪಘಾತ ಸಂಭವಿಸಿರಲಿಲ್ಲ. ರಸ್ತೆಯೂ ಕೂಡ ದೊಡ್ಡದಾಗಿತ್ತು. ಯಾವದೇ ತಿರುವು ಕೂಡ ಇರಲಿಲ್ಲ. ಬಸ್ ವಿ.ಸಿ. ನಾಲೆಯ ಬಳಿ ಬರುತ್ತಿದ್ದಂತೆ ಸ್ಟೇರಿಂಗ್ ಲಾಕ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ, ಬಸ್ ನಾಲೆಗೆ ಬಿದ್ದಿದೆ ಎಂದು ಹೇಳಿದ್ದಾರೆ. ಮಂಗಳೂರಿನ ನೋಂದಣಿ ಸಂಖ್ಯೆಯನ್ನು ಹೊಂದಿರುವ ಬಸ್ ಇದಾಗಿದ್ದು, ಬಸ್‍ನ ಮಾಲೀಕ ಶ್ರೀನಿವಾಸ್ ಎಂದು ತಿಳಿದು ಬಂದಿದೆ. 2001ರ ಜನವರಿಯಲ್ಲಿ ನೋಂದಣಿಯಾಗಿದ್ದು, ದುರಂತಕ್ಕೀಡಾದ ಬಸ್ಸಿಗೆ ಮುಂದಿನ ವರ್ಷದ ಮೇ 15ರವರೆಗೆ ಫಿಟ್ನೆಸ್ ಸರ್ಟಿಫಿಕೇಟ್ ಇತ್ತು. ತಾ. 30 ರವರೆಗೆ ಬಸ್ಸಿಗೆ ತೆರಿಗೆಯನ್ನು ಕೂಡ ಕಟ್ಟಲಾಗಿತ್ತು. ಬಸ್ ಇನ್ಸೂರೆನ್ಸ್ ಕೂಡ ಮುಂದಿನ ವರ್ಷ 15ರ ತನಕ ಇತ್ತು. ಸಿಎಂ ಕುಮಾರಸ್ವಾಮಿ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಬಸ್ ನಿರ್ವಾಹಕ ಹೇಗೋ ಈಜಿಕೊಂಡು ಪರಾರಿಯಾಗಿದ್ದಾನೆ.

ರೂ. 5 ಲಕ್ಷ ಪರಿಹಾರ : ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ 30 ಮಂದಿ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಲಾ ರೂ. 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಭೀಕರ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮಂಡ್ಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ ರೂ. 5 ಲಕ್ಷ ಪರಿಹಾರ ನೀಡುವದಾಗಿ ತಿಳಿಸಿದರು.