ಸೋಮವಾರಪೇಟೆ,ನ.20: ಶತಮಾನದ ಮಹಾಮಳೆ, ಪ್ರವಾಹ, ಭೂ ಕುಸಿತಕ್ಕೆ ಸೋಮವಾರಪೇಟೆ ತಾಲೂಕಿನ 55 ಹೆಕ್ಟೇರ್ ಭತ್ತ ಕೃಷಿ ಪ್ರದೇಶ ಮುಂದಿನ ಕೆಲ ವರ್ಷಗಳವರೆಗೆ ಕೃಷಿಗೆ ಅಯೋಗ್ಯ ವಾಗಿ ಪರಿಣಮಿಸಿದೆ.ಹಲವೆಡೆಗಳಲ್ಲಿ ಭೂಮಿ ಕುಸಿತಗೊಂಡು ಹೊಳೆಗೆ ಜಾರಿದ ಪರಿಣಾಮ, ಹೊಳೆಯಲ್ಲಿನ ನೀರಿನ ಹರಿವು ಗದ್ದೆಗಳಿಗೆ ನುಗ್ಗಿ ಹೂಳು ತುಂಬಿದೆ. 55 ಏಕರೆ ಗದ್ದೆ ಪ್ರದೇಶ ಮರಳು, ಹೂಳು, ಮರಗಳಿಂದ ನಾಶವಾಗಿದ್ದು, ಮುಂದಿನ ಹಲವು ವರ್ಷಗಳ ಕಾಲ ಕೃಷಿ ಮಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನ ಕೃಷಿ ಮತ್ತು ತೋಟ ಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ಸುಮಾರು 8 ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಅಧಿಕಾರಿಗಳು ವರದಿ ಸಲ್ಲಿಸಿದ್ದು, ತೋಟಗಾರಿಕಾ ಇಲಾಖಾ ವ್ಯಾಪ್ತಿಯಲ್ಲಿ 5 ಕೋಟಿ ಹಾಗೂ ಕೃಷಿ ಇಲಾಖೆಗೆ ಸಂಬಂಧಿಸಿ ದಂತೆ 3.13 ಕೋಟಿ ನಷ್ಟ ಸಂಭವಿಸಿರುವ ಬಗ್ಗೆ ವರದಿ ನೀಡಲಾಗಿದೆ.ಸೋಮವಾರಪೇಟೆ ತಾಲೂಕು ಕೃಷಿ ಇಲಾಖಾ ವ್ಯಾಪ್ತಿಯಲ್ಲಿ 7,977 ರೈತರು ಕೃಷಿ ನಷ್ಟದ ಸಂತ್ರಸ್ಥರಾಗಿದ್ದು ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ. 4345 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಹಾನಿಯಾಗಿದೆ ಎಂದು ಸರ್ವೆ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನ ಇಗ್ಗೋಡ್ಲು, ಮೂವತ್ತೊಕ್ಲು, ತಾಕೇರಿ, ಕಿರಗಂದೂರು, ಕಿಕ್ಕರಳ್ಳಿ, ಹಟ್ಟಿಹೊಳೆ, ಯಡೂರಿನಲ್ಲಿ ಸುಮಾರು 55 ಹೆಕ್ಟೇರ್‍ಗೂ ಅಧಿಕ ಕೃಷಿ ಭೂಮಿ ಹೂಳು ತುಂಬಿದ್ದು, ಭತ್ತ ಸೇರಿದಂತೆ ಇನ್ನಿತರ ಆಹಾರ ಬೆಳೆಗಳನ್ನು ಬೆಳೆಯಲು (ಮೊದಲ ಪುಟದಿಂದ) ಅಯೋಗ್ಯವಾಗಿ ಪರಿಣಮಿಸಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 2,800 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗಿದ್ದು, ಮಹಾಮಳೆಗೆ 1,409 ಹೆಕ್ಟೇರ್ ಕೃಷಿ ನಷ್ಟಗೊಂಡಿದೆ. 1,936 ಮಂದಿ ಕೃಷಿಕರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, 95,85,960 ರೂಪಾಯಿ ನಷ್ಟ ಸಂಭವಿಸಿರುವ ಬಗ್ಗೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.
ಇನ್ನು ಪ್ರಸಕ್ತ ವರ್ಷ 9,438 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಮಹಾಮಳೆಯ ಆರ್ಭಟಕ್ಕೆ 2,793 ಹೆಕ್ಟೇರ್ ಭತ್ತ ಕೃಷಿ ನಷ್ಟಗೊಂಡಿದ್ದು, 5,744 ರೈತರು ಪರಿಹಾರಕ್ಕಾಗಿ ಸರ್ಕಾರದ ಎದುರು ಕೈಯೊಡ್ಡುವಂತಾಗಿದೆ. ಮಳೆ ಬಿಸಿಲೆನ್ನದೇ ಗದ್ದೆಯಲ್ಲಿ ಬೆವರು ಸುರಿಸಿ ನಾಟಿ ಮಾಡಿದ್ದ ಫಸಲು, ಪ್ರಕೃತಿಯ ಕೋಪಕ್ಕೆ ಸಿಲುಕಿದ ಪರಿಣಾಮ ಅನ್ನದಾತ ರೈತ ಪರಿಹಾರಕ್ಕೆ ಎದುರು ನೋಡುವಂತಾಗಿದೆ.
ಪ್ರಕೃತಿಯ ರುದ್ರನರ್ತನಕ್ಕೆ ಗದ್ದೆಗಳು ನಾಶವಾಗಿರುವ ಪರಿಣಾಮ, 1 ಕೋಟಿ 89 ಲಕ್ಷದಷ್ಟು ಪರಿಹಾರಕ್ಕೆ ಕೃಷಿ ಇಲಾಖೆ ವರದಿ ಸಲ್ಲಿಸಿದೆ. ಈ ಪರಿಹಾರ ಮೊತ್ತ ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿಯ ಮಾನದಂಡಕ್ಕೆ ಅನುಸಾರವಾಗಿ ಸಲ್ಲಿಕೆಯಾಗಿದ್ದು, ವಾಸ್ತವಾಂಶದಲ್ಲಿ ದುಪ್ಪಟ್ಟು ನಷ್ಟವಾಗಿದೆ ಎಂದು ರೈತರು ಅಭಿಪ್ರಾಯಿಸಿದ್ದಾರೆ.
ತಾಲೂಕಿನ ಹಲವು ಪ್ರದೇಶಗಳಲ್ಲಿ ಬೆಟ್ಟಕುಸಿತದಿಂದ ಜಾರಿದ ಕಲ್ಲು,ಮಣ್ಣು, ಮರಗಳು ಹೊಳೆಯಲ್ಲಿ ಹರಿದು, ಗದ್ದೆಯನ್ನು ಆಪೋಷನಗೈದಿದೆ. ಸುಮಾರು 55ಹೆಕ್ಟೇರ್‍ನಷ್ಟು ಗದ್ದೆ ಸರ್ವನಾಶವಾಗಿದ್ದು, ಇಗ್ಗೋಡ್ಲಿನಲ್ಲಂತೂ ಮರಳುಗಾಡಿನ ಸನ್ನಿವೇಶ ನಿರ್ಮಾಣವಾಗಿದೆ. ಹೂಳುತುಂಬಿ ಗದ್ದೆ ನಾಶವಾಗಿರುವ ಬಗ್ಗೆ 297 ರೈತರು ವರದಿ ನೀಡಿದ್ದು, 142 ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಇದರಲ್ಲಿ ಸುಮಾರು 85 ಹೆಕ್ಟೇರ್ ಗದ್ದೆಯಲ್ಲಿ ಶೇಖರಣೆಯಾಗಿದ್ದ ಹೂಳನ್ನು ತೆಗೆದು ಮರು ನಾಟಿ ಮಾಡಲಾಗಿದೆ. ಉಳಿದ ಗದ್ದೆಗಳು ಕೃಷಿಗೆ ಅಯೋಗ್ಯವಾಗಿದ್ದು, 17.32 ಲಕ್ಷ ರೂಪಾಯಿಗಳ ನಷ್ಟವನ್ನು ಅಂದಾಜಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿಯ ಮಾನದಂಡದಂತೆ 1 ಹೆಕ್ಟೇರ್ ಭತ್ತ ಅಥವಾ ಮುಸುಕಿನ ಜೋಳಕ್ಕೆ 6800 ರೂಪಾಯಿ ಪರಿಹಾರ ಲಭಿಸಲಿದೆ. ಹೂಳುತುಂಬಿ ಅಥವಾ ಸಂಪೂರ್ಣ ಗದ್ದೆ ನಾಶವಾದರೆ ಹೆಕ್ಟೇರ್‍ಗೆ 12,200 ರೂಪಾಯಿ ಮಾತ್ರ ಪರಿಹಾರ ಲಭಿಸಲಿದ್ದು, ಈ ಪರಿಹಾರ ಮೊತ್ತ ರೈತರಿಗೆ ಯಾವದೇ ಪ್ರಯೋಜನ ನೀಡದು. ಪರಿಹಾರ ಪಡೆಯಲು ಓಡಾಟಕ್ಕೆ ಅರ್ಧದಷ್ಟು ಹಣ ವ್ಯಯವಾಗುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತೋಟಗಾರಿಕೆಗೆ 5 ಕೋಟಿ ನಷ್ಟ: ಇನ್ನು ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ ಕರಿಮೆಣಸು, ಶುಂಠಿ ಬೆಳೆಗಳು ನಷ್ಟಗೊಂಡಿವೆ. ಪ್ರಸಕ್ತ ಸಾಲಿನಲ್ಲಿ ಕರಿಮೆಣಸು ಫಸಲಿನ ಮೇಲೆ ಗಧಾಪ್ರಹಾರ ನಡೆದಿದ್ದು, ಶಾಂತಳ್ಳಿ ಮತ್ತು ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಫಸಲು ನೆಲಕ್ಕಚ್ಚಿದೆ. 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕರಿಮೆಣಸು ಬೆಳೆಗಳಿದ್ದು, 3,200 ಹೆಕ್ಟೇರ್‍ನಲ್ಲಿನ ಫಸಲು ಶೇ.33 ಕ್ಕಿಂತಲೂ ಅಧಿಕ ನಷ್ಟವಾಗಿದೆ. ನಷ್ಟದ ಪ್ರಮಾಣ ಕೆಲವೆಡೆ ಶೇ.90 ರಷ್ಟಿದೆ ಎಂದು ತೋಟಗಾರಿಕಾ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಶಾಂತಳ್ಳಿ-ಮಾದಾಪುರ ವ್ಯಾಪ್ತಿಯಲ್ಲಿ ಶೇ. 70ಕ್ಕಿಂತಲೂ ಅಧಿಕ, ಕೊಡ್ಲಿಪೇಟೆ-ಶನಿವಾರಸಂತೆಯಲ್ಲಿ ಶೇ.50, ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಶೇ.60 ಫಸಲು ನಷ್ಟ ಉಂಟಾಗಿರುವದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಈವರೆಗೆ ತೋಟಗಾರಿಕಾ ಇಲಾಖೆಗೆ 12,450 ಅರ್ಜಿಗಳು ಪರಿಹಾರಕ್ಕಾಗಿ ಸಲ್ಲಿಕೆಯಾಗಿದ್ದು, ಸುಮಾರು 5 ಕೋಟಿಗೂ ಅಧಿಕ ನಷ್ಟ ಸಂಭವಿಸಿರುವ ಬಗ್ಗೆ ಸರ್ವೆ ಮೂಲಕ ಅಂದಾಜಿಸಲಾಗಿದೆ. ಸ್ಥಳೀಯವಾಗಿ ತೋಟ ಹೊಂದಿದ್ದು, ಹೊರಭಾಗದಲ್ಲಿ ನೆಲೆಸಿರುವ ಹಲವಷ್ಟು ಮಂದಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮುತ್ತಪ್ಪ ತಿಳಿಸಿದ್ದಾರೆ. - ವಿಜಯ್ ಹಾನಗಲ್