ಮಡಿಕೇರಿ, ನ.21: ಇಲ್ಲಿನಕನ್ನಂಡಬಾಣೆಯಲ್ಲಿರುವ ಶ್ರೀ ದೃಷ್ಟಿ ಗಣಪತಿ ದೇವಾಲಯದಲ್ಲಿ ಸಾಂಪ್ರದಾಯಿಕ ಹುತ್ತರಿ ಹಬ್ಬ ಆಚರಿಸಲಾಗುವದು. ತಾ. 23ರಂದು ರಾತ್ರಿ 7.30 ಗಂಟೆಗೆ ನೆರೆ ಕಟ್ಟುವದು, 8.30ಕ್ಕೆ ಕದಿರು ತೆಗೆಯುವದು, 9.30ಕ್ಕೆ ಕದಿರು, ತಂಬಿಟ್ಟು ಹಾಗೂ ಪ್ರಸಾದ ವಿತರಣೆ ಮಾಡಲಾಗುವದೆಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್.ರಮೇಶ್ ತಿಳಿಸಿದ್ದಾರೆ.
* ನೆಲ್ಯಹುದಿಕೇರಿ ಗ್ರಾಮದ ಶ್ರೀ ಮುತ್ತಪ್ಪ ದೇವಾಲಯದ ವತಿಯಿಂದ ತಾ. 23ರಂದು ದೇವಾಲಯಕ್ಕೆ ಸೇರಿದ ಗದ್ದೆಯಲ್ಲಿ ಹುತ್ತರಿ ಆಚರಣೆ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 6.30 ಗಂಟೆಗೆ ಶ್ರೀ ಮುತ್ತಪ್ಪನ ವೆಳ್ಳಾಟಂ, 7.15 ಕ್ಕೆ ನೆರೆ ಕಟ್ಟುವದು ಹಾಗೂ ಪ್ರಸಾದ ವಿತರಣೆ, 8.15ಕ್ಕೆ ದೇವಾಲಯದ ಗದ್ದೆಯಲ್ಲಿ ಕದಿರು ತೆಗೆಯುವದು. ರಾತ್ರಿ 9 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಶ್ರೀ ಮುತ್ತಪ್ಪ ದೇವಾಲಯ ಅಧ್ಯಕ್ಷ ಪಾಲಚಂಡ ಚೀಯಣ್ಣ ತಿಳಿಸಿದ್ದಾರೆ.
ಸಿ.ಎನ್.ಸಿ. ಹುತ್ತರಿ
ಸಿ.ಎನ್.ಸಿ. ಆಶ್ರಯದಲ್ಲಿ 25 ನೇ ವಾರ್ಷಿಕ ಸಾರ್ವತ್ರಿಕ ಪುತ್ತರಿ ನಮ್ಮೆ ತಾ. 23 ರಂದು ಪೂರ್ವಾಹ್ನ 10.30 ಗಂಟೆಗೆ ಚಿಕ್ಕಬೆಟ್ಟಗೇರಿಯ ನಂದಿನೆರವಂಡ ಉತ್ತಪ್ಪ ಅವರ ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ಕದಿರು ತೆಗೆಯಲಾಗುತ್ತದೆ.
ಮೊದಲಿಗೆ ನೆಲ್ಲಕ್ಕಿಯಡಿಯಲ್ಲಿ ಗುರುಕಾರೋಣರು ಮತ್ತು ದೇವಾನುದೇವತೆಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿ 5 ಬಗೆಯ ಮರದ ಸೊಪ್ಪುಗಳಾದ ಅರಳಿ, ಮಾವು, ಹಲಸು, ಕುಂಬಳಿ ಮತ್ತು ಗೇರು ಮರಗಳ ಎಲೆಗಳಿಂದ ನೆರೆಕಟ್ಟುವ ವಿಧಿ ಮುಗಿಸಿ, ಕುತ್ತಿ, ತೋಕ್- ಕತ್ತಿ, ದುಡಿಕೊಟ್ಟ್‍ಪಾಟ್, ತಳಿಯತಕ್ಕಿಯಾಗಿ ಮೆರವಣಿಗೆ ಹೊರಟು ಭತ್ತದ ಗದ್ದೆಯಲ್ಲಿ ಕದಿರು ತೆಗೆದು ಹಿಂತಿರುಗಿ ಬಂದು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಾದ ವಾಲಗತಾಟ್, ಪರಿಯಕಳಿ ಮತ್ತು ಬೊಳಕಾಟ್ ನಡೆಸಿ ನಂತರ ಗುರುಕಾರೋಣ- ದೇವಾನುದೇವತೆಗಳಿಗೆ ನೈವೇದ್ಯ ಅರ್ಪಿಸಲಾಗುತ್ತದೆ ಎಂದು ಸಿ.ಎನ್.ಸಿ. ಅಧ್ಯಕ್ಷ ನಾಚಪ್ಪ ತಿಳಿಸಿದ್ದಾರೆ.
* ಕುಶಾಲನಗರ ಗೌಡ ಸಮಾಜದ ವತಿಯಿಂದ ಹುತ್ತರಿ ಅಂಗವಾಗಿ ಶುಕ್ರವಾರ ತಾ.23ರಂದು ಕದಿರು ತೆಗೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುತ್ತರಿ ಅಂಗವಾಗಿ ಕುಶಾಲನಗರ ಗೌಡ ಸಮಾಜ, ಗೌಡ ಯುವಕ ಸಂಘ, ಪದ್ಮಾವತಿ ಮಹಿಳಾ ಒಕ್ಕೂಟ, ಗೌಡ ಮಹಿಳಾ ಸ್ವಸಹಾಯ ಸಂಘ, ಕೊಡಗು ಗೌಡ ಯುವ ವೇದಿಕೆ, ಮಾಜಿ ಸೈನಿಕರ ಸಂಘ, ಸಾಂಸ್ಕøತಿಕ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸಂಜೆ 7.30 ಕ್ಕೆ ಗೌಡ ಸಮಾಜದ ಸಭಾಂಗಣದಲ್ಲಿ ನೆರೆಕಟ್ಟಿ ಮೆರವಣಿಗೆ ಮೂಲಕ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಗುವದು. ನಂತರ ಹಾರಂಗಿ ರಸ್ತೆಯ ಪ್ರಥಮ ದರ್ಜೆ ಕಾಲೇಜು ಬಳಿಯ ಗೌಡ ಯುವಕ ಸಂಘದ ಆವರಣದಲ್ಲಿರುವ ಗದ್ದೆಯಲ್ಲಿ ರಾತ್ರಿ 8.30 ಕ್ಕೆ ಕದಿರು ತೆಗೆದು ಗಣಪತಿ ದೇವಾಲಯಕ್ಕೆ ಸಮರ್ಪಿಸಿದ ಬಳಿಕ ಕುಶಾಲನಗರ ಗೌಡ ಸಮಾಜದಲ್ಲಿ ಕದಿರು ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಮಾಜದ ಕಾರ್ಯದರ್ಶಿ ಬೈಮನ ಪೊನ್ನಪ್ಪ, ಸಹ ಕಾರ್ಯದರ್ಶಿ ಆಲುಗುಂಜ ಕೃಷ್ಣಮೂರ್ತಿ, ಚಿಲ್ಲನ ಗಣಿಪ್ರಸಾದ್, ನಿರ್ದೇಶಕ ಕೂರನ ಪ್ರಕಾಶ್ ಇದ್ದರು.
* ಗುಡ್ಡೆಹೊಸೂರು ಬೊಳ್ಳುರು ಗ್ರಾಮದ ಶ್ರೀ ಬಸವೇಶ್ವರ ಮತ್ತು ಶ್ರೀಚೌಡೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ಹುತ್ತರಿ ಆಚರಣೆ ಪ್ರಯುಕ್ತ ತಾ. 23ರಂದು ಇಲ್ಲಿನ ನಿವಾಸಿ ಕೆ.ಎಂ.ಮುದ್ದಪ್ಪ ಅವರ ಗದ್ದೆಯಿಂದ ಕದಿರು ತೆಗೆದು ಮೆರವಣಿಗೆ ಮೂಲಕ ಶ್ರೀಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ನೆರವೇರಿಸಿ ಸಾರ್ವಜನಿಕರಿಗೆ ವಿತರಿಸಲಾಗುವದು. ಅಂದು ರಾತ್ರಿ 7.35ಕ್ಕೆ ನೆರೆಕಟ್ಟುವದು 8.35 ಗಂಟೆಗೆ ಕದಿರು ತೆಗೆಯಲಾಗುವದು ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಮಂಡೆಪಂಡ ಸೋಮಯ್ಯ (ರಘು) ತಿಳಿಸಿದ್ದಾರೆ.
* ಗೋಣಿಕೊಪ್ಪ ಶ್ರೀ ಇಗ್ಗುತ್ತಪ್ಪ ಕೊಡವ ಸಂಘದ ವತಿಯಿಂದ ತಾ. 23 ರಂದು 8.30 ಕ್ಕೆ ಪುತ್ತರಿ ಕದಿರು ತೆಗೆಯುವ ಕಾರ್ಯಕ್ರಮ ನಡೆಯಲಿದೆ.
ಗೋಣಿಕೊಪ್ಪ ಪರಿಮಳ ಮಂಗಳ ವಿಹಾರ ಸಮೀಪವಿರುವ ಬ್ರಿಗೇಡಿಯರ್ (ನಿ) ಮನೆಯಪಂಡ ದೇವಯ್ಯ ಅವರ ಗದ್ದೆಯಲ್ಲಿ ಆಚರಣೆ ನಡೆಯಲಿದೆ. ಸಂಜೆ 7.30 ಕ್ಕೆ ಸಂಘದ ಕಚೇರಿಯಲ್ಲಿ ಕೊಡವ ಉಪುಪಿನೊಂದಿಗೆ ಪಾಲ್ಗೊಂಡು ಗದ್ದೆಗೆ ತೆರಳಿ ಕದಿರು ತೆಗೆಯಲಾಗುವದು ಎಂದು ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಉತ್ತಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೋಮವಾರಪೇಟೆ : ಇಲ್ಲಿನ ಕೊಡವ ಸಮಾಜದ ವತಿಯಿಂದ ಹುತ್ತರಿ ಹಬ್ಬದ ಪ್ರಯುಕ್ತ ತಾ. 23ರಂದು ಸಂಜೆ 7.30 ಗಂಟೆಗೆ ನೆರೆಕಟ್ಟುವದು, ರಾತ್ರಿ 8.30ಕ್ಕೆ ಆಂಜನೇಯ ದೇವಾಲಯ ಬಳಿಯಿರುವ ಗದ್ದೆಯಲ್ಲಿ ಕದಿರು ತೆಗೆಯಲಾಗುವದು ಎಂದು ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ತಿಳಿಸಿದ್ದಾರೆ.