ಸೋಮವಾರಪೇಟೆ, ನ.21: ಜಿಲ್ಲೆಯ ಇತರ ಪೊಲೀಸ್ ಠಾಣೆಗಳಿಗೆ ಹೋಲಿಸಿದರೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ಆಗಮಿಸಲು ಠಾಣಾಧಿಕಾರಿ ಗಳು ಹಿಂದೇಟು ಹಾಕುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ.

ಕಳೆದ 50 ದಿನಗಳಿಂದ ಸೋಮವಾರಪೇಟೆ ಠಾಣೆಗೆ ಠಾಣಾಧಿಕಾರಿಯೇ ಇಲ್ಲ. ಎಎಸ್‍ಐ ಅವರೇ ಪ್ರಭಾರ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾನೂನು ಸುವ್ಯವಸ್ಥೆಯನ್ನು ಪರಿಣಾಮಕಾರಿ ಯಾಗಿ ಪಾಲಿಸಲು ಸಮಸ್ಯೆ ಯಾಗುತ್ತಿದೆ. ಕಳೆದ 2 ವರ್ಷಗಳಿಂದ ಈ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಣ್ಣ ಅವರು ಅಕ್ಟೋಬರ್ ತಿಂಗಳಿನಿಂದ ಚಾಮರಾಜನಗರ ಪೊಲೀಸ್ ಠಾಣೆಗೆ ವರ್ಗಾವಣೆ ಗೊಂಡ ನಂತರ ಇಲ್ಲಿಗೆ ಆಗಮಿಸಲು ಠಾಣಾಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಸೋಮವಾರಪೇಟೆ ಠಾಣೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ನಾಲ್ಕೈದು ಮಂದಿ ಎಸ್.ಐ.ಗಳಿಗೆ ಸೂಚನೆ ನೀಡಲಾಗಿದ್ದರೂ ಸಹ, ಅವರುಗಳು ಇತ್ತ ತಲೆಹಾಕಿಯೂ ನೋಡಿಲ್ಲ. ತಮ್ಮದೇ ಪ್ರಭಾವ ಬಳಸಿ ಇಲ್ಲಿಗೆ ಪೋಸ್ಟಿಂಗ್ ಆಗುವದನ್ನು ತಪ್ಪಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಟಿಪ್ಪು ಜಯಂತಿ ಸಂದರ್ಭ ಸುಂಟಿಕೊಪ್ಪದ ಠಾಣಾಧಿಕಾರಿ ಜಯರಾಂ ಅವರನ್ನು ನೇಮಿಸಿದ್ದು, ಟಿಪ್ಪು ಜಯಂತಿ ಮುಕ್ತಾಯಗೊಂಡ ತಕ್ಷಣ ಮರಳಿ ಸುಂಟಿಕೊಪ್ಪಕ್ಕೆ ತೆರಳಿದ್ದಾರೆ. ನೂತನವಾಗಿ ಬರುವ ಠಾಣಾಧಿಕಾರಿಗಳು, ಈ ಹಿಂದೆ ಸೋಮವಾರಪೇಟೆಯಲ್ಲಿ ಕರ್ತವ್ಯ ನಿರ್ವಹಿಸಿ ತೆರಳಿದ ಠಾಣಾಧಿಕಾರಿ ಗಳೊಂದಿಗೆ ಠಾಣೆಯ ಪೂರ್ವಾಪರ ಗಳನ್ನು ವಿಚಾರಿಸುತ್ತಿದ್ದು, ‘ಪಾಸಿಟಿವ್ ರಿಪ್ಲೇ’ಗಳು ಬಾರದ ಕಾರಣ ಅವರುಗಳೂ ಮನಸ್ಸು ಮಾಡುತ್ತಿಲ್ಲ ಎನ್ನಲಾಗಿದೆ.

ಅಂತದ್ದೇನಿದೆ ಇಲ್ಲಿ?: ಸೋಮವಾರಪೇಟೆ ಠಾಣಾ ಸರಹದ್ದು ಅತ್ಯಂತ ಕಠಿಣ ಹಾದಿಗಳ ಬೆಟ್ಟಗುಡ್ಡ ಪ್ರದೇಶ. ಜನಸಂಖ್ಯೆ ಕಡಿಮೆಯಿದ್ದರೂ ಅಪರಾಧ ಪ್ರಕರಣಗಳಿಗೆ ಕಡಿಮೆ ಇಲ್ಲ. ಅದರಂತೆ ದೊಡ್ಡ ಲಿಮಿಟ್ಸ್ ಹೊಂದಿರುವ ಠಾಣೆ. ಕೋಮುಸೂಕ್ಷ್ಮ ಪ್ರದೇಶವೆಂದು ಪೊಲೀಸ್ ಇಲಾಖಾಧಿಕಾರಿಗಳೇ ತೀರ್ಮಾನಿಸಿರುವ ಹಿನ್ನೆಲೆ, ಆಗಾಗ್ಗೆ ನಡೆಯುವ ಗಲಭೆ, ಹಬ್ಬ ಹರಿದಿನ, ಜಯಂತಿಗಳಿಗೆ ಹೊರಭಾಗದಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಎಲ್ಲರಿಗೂ ವಸತಿ, ಊಟೋಪಚಾರ, ಹಿರಿಯ ಅಧಿಕಾರಿಗಳ ಉಪಚಾರವನ್ನು ಸ್ಥಳೀಯ ಠಾಣಾಧಿಕಾರಿಯೇ ವಹಿಸಿಕೊಳ್ಳಬೇಕಾಗುತ್ತದೆ.

ಇಲಾಖೆಯಿಂದ ನೀಡುವ ಖರ್ಚುವೆಚ್ಚ ಸಾಕಾಗುವದಿಲ್ಲ. ಇದು ಹೆಚ್ಚುವರಿ ಹೊರೆಯಾಗಲಿದೆ ಎಂಬಿತ್ಯಾದಿ ವಿಷಯಗಳು ಹರಿದಾಡುತ್ತಿವೆ. ಇದರೊಂದಿಗೆ ಗುಡ್ಡಗಾಡು ಪ್ರದೇಶವಾಗಿರುವದರಿಂದ ಕರ್ತವ್ಯ ಪಾಲನೆಯೂ ಕಷ್ಟಕರ ಎಂಬ ಅಂಶಗಳು ಚಾಲ್ತಿಯಲ್ಲಿರುವದರಿಂದ ಈ ಠಾಣೆಗೆ ಠಾಣಾಧಿಕಾರಿಗಳು ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆಯ ಕಂಟ್ರೋಲ್‍ನಲ್ಲಿ ಇಟ್ಟುಕೊಳ್ಳಲು ದಕ್ಷ ಠಾಣಾಧಿಕಾರಿಯ ಕೊರತೆಯಿಂದ ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಯಂತೂ ಹಳಿತಪ್ಪಿದ್ದು, ದಾಖಲೆಪತ್ರಗಳು, ವಿಮೆ ರಹಿತ ವಾಹನಗಳ ಓಡಾಟಗಳಿಗೆ ಬ್ರೇಕ್ ಬಿದ್ದಿಲ್ಲ. ಹೈವೇ ಪಟ್ರೋಲ್ ವಾಹನವನ್ನು ನೀಡಲಾಗಿದ್ದರೂ ಪಟ್ಟಣದಲ್ಲಿ ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್, ಅಪ್ರಾಪ್ತ ವಯಸ್ಕರು ವಾಹನ ಓಡಿಸುವದು ಸಾಮಾನ್ಯವಾಗಿದೆ. ಇದರೊಂದಿಗೆ ಟ್ರಾಫಿಕ್ ಸಮಸ್ಯೆಯೂ ಪಟ್ಟಣವನ್ನು ಕಾಡುತ್ತಿದ್ದು, ಎಲ್ಲವನ್ನೂ ಹಿಡಿತಕ್ಕೆ ತರಲು ದಕ್ಷ ಠಾಣಾಧಿಕಾರಿಯ ನೇಮಕವಾಗಬೇಕಿದೆ.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಲವಷ್ಟು ದಂಧೆಗಳು ನಡೆಯುತ್ತಿವೆ. ಗೂಂಡಾ ಪ್ರವೃತ್ತಿ ಹೆಚ್ಚುತ್ತಿವೆ ಎಂಬ ಆರೋಪಗಳೂ ಸಾರ್ವಜನಿಕರಿಂದ ಕೇಳಿಬರುತ್ತಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ. - ವಿಜಯ್ ಹಾನಗಲ್