ವೀರಾಜಪೇಟೆ, ನ. 21: ಜಿಲ್ಲೆಯಲ್ಲಿ ಇತ್ತಿಚೀಗೆ ನಡೆದ ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತ ಪ್ರದೇಶಗಳಿಗೆ ಸರ್ಕಾರದಿಂದ ಪಡಿತರ ವ್ಯವಸ್ಥೆಯನ್ನು ಮಾಡಲಾಗಿದ್ದು, ಸರ್ಕಾರದ ನಿರ್ಲಕ್ಷ್ಯದಿಂದ ಪಡಿತರ ಸಾಮಗ್ರಿಗಳು ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ಕಚೇರಿಯಲ್ಲಿ ಕೊಳೆಯುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಂಡೇಟ್ಟಿರ ಅನಿಲ್ ಅಯ್ಯಪ್ಪ ಆರೋಪಿಸಿದ್ದಾರೆ.

ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಿಗೆ ಸರಬರಾಜು ಮಾಡಲು ಸರ್ಕಾರದಿಂದ 502 ಕಿಟ್‍ಗಳಲ್ಲಿ ಪಡಿತರ ಸಾಮಗ್ರಿಗಳನ್ನು ನೀಡಲಾಗಿತ್ತು. ಅದರಲ್ಲಿ 372 ಕಿಟ್‍ಗಳನ್ನು ಸಂತ್ರಸ್ತರಿಗೆ ಸರಬರಾಜು ಮಾಡಲಾಗಿದೆ. ಉಳಿದ 120 ಕಿಟ್‍ಗಳು ಹಾಗೆಯೇ ಉಳಿದಿದೆ. ಒಂದು ಕಿಟ್‍ನಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆಗಳನ್ನು ನೀಡಲಾಗುತ್ತಿದೆ. ಅಕ್ಕಿಯಲ್ಲಿ ಹುಳ ತುಂಬಿ ಕಚೇರಿ ಯಲ್ಲಿಯೂ ಹರಿದಾಡುತ್ತಿರುವದು ಕಾಣುತ್ತಿದೆ. ಸರ್ಕಾರ ಗುರುತು ಮಾಡಿದ ಸಂತ್ರಸ್ತರಿಗೆ ಮಾತ್ರ ಪಡಿತರ ವಿತರಣೆ ಮಾಡಲಾಗಿದ್ದು, ಹಲವಾರು ಜನರನ್ನು ಕೈ ಬಿಡಲಾಗಿದೆ. ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಿಗೆ ಕಿಟ್‍ಗಳನ್ನು ನೀಡಲಾಗಿದ್ದು, ಅಸಮರ್ಪಕ ಸರಬರಾಜಿನಿಂದ ಸಂತ್ರಸ್ತರ ಕಿಟ್‍ಗಳು ಹಾಗೆಯೇ ಉಳಿದುಕೊಂಡಿವೆ. ಕಿಟ್‍ಗಳ ಬಗ್ಗೆ ಹಲವಾರು ಬಾರಿ ಜಿಲ್ಲಾ ಆಹಾರ ಉಪ ನಿರ್ದೇಶಕರು, ತಾಲೂಕು ಆಹಾರ ನಿರ್ದೇಶಕರಿಗೆ ದೂರು ನೀಡಿದರೂ ಯಾವದೇ ಪ್ರಯೋಜ ನವಾಗಿಲ್ಲ ಎಂದು ದೂರಿದರು.