ಕುಶಾಲನಗರ, ನ. 21 : ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಯೊಬ್ಬನ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.
ಪಾಲಿಟೆಕ್ನಿಕ್ ಕಾಲೇಜಿನ ಪ್ರಥಮ ವರ್ಷದ ಸಿವಿಲ್ ವಿಭಾಗದ ವಿದ್ಯಾರ್ಥಿ ಕಾರ್ತಿಕ್ (17) ಎಂಬಾತನ ಮೃತದೇಹ ಪತ್ತೆಯಾಗಿದ್ದು, ಈತ ಮಂಗಳವಾರ ಸಂಜೆಯಿಂದ ಕಾಣೆಯಾಗಿದ್ದ ಎನ್ನಲಾಗಿದೆ. ಕಾರ್ತಿಕ್ ಮೂಲತಃ ಸಕಲೇಶಪುರ ನಿವಾಸಿಯಾಗಿದ್ದು, ಕುಶಾಲನಗರ ಪಾಲಿಟೆಕ್ನಿಕ್ ಹಾಸ್ಟೆಲ್‍ನಲ್ಲಿ ತಂಗಿದ್ದು ನಾಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭ ಕಾಲೇಜು ಮುಂಭಾಗದಲ್ಲಿ ಕಾವೇರಿ ನದಿಯಲ್ಲಿ ಆತನ ಬಟ್ಟೆ ಬರೆಗಳು ಪತ್ತೆಯಾಗಿವೆ.
ಈ ನಿಟ್ಟಿನಲ್ಲಿ ನದಿಯಲ್ಲಿ ಹುಡುಕಾಟ ಮಾಡಿದಾಗ ಬುಧವಾರ ಸಂಜೆ ವೇಳೆಗೆ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಜಲು ತೆರಳಿದ ಸಂದರ್ಭ ಈ ಘಟನೆ ಸಂಭವಿಸಿರಬಹುದೆಂದು ಸಂಶಯ ವ್ಯಕ್ತಗೊಂಡಿದೆ. ವಿದ್ಯಾರ್ಥಿಯ ಪೋಷಕರು ಕುಶಾಲನಗರಕ್ಕೆ ಆಗಮಿಸಿದ್ದು ಮೃತದೇಹದ ಮರಣೋತ್ತರ ಪರೀಕ್ಷೆ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ.
ಕುಶಾಲನಗರ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್ ವಾರ್ಡನ್ ಜೊತೆಗೆ ವಿಚಾರಣೆ ಕೈಗೊಂಡಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ.