ಗೋಣಿಕೊಪ್ಪಲು, ನ. 20: ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ನೇತೃತ್ವದಲ್ಲಿ ಜಿಲ್ಲೆಯ ಸಮಸ್ಯೆಗಳನ್ನು ಬಗೆ ಹರಿಸುವಂತೆ ಒತ್ತಾಯಿಸಿ ಬೆಂಗಳೂರಿನ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟಿಸಿದರು. ಈ ಸಂದರ್ಭ ಜಿಲ್ಲೆಯ ಸಮಸ್ಯೆಗಳ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಲಾಯಿತು.
ಪ್ರಕೃತಿ ವಿಕೋಪದಿಂದ ನೊಂದ ರೈತರಿಗೆ ಶಾಸ್ವತ ಪರಿಹಾರ, ಹಾಗೂ ಪುನರ್‍ವಸತಿ ಪಲಾನುಭವಿಗಳ ಪಟ್ಟಿಯಲ್ಲಿ ಇರುವ ಲೋಪ ನಿವಾರಣೆ,ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಬಿರುಗಾಳಿ ಮಳೆ, ಭೂಕಂಪನ ಮತ್ತು ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡಗಿನ ರೈತರ ಬೆಳೆ ಮತ್ತು ಆಸ್ತಿ ನಷ್ಟದ ಪರಿಹಾರ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತದ ಮೂಲಕ ನಷ್ಟದ ಪರಿಹಾರ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ರೈತರು ಬೆಳೆಯುವ ಭತ್ತ, ಕಾಫಿ, ಕರಿಮೆಣಸು ಮತ್ತು ಇತರ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ಡಾ|| ಸ್ವಾಮಿನಾಥನ್ ವರದಿಯಂತೆ ಜಾರಿಗೊಳಿಸಬೇಕು. ಜಿಲ್ಲೆಯಲ್ಲಿ ಭತ್ತದ ಕಟಾವು ಬಂದಿದ್ದು ಖರೀದಿಸಲು ತಾಲೂಕುವಾರು ಖರೀದಿ ಕೇಂದ್ರ ತೆರೆಯಬೇಕು.ರೈತರ ಎಲ್ಲಾ ಸಾಲ ಮನ್ನಾ ಮಾಡಿ ರೈತರನ್ನು ಸಾಲ ಮುಕ್ತರನ್ನಾಗಿಸಬೇಕು. ಸರ್ಕಾರಿ ಹಾಗೂ ಇತರ ಇಲಾಖಾ ನೌಕರರ ವೇತನ ಪ್ರತಿ ಮೂರು ಅಥವಾ ನಾಲ್ಕು ವರ್ಷಗಳಿಗೊಮ್ಮೆ ಹೆಚ್ಚಿಸುವಂತೆ ರೈತರ ಬೆಳೆಗೂ ಸೂಕ್ತ ರೀತಿಯಲ್ಲಿ ವೈಜ್ಞಾನಿಕ ಬೆಲೆ ನೀಡಬೇಕು.ಕೊಡಗು ಪ್ರಕೃತಿ ಆದಾರಿತ ಹಾಗೂ ಸೂಕ್ಷ್ಮ ಪ್ರದೇಶದ ಜಿಲ್ಲೆಯಾಗಿದ್ದು ಇಲ್ಲಿ ಭತ್ತ ಬೆಳೆಯಲು ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಕೇರಳ ಸರ್ಕಾರದಂತೆ ಪ್ರತಿ ಎಕರೆಗೆ 10,000 ಪ್ರೋತ್ಸಾಹಧನ ನೀಡಬೇಕು ರಾಜ್ಯಕ್ಕೆ ಹೊರರಾಜ್ಯದಿಂದ ಹೊರರಾಷ್ಟ್ರದಿಂದ ಬರುತ್ತಿರುವ ಕರಿಮೆಣೆಸು ಸಂಪೂರ್ಣ ವಾಗಿ ನಿಷೇಧಿಸಬೇಕು ಜಿಲ್ಲೆಯಲ್ಲಿ ಕಾಡಾನೇ, ಹುಲಿ ಮತ್ತು ಇತರ ವನ್ಯ ಜೀವಿಗಳ ಹಾವಳಿಯಿಂದ ಹಲವಾರು ರೈತರ ಬೆಳೆ ದನ ಕರು ಹಾಗೂ ಆಸ್ತಿ ನಷ್ಟವಾಗುತ್ತಿದ್ದು ಇದನ್ನು ತಡೆಗಟ್ಟಲು ಸರ್ಕಾರವು ಅರಣ್ಯ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಬೇಕು.ವನ್ಯ ಜೀವಿಗಳಿಂದ ಯಾವದೇ ರೈತನ ಜೀವ ಹಾಗೂ ಬೆಳೆ ನಷ್ಟವಾದಲ್ಲಿ ಪರಿಹಾರದ ಮೊತ್ತ ವೈಜ್ಞಾನಿಕವಾಗಿ ನೀಡಬೇಕು.ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯ ಮತ್ತು ಮರಗಳ ನಾಶ ಹಾಗೂ ಕೃಷಿ ಭೂ ಪರಿವರ್ತನೆ ಕೂಡಲೇ ನಿಲ್ಲಬೇಕು, ಜಿಲ್ಲಾದ್ಯಂತ ರೆವಿನ್ಯೂ, ಸರ್ವೇ, ಅರಣ್ಯ ಹಾಗೂ ಇತರ ಇಲಾಖಾ ನೌಕರರನ್ನು ಸರ್ಕಾರದ ಆದೇಶದಂತೆ ಮೂರು ವರ್ಷಗಳಿಗೊಮ್ಮೆ ವರ್ಗಾವಣೆ ಮಾಡಬೇಕು ಎಂಬ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆ ವೇಳೆ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ,ಮುಖಂಡರಾದ ಪುಚ್ಚಿಮಾಡ ಸುಭಾಶ್,ಪುಚ್ಚಿಮಾಡ ಸುನೀಲ್,ಮಂಡೇಪಂಡ ಪ್ರವೀಣ್, ಚಪ್ಪುಡೀರ ಕಾರ್ಯಪ್ಪ, ಮಹೇಶ್, ಉಮೇಶ್, ಮುಂತಾದವರು ಹಾಜರಿದ್ದರು.