ಮಡಿಕೇರಿ, ನ.21 : ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಮೂರು ತಿಂಗಳು ಕಳೆದಿದ್ದರೂ, ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ ಎಂದು ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ ಆರೋಪಿಸಿದೆ. ಪ್ರಕೃತಿ ವಿಕೋಪ ಹಾನಿಗೆ ಪರಿಹಾರವಾಗಿ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ 546.21 ಕೋಟಿ ರೂ. ಅನುದಾನದಲ್ಲಿ ಶೇ.80ರಷ್ಟು ಮೊತ್ತವನ್ನು ಕೊಡಗಿಗೆ ಬಿಡುಗಡೆ ಮಾಡಬೇಕು ಎಂದು ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು, ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ ಮೂರು ತಿಂಗಳುಗಳು ಕಳೆದಿವೆ. ಆರಂಭದಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತ ಸಂತ್ರಸ್ತರ ನೆರವಿಗಾಗಿ ಸಾಕಷ್ಟು ಕಾಳಜಿ ವಹಿಸಿದ್ದು, ಇದಕ್ಕಾಗಿ ಅವರುಗಳಿಗೆ ಅಭಿನಂದನೆ ಸಲ್ಲಿಸಲಾಗುವದು. ಆದರೆ ಇತ್ತೀಚಿನ ದಿನಗಳಲ್ಲಿ ಸಂತ್ರಸ್ತರಿಗೆ ವಿತರಿಸುವದಕ್ಕಾಗಿ ಮಾದರಿ ಮನೆಗಳನ್ನು ನಿರ್ಮಿಸಿ ಪ್ರದರ್ಶನ ಕ್ಕಿಟ್ಟಿರುವದು ಹೊರತು ಪಡಿಸಿದರೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯಾವದೇ ಪ್ರಗತಿ ಕಂಡು ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಇನ್ನು ನಾಲ್ಕು ತಿಂಗಳುಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಆ ಬಳಿಕ ಕೊಡಗಿನಲ್ಲಿ ಮನೆ ಮಾತ್ರವಲ್ಲ, ಗುಡಿಸಲು ನಿರ್ಮಿಸುವದಕ್ಕೂ ಸಾಧ್ಯವಾಗುವದಿಲ್ಲ. ನಿರಾಶ್ರಿತರಿಗೆ ಪರಿಹಾರ ಕಲ್ಪಿಸುವಲ್ಲಿ ಜಿಲ್ಲಾಡಳಿತ, ಸರಕಾರ ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂಬಂಧವಾಗಿ ಜನಪ್ರತಿನಿದಿ üಗಳು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒಂದು ವಾರದ ಗಡುವು ನೀಡಲಾಗುವದು. ಅದಕ್ಕೂ ಸ್ಪಂದನ ದೊರಕದಿದ್ದಲ್ಲಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವದು. ಪಕ್ಷಾತೀತ ಮತ್ತು ಜಾತ್ಯತೀತವಾದ ಈ ಸಮಿತಿಯ ಹೋರಾಟ ನಿರಾಶ್ರಿತರು ತಮ್ಮ ಹಿಂದಿನ ಸ್ಥಿತಿಯನ್ನು ಕಂಡು ಕೊಳ್ಳುವವರೆಗೂ ಮುಂದುವರಿಯಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಹತ್ತಾರು ಸಚಿವರುಗಳು, ಅಧಿಕಾರಿಗಳು ಕೊಡಗಿಗೆ ಆಗಮಿಸಿ ಸಭೆಗಳನ್ನು ನಡೆಸಿದ್ದಾರೆ. ಆದರೆ ಯಾರು ಕೂಡ ಸಂಸತ್ರಸ್ತರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುವ ಪ್ರಯತ್ನ ಮಾಡಿಲ್ಲ. ಇದರಿಂದಾಗಿ ಇಂದಿಗೂ ನೈಜ ಸಂತ್ರಸ್ತರು, ನಿರಾಶ್ರಿತರನ್ನು ಗುರುತಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಅಲ್ಲದೆ ವೈಜ್ಞಾನಿಕವಾಗಿ ಚಿಂತನೆ ನಡೆಸುವ ಪ್ರಯತ್ನವನ್ನೂ ಮಾಡಿಲ್ಲ ಎಂದು ದೇವಯ್ಯ ಟೀಕಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಸಭೆಗಳನ್ನು ನಡೆಸುವಾಗ ಈ ಸಮಿತಿಯನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ದೇವಯ್ಯ ಮನವಿ ಮಾಡಿದರು.

ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ರಾಜ್ಯ ಹಾಗೂ ದೇಶ ವಿದೇಶಗಳಲ್ಲಿರುವ ಕೊಡಗಿನ ಅಭಿಮಾನಿಗಳು ಸಾಕಷ್ಟು ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ, ದೃಶ್ಯಮಾಧ್ಯಮಗಳ ಪರಿಹಾರ ನಿಧಿಗಳಿಗೆ ದೇಣಿಗೆಯಾಗಿ ನೀಡಿದ್ದಾರೆ. ಆದರೆ ಇದುವರೆಗೂ ಆ ಹಣ ಸಂತ್ರಸ್ತರಿಗೆ ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈಗಲಾದರೂ ರಾಜ್ಯ ಸರಕಾರ ಹಾಗೂ ಮಾಧ್ಯಮಗಳು ಕೊಡಗಿನ ಪ್ರಾಕೃತಿಕ ವಿಕೋಪದ ಹೆಸರಿನಲ್ಲಿ ಸಂಗ್ರಹಿಸಿರುವ ಮೊತ್ತದ ಕುರಿತು ಶ್ವೇತಪತ್ರವೊಂದನ್ನು ಹೊರಡಿಸಬೇಕು ಎಂದು ಆಗ್ರಹಿಸಿದರು.

ಪ್ರಕೃತಿ ವಿಕೋಪದ ಸಂದರ್ಭ ಕೆಲವರು ಮನೆ ಕಳೆದುಕೊಂಡರೂ ತೋಟ ಹಾಗೂ ಒಂದಷ್ಟು ಜಾಗವನ್ನು ಉಳಿಸಿಕೊಂಡವರಿದ್ದಾರೆ. ಅಂತಹ ವರನ್ನು ಗುರುತಿಸಿ ಮನೆಗಳನ್ನು ತಾವೇ ಕಟ್ಟಿಕೊಳ್ಳಲು ಸಾಧ್ಯವಿರುವವರಿಗೆ ಸರಕಾರ ಹಣ ಬಿಡುಗಡೆ ಮಾಡಿದಲ್ಲಿ ಅವರು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಲಿದೆ. ಇನ್ನು ಮನೆ ಹಾಗೂ ತೋಟಗಳನ್ನು ಕಳೆದುಕೊಂಡು ಸಂಪೂರ್ಣವಾಗಿ ನಿರಾಶ್ರಿತರಾದವರಿಗೆ ಸರಕಾರ ಸೂಕ್ತವಾದ ಜಾಗವನ್ನು ಗುರುತಿಸಿ ಮನೆಗಳನ್ನು ನಿರ್ಮಿಸಿ ಕೊಡುವಂತಾಗಬೇಕು ಎಂದು ದೇವಯ್ಯ ಸಲಹೆ ನೀಡಿದರು.

ಕೇಂದ್ರ ಸರಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ರಾಜ್ಯಕ್ಕೆ 546.21 ಕೋಟಿ ರೂ.ಗಳ ನೆರವನ್ನು ಘೋಷಿಸಿದೆ. ರಾಜ್ಯದ ಇತರೆಡೆಗಳಿಗಿಂತ ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿರುವ ದರಿಂದ ಆ ಮೊತ್ತದ ಶೇ.80ರಷ್ಟು ಹಣವನ್ನು ಕೊಡಗಿನ ನಿರಾಶ್ರಿತರ ಪುನರ್ವಸತಿ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಒದಗಿಸು ವಂತಾಗಬೇಕು ಎಂದರು. ಪುನರ್ ನಿರ್ಮಾಣದ ಪ್ರತಿಯೊಂದು ಕಾರ್ಯದ ಉಸ್ತುವಾರಿಯನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಓರ್ವ ಜಿಲ್ಲಾಧಿಕಾರಿ, ಕೇಂದ್ರ ಸರಕಾರದ ಓರ್ವ ನುರಿತ ಐಎಎಸ್ ಅಧಿಕಾರಿ, ಓರ್ವ ಸ್ಥಳೀಯ ನುರಿತ ಅನುಭವಿ ಹಿರಿಯ ವ್ಯಕ್ತಿಯನ್ನೊಳ ಗೊಂಡ ಸಮನ್ವಯ ಸಮಿತಿಯನ್ನು ರಚಿಸಬೇಕು ಮತ್ತು ಹಣ ಸೋರಿ ಹೋಗುವದನ್ನು ತಡೆಯುವ ನಿಟ್ಟಿನಲ್ಲಿ ಪಾರದರ್ಶಕತೆಯನ್ನು ಕಾಪಾಡು ವದರೊಂದಿಗೆ ಎಲ್ಲಾ ವ್ಯವಸ್ಥೆಗಳ ಫಲ ಸಂತ್ರಸ್ತರಿಗೆ ನೇರವಾಗಿ ದೊರಕು ವಂತಾಗಲು ಈ ಸಮನ್ವಯ ಸಮಿತಿ ಯ ಸಹಕಾರ ಪಡೆಯಬೇಕು ಎಂದು ದೇವಯ್ಯ ಒತ್ತಾಯಿಸಿದರು.

ಸಮಿತಿಯ ಪ್ರಮುಖ ಎ.ಟಿ.ಮಾದಪ್ಪ ಮಾತನಾಡಿ, ಕೊಡಗಿನಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪ ಮಾನವ ನಿರ್ಮಿತ ಎಂದು ಭೂ ವಿಜ್ಞಾನಿಗಳು ನೀಡಿರುವ ವರದಿ ಕಪೋಲ ಕಲ್ಪಿತ ಮತ್ತು ಜನರ ಹಾದಿತಪ್ಪಿಸುವ ವರದಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ಇತರ ಭಾಗಗಳಂತೆ ಭೂ ಕುಸಿತಕ್ಕೊಳಗಾದ ಪ್ರದೇಶಗಳಲ್ಲೂ ಕಾಫಿ ಕೃಷಿ ಮಾಡಿಕೊಂಡಿದ್ದು, ಇಲ್ಲಿ ಇತರ ಯಾವದೇ ವಾಣಿಜ್ಯ ಉದ್ದೇಶದ ನಿರ್ಮಾಣಗಳು ನಡೆದಿಲ್ಲ. ಒಂದು ವೇಳೆ ಮಾನವ ನಿರ್ಮಿತ ಪ್ರಾಕೃತಿಕ ವಿಕೋಪವೆಂದಾದಲ್ಲಿ ಅದಕ್ಕೆ ಕೂಟುಹೊಳೆ ಜಲಾಶಯ ಹಾಗೂ ಹಾರಂಗಿ ಜಲಾಶಯದಲ್ಲಿ ಅತಿ ಹೆಚ್ಚು ನೀರನ್ನು ಸಂಗ್ರಹ ಮಾಡಿದ ಪರಿಣಾಮವಿರಬಹುದು. ಆದ್ದರಿಂದ ಇದಕ್ಕೆ ಸಂಬಂಧಿಸಿದ ಇಂಜಿನಿಯರ್ ಗಳು ಹೊಣೆಗಾರ ರಾಗಬೇಕಾಗುತ್ತದೆ ಎಂದು ಆರೋಪಿಸಿದರು. ಕೊಡಗಿನಲ್ಲಿ ಭೂ ಕಂಪನವಾಗುವ ಬಗ್ಗೆ ಯಾವದೇ ವಿಜ್ಞಾನಿಗಳು ಮುನ್ಸೂಚನೆ ನೀಡಿರಲಿಲ್ಲ. ಅಲ್ಲದ ಭೂ ಕಂಪನದ ಬಳಿಕ ಉಂಟಾಗಬಹುದಾದ ಅನಾಹುತಗಳ ಬಗ್ಗೆಯೂ ವಿಜ್ಞಾನಿಗಳು, ಅಧಿಕಾರಿ ಗಳು ಮಾಹಿತಿ ಒದಗಿಸಿಲ್ಲ. ಕೇವಲ ಒಂದು ವಾರದಲ್ಲಿ ನಿರಂತರವಾಗಿ ಅತಿ ಹೆಚ್ಚು ಮಳೆಯಾದ ಪರಿಣಾಮದಿಂದ ಭೂಕುಸಿತ ಉಂಟಾಗಿದ್ದರೂ, ವೈಜ್ಞಾನಿಕವಾದ ಈ ಸತ್ಯವನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ ಎಂದು ಮಾದಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಕುಂಬುಗೌಡನ ಪ್ರಸನ್ನ, ಪದಾಧಿಕಾರಿಗಳಾದ ಚಾಮೇರ ಪಳಂಗಪ್ಪ ಹಾಗೂ ಕಿಮ್ಮುಡಿರ ಜಗದೀಶ್ ಉಪಸ್ಥಿತರಿದ್ದರು.