ಮಡಿಕೇರಿ, ನ. 21: ಭಾಗಮಂಡಲ ನಾಡಿನ ಮಕ್ಕಳ ಹಿತದೃಷ್ಟಿಯಿಂದ ಹೊಸ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸುವಂತೆ ಕೋರಿ ಕಾವೇರಿ ಜನ್ಮ ಭೂಮಿ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿಯಾದ ಮೊಟ್ಟನ ರವಿಕುಮಾರ್ ಅವರು ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯನ್ನು ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಕಾಲೇಜು ಶಿಕ್ಷಣ ಆಯುಕ್ತರಿಗೆ ಸೂಚಿಸಲಾಗಿದೆ.
ಈ ಸೂಚನೆಯ ಮೇರೆಗೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಕಾಲೇಜು ಪ್ರಾರಂಭಿಸುವ ಅವಶ್ಯಕತೆ ಇದ್ದಲ್ಲಿ, ಮೊದಲ ವರ್ಷದಲ್ಲಿ ಪ್ರಾರಂಭಿಸಬಹು ದಾದ ಕೋರ್ಸ್‍ಗಳು, ಸ್ಥಳೀಯವಾಗಿ ದೊರಕಬಹುದಾದ ಮೂಲಭೂತ ಸೌಕರ್ಯಗಳು, ನಿವೇಶನ ಲಭ್ಯತೆ ಹಾಗೂ ಪ್ರಸ್ತಾಪಿತ ಕಾಲೇಜಿಗೆ ಲಭ್ಯವಿರುವ ವಿದ್ಯಾರ್ಥಿಗಳ ಸ್ಪಷ್ಟವಾದ ಸಂಖ್ಯೆಯ ಬಗ್ಗೆ ಸವಿವರವಾದ ವರದಿಯನ್ನು ತುರ್ತಾಗಿ ಸಲ್ಲಿಸಲು ಆದೇಶಿಸಿರುವರು.
ಈ ಆದೇಶದ ಅನ್ವಯ ತಾ. 19 ರಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆಗೆ ಆಗಮಿಸಿತ್ತು. ಹಿರಿಯ ಅಧಿಕಾರಿಗಳ ತಂಡದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಅಪ್ಪಾಜಿಗೌಡ, ವಿಶೇಷ ಅಧಿಕಾರಿಗಳಾದ ಡಾ. ಶ್ರೀನಿವಾಸಯ್ಯ, ಡಾ. ಶ್ರೀಧರ ಮಣಿಮಾಣಿ, ಡಾ. ದಯಾನಂದ ಕೂಡಕಂಡಿ, ಇದ್ದರು.
ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಭಾಗಮಂಡಲದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ನಾಗರಿಕರು ಮತ್ತು ವಿದ್ಯಾಭಿಮಾನಿಗಳ ಸಮಾಲೋಚನ ಸಭೆಯನ್ನು ನಡೆಸಿದರು. ಸಭೆಯ ಅಧ್ಯಕ್ಷತೆಯನ್ನು ಭಾಗಮಂಡಲ ಗ್ರಾ.ಪಂ. ಅಧ್ಯಕ್ಷೆ ಸುಮಿತ್ರಾ ವಹಿಸಿದ್ದರು. ನೂತನ ಕಾಲೇಜು ಪ್ರಾರಂಭವಾದರೆ ನೂರಾರು ಬಡ ವಿದ್ಯಾರ್ಥಿಗಳಿಗೆ ಪದವಿ ಪಡೆಯುವ ಅವಕಾಶ ದೊರೆಯುತ್ತದೆ ಎಂದು ಅವರು ಅಭಿಪ್ರಾಯಿಸಿದರು.
ಸಭೆಯ ಬಗ್ಗೆ ಪರಿಶೀಲನ ತಂಡದ ಅಧಿಕಾರಿ ಡಾ. ಶ್ರೀನಿವಾಸಯ್ಯ ಪ್ರಾಸ್ತಾವಿಕವಾಗಿ ಸಭೆಗೆ ತಿಳಿಸಿದರು. ಮೊಟ್ಟನ ಜ್ಯೋತಿ ಶಂಕರ ಅವರು ಭಾಗಮಂಡಲ ನಾಡು ಪವಿತ್ರ ಕ್ಷೇತ್ರ, ಹೃದಯವಂತರ ನಾಡು, ಇಲ್ಲಿ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಮುಗಿದ ನಂತರ ದೂರದ ಊರುಗಳಿಗೆ ಹೋಗಿ ಪದವಿಯ ಶಿಕ್ಷಣ ಪಡೆಯಬೇಕಾಗಿದೆ. ಹಾಗಾಗಿ ಪದವಿ ಕಾಲೇಜು ಪ್ರಾರಂಭಿಸುವದು ಅಗತ್ಯ ಎಂದು ಹೇಳಿದರು.
ಸಭೆಯಲ್ಲಿ ಹಾಜರಿದ್ದ ಕಾವೇರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮಾತನಾಡಿ, ಪದವಿ ಕಾಲೇಜು ಸರಕಾರ ಪ್ರಾರಂಭಿಸಲು ಅಗತ್ಯವಾದ ನಿವೇಶನ, ತಾತ್ಕಾಲಿಕ ವ್ಯವಸ್ಥೆಯನ್ನು ಕಾವೇರಿ ವಿದ್ಯಾಸಂಸ್ಥೆಯಲ್ಲಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ನೂತನ ಕಾಲೇಜು ಪ್ರಾರಂಭಿಸುವ ಅಗತ್ಯತೆ ತುಂಬಾ ಇದೆ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಇದು ವರದಾನವಾಗಲಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ವಿದ್ಯಾರ್ಥಿನಿಯರಿಗೆ ತುಂಬಾ ಅನುಕೂಲವಾಗುತ್ತದೆ. ಪದವಿ ಶಿಕ್ಷಣಕ್ಕೆ ದೂರ ದೂರದ ಊರುಗಳಿಗೆ ಅಲಿಯುವ ಪ್ರಮೇಯ ಬರುವದಿಲ್ಲ. ನೂತನ ಕಾಲೇಜು ಪ್ರಾರಂಭವಾದರೆ ಕರಿಕೆ, ಬಲ್ಲಮಾವಟಿ, ಬೆಟ್ಟಗೇರಿ ಈ ಎಲ್ಲಾ ಕಡೆಯಿಂದ ವಿದ್ಯಾರ್ಥಿಗಳು ಆಗಮಿಸಿ ವಿದ್ಯಾರ್ಜನೆಯನ್ನು ಮಾಡಲು ಸಹಕಾರಿಯಾಗುತ್ತದೆ ಎಂದು ಸಭೆಯಲ್ಲಿ ಹಾಜರಿದ್ದ ಬಾರಿಕೆ ವೆಂಕಟರಮಣ, ಸೂರ್ತಲೆ ಸೋಮಣ್ಣ, ರಮೇಶ್ ಜೋಯಪ್ಪ, ಸುನಿಲ್ ಪತ್ರಾವೋ, ರವಿ ಹೆಬ್ಬಾರ್, ದೇವಂಗೋಡಿ ಹರ್ಷ, ಕುದುಕುಳಿ ಭರತ, ರ್ಯಾಂಸ್ ಮೊದಲಾದವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪರಿಶೀಲನಾ ತಂಡದ ಮುಖ್ಯಸ್ಥರಾದ ಡಾ. ಅಪ್ಪಾಜಿಗೌಡ ಮಾತನಾಡಿದರು. ಸಭೆಯಲ್ಲಿ ಭಾಗಮಂಡಲ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅಶೋಕ್, ಗ್ರಾ.ಪಂ. ಸರ್ವ ಸದಸ್ಯರು, ವಿದ್ಯಾಭಿಮಾನಿಗಳು, ನಾಗರಿಕರು ಹಾಜರಿದ್ದರು. ಸಭೆಯ ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಭಾಗಮಂಡಲ, ಕೆ.ವಿ.ಜಿ. ಪ್ರಥಮ ದರ್ಜೆ ಕಾಲೇಜು, ಕಾವೇರಿ ವಿದ್ಯಾಸಂಸ್ಥೆಯಲ್ಲಿ ಕಾಲೇಜಿಗೆ ಅಗತ್ಯವಾದ ಸ್ಥಳ ಮತ್ತು ನಿವೇಶನದ ಬಗ್ಗೆ ಪರಿಶೀಲಿಸಲಾಯಿತು.
-ಸುನಿಲ್