ಶ್ರೀಮಂಗಲ, ನ. 20 : ಟಿಪ್ಪು ಜಯಂತಿ ವಿರೋಧಿಸುತ್ತಿರುವ ಕೊಡಗಿನ ಹಿಂದೂ ಸಮುದಾಯ ವನ್ನು ನಿಂದಿಸಿ, ಹಿಂದೂ ಧರ್ಮಕ್ಕೆ ಅವಹೇಳನ ಹಾಗೂ ಕೋಮು ಭಾವನೆಗೆ ಧಕ್ಕೆ ತಂದಿರುವ, ಪ್ರಚೋದನಕಾರಿ ಸಂದೇಶ ನೀಡಿರುವ ಕೊಡಗಿನ ನಾಪೋಕ್ಲು ನಿವಾಸಿ ಆಸಿಫ್ ಎಂಬಾತನ ಮೇಲೆ ಪೊಲೀಸ್ ಮೊಕದ್ದಮೆ ದಾಖಲಾಗಿದ್ದರೂ ಇದುವರೆಗೆ ಬಂಧಿಸದೆ ಇರುವದನ್ನು ಖಂಡಿಸಿ ತಾ. 28 ಕ್ಕೆ ವೀರಾಜಪೇಟೆ ಡಿವೈಎಸ್ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ಹಿಂದೂಪರ ಸಂಘಟನೆಗಳು ನಿರ್ಣಯ ಕೈಗೊಂಡಿದೆ.
ಪೊನ್ನಂಪೇಟೆ ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ ಸಭಾಂಗಣದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಅವರ ಅಧÀ್ಯಕ್ಷತೆಯಲ್ಲಿ ವಿವಿಧ ಹಿಂದೂಪರ ಸಂಘಟನೆ, ಸಂಘ ಪರಿವಾರ ಹಾಗೂ ಕೊಡವ ಸಮಾಜಗಳು ಸೇರಿ ಈ ನಿರ್ಣಯ ಕೈಗೊಂಡಿದ್ದು, ಪ್ರತಿಭಟನೆಯ ಸಂಘಟನೆಗಾಗಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಾಚಿಮಾಡ ಎಂ. ರವೀಂದ್ರ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ.
ಈ ಸಂದರ್ಭ ಸಭೆಯಲ್ಲಿ ಮಾತನಾಡಿದ ರಾಜೀವ್ ಬೋಪಯ್ಯ ಅವರು ಟಿಪ್ಪುವಿನ ಕ್ರೌರ್ಯ ಹಾಗೂ ಹತ್ಯಾಕಾಂಡದ ಬಗ್ಗೆ ಮಾತನಾಡಿದ ಅಂಕಣಕಾರ ಸಂತೋಷ್ ತಮ್ಮಯ್ಯ ಅವರನ್ನು ತುಮಕೂರುವಿನಿಂದ ಡಕಾಯಿತಿ ಪ್ರಕರಣದಲ್ಲಿ ಬಂಧಿಸು ವಂತೆ ಮಧ್ಯರಾತ್ರಿಯಲ್ಲಿ ಅವರ ಪತ್ನಿ ಮನೆಯಿಂದ ಬಂಧಿಸಲಾಯಿತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮವನ್ನು ಅವಹೇಳನ ಹಾಗೂ ಪ್ರಚೋದನಕಾರಿ ಭಾಷಣ ಮಾಡಿರುವ ಆಸಿಫ್ನನ್ನು ಇದುವರೆಗೆ ಬಂಧಿಸಿಲ್ಲ. ನಾಪೋಕ್ಲು ಠಾಣೆಯಲ್ಲಿ ಆಸಿಫ್ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಆದರೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಸಂಶಯ ಮೂಡುವಂತಾಗಿದೆ. ತಾ. 27 ರೊಳಗೆ ಆಸಿಫ್ನನ್ನು ಬಂಧಿಸ ದಿದ್ದರೆ ತಾ. 28 ಕ್ಕೆ ಪ್ರತಿಭಟನೆಯನ್ನು ನಡೆಸಲು ಕರೆ ನೀಡಿದರು.
ಮಾಚಿಮಾಡ ಎಂ. ರವೀಂದ್ರ ಮಾತನಾಡಿ, ಪ್ರತಿ ವರ್ಷ ಟಿಪ್ಪು ಜಯಂತಿ ಹೆಸರಿನಲ್ಲಿ ಸಂಘರ್ಷ ವಾಗುತ್ತಿದೆ ಇದಕ್ಕೆ ಮುಕ್ತಿ ನೀಡಬೇಕಾಗಿದೆ. ಕೊಡಗಿನ ಮೇಲೆ 32 ಬಾರಿ ಹೈದರಾಲಿ ಮತ್ತು ಟಿಪ್ಪು ಆಕ್ರಮಣ ಮಾಡಿದಾಗಲೂ ಸಹ ಕೊಡಗಿನ ಜನರು ಒಗ್ಗಟ್ಟಾಗಿ ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಅದೇ ರೀತಿ ಮತಾಂಧ ಶಕ್ತಿಗಳು ಹಿಂದೂಗಳ ವಿರುದ್ಧ ನಿಂದನೆ ಮಾಡುವದನ್ನು ತಡೆಯಲು ಒಗ್ಗಟ್ಟಿನ ಹೋರಾಟ ಅಗತ್ಯವಿದೆ ಎಂದು ಹೇಳಿದರು.
ಆಸಿಫ್ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಗೋಣಿಕೊಪ್ಪ ಠಾಣೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದಿಂದ ದೂರು ನೀಡಲಾಗಿದ್ದು, ಇದಕ್ಕೆ ಹಿಂಬರಹ ನೀಡಲಾಗಿದೆ. ಆದರೂ ಆಸಿಫ್ನನ್ನು ಬಂಧಿಸಿಲ್ಲ. ಹಿಂದೂ ಧರ್ಮದ ಜನರ ಭಾವನೆಯನ್ನು ಕೆರಳಿಸಿರುವ ಆಸಿಫ್ ವಿರುದ್ದ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿರುವ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಬೇಕಾಗಿದೆ. ಪಕ್ಷ ಹಾಗೂ ಜಾತ್ಯಾತೀತವಾಗಿ ನಡೆಯುವ ಈ ಮೊದಲ ಹಂತದ ಪ್ರತಿಭಟನೆಗೆ ಎಲ್ಲಾ ಹಿಂದೂ ಬಾಂಧವರು ಬೆಂಬಲ ನೀಡಬೇಕೆಂದು ಕರೆ ನೀಡಿದರು.
ಮಲೆಯಾಳ ಸಮಾಜದ ಮುಖಂಡ ಶರತ್ ಕಾಂತ್ ಮಾತನಾಡಿ, ದುಬೈನಲ್ಲಿರುವ ಆಸಿಫ್ ಎಂಬಾತ ಹಿಂದೂ ಸಮಾಜದ ವಿರುದ್ದ ಅವಮಾನಕರವಾಗಿ ಮಾತನಾಡಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಈತನನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಮಾತನಾಡಿದ ಸಂಘ ಪರಿವಾರದ ಮುಖಂಡ ಸುಬ್ರಮಣ್ಯ ಅವರು ಹಿಂದೂ ಧರ್ಮನಿಂದನೆ ಮಾಡಿರುವ ಆಸಿಫ್ನನ್ನು ಬಂಧಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಿಂದೂ ಪರ ಸಂಘಟನೆಗಳು ಒಂದಾಗಿ ಹೋರಾಟ ನಡೆಸಲು ಕರೆ ನೀಡಿದರು.
ಸಭೆಯಲ್ಲಿ ಇಗ್ಗುತಪ್ಪ ಕೊಡವ ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ, ಸಂಘ ಪರಿವಾರದ ಮುಖಂಡರಾದ ಜೀವನ್ ಸುಬ್ರಮಣಿ, ಹಿರಿಯರಾದ ಚೆಪ್ಪುಡಿರ ಸೋಮಯ್ಯ, ಮತ್ರಂಡ ಕಬೀರ್, ಚೆಪ್ಪುಡಿರ ರಾಕೇಶ್, ಮೂಕಳಮಾಡ ಅರಸು, ಕಟ್ಟೇರ ಲಾಲಪ್ಪ, ಅಡ್ಡಂಡ ಸುನೀಲ್, ಮಂಡಚಂಡ ದಿನೇಶ್, ಮುಕುಂದನ್, ವೇಣುಗೋಪಾಲ್, ವಿನೋದ್, ಅಜಿತ್ ಮತ್ತಿತರರು ಹಾಜರಿದ್ದರು.