ವೀರಾಜಪೇಟೆ, ನ. 20: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದುರಂತಕ್ಕೆ ಸಂಬಂಧಿಸಿದಂತೆ ನಮ್ಮ ನಮ್ಮಲ್ಲಿಯೇ ವಿಭಿನ್ನ ಹೇಳಿಕೆ ನಿಲುವುಗಳು ಅಗತ್ಯವಿಲ್ಲ. ಕೊಡವರ ಬೇಡಿಕೆ ಒಂದೇ ರೀತಿ ಆಗಿರಬೇಕು. ಇಲ್ಲದಿದ್ದರೆ ಪರಿಹಾರದ ವಿಚಾರದಲ್ಲಿ ಅಧಿಕಾರಿಗಳು ಗೊಂದಲಕ್ಕೆ ಸಿಲುಕುವ ಅವಕಾಶವೇ ಹೆಚ್ಚು. ಆಗ ನೊಂದವರಿಗೂ ಸೂಕ್ತ ಪರಿಹಾರ ನೀಡಲು ಕಷ್ಟವಾಗುತ್ತದೆ. ಆದ್ದರಿಂದ ನಮ್ಮ ಯಾವದೇ ಸಮಸ್ಯೆಗೆ ವಿಭಿನ್ನ ಧ್ವನಿಯ ಬದಲು ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸುವದು ಸೂಕ್ತ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅಭಿಪ್ರಾಯ ಪಟ್ಟರು.

ವೀರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಇಂದು ನಡೆದ ಸಮಾಜದ 41ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿದ ಮಾತಂಡ ಮೊಣ್ಣಪ್ಪ ಅವರು ಮಾತನಾಡಿದರು. ಅಖಿಲ ಕೊಡವ ಸಮಾಜ ಕೊಡಗಿನ ಎಲ್ಲ ಸಮಸ್ಯೆಗಳ ವಿರುದ್ದ ನಿರಂತರ ಹೋರಾಟ ನಡೆಸುತ್ತ ಬಂದಿದೆ. ಕೊಡವರ ಭಾವನೆಗೆ ಧಕ್ಕೆಯಾಗುವಂತಹ ಯಾವದೇ ವಿಚಾರದಲ್ಲಿ ನಾವು ಪ್ರಥಮವಾಗಿ ಧ್ವನಿ ಎತ್ತುತ್ತೇವೆ. ಮುಂದೆಯೂ ನಾವು ಕೊಡಗಿನ ಜನರ ಭಾಷೆ, ಸಂಸ್ಕøತಿ ನೆಲ, ಜಲಕ್ಕೆ ಒತ್ತಾಸೆ ನೀಡಿ ಹೋರಾಟ ನಡೆಸುತ್ತೇವೆ. ಹಿರಿಯರು ಪ್ರಮುಖ ಮಹನೀಯರು ಕಟ್ಟಿ ಬೆಳೆಸಿದ ಈ ಸಂಸ್ಥೆಗೆ 76 ವರ್ಷದ ಇತಿಹಾಸ, ಹೆಗ್ಗಳಿಕೆ ಇದೆ. ಇನ್ನು ಮುಂದೆಯೂ ಯುವ ಜನತೆ ಈ ಸಮಾಜವನ್ನು ಉಳಿಸಿ ಬೆಳೆಸಲು ಕೈ ಜೋಡಿಸಬೇಕು. ಏನೇ ಭಿನ್ನಾಭಿಪ್ರಾಯ ಬಂದರೂ ಏಕತೆಯ ಪರಿಹಾರ ಕಲ್ಪಿಸಿಕೊಂಡು ಸಮಾಜದ ಒಳಿತಿಗಾಗಿ ಸಾಮಾಜಿಕ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಕೆಲವರಲ್ಲಿ ಸಮಾಜದ ಬಗ್ಗೆ ಅಭಿಮಾನದ ಶೂನ್ಯತೆ ಭಾವನೆ ಕಂಡು ಬರುತ್ತಿದೆ ಇದನ್ನು ತ್ಯಜಿಸಿ ಸಮಾಜವನ್ನು ಉಳಿಸಿ ಬೆಳೆಸಲು ಪರಸ್ಪರ ಸಹಕರಿಸುವಂತೆ ಮೊಣ್ಣಪ್ಪ ತಿಳಿಸಿದರು.

ಸಭೆಯಲ್ಲಿ ಸಮಾಜದ ಉಳಿವಿಗೆ ಮುಂದೆ ಅನುಸರಿಸಬೇಕಾದ ಕ್ರಮಗಳು, ಕೋವಿ ಹಕ್ಕು ದುರುಪಯೋಗವಾಗದಂತೆ ತಡೆಯುವ ಬಗ್ಗೆ ಸದಸ್ಯರಾದ ಚೆಪ್ಪುಡಿರ ಹ್ಯಾರಿ ದೇವಯ್ಯ, ಬಲ್ಯಮಿದೇರಿರ ಸುಬ್ರಮಣಿ, ಅಜ್ಜಿನಿಕಂಡ ಮಹೇಶ್ ನಾಚಯ್ಯ ಮತ್ತಿತರರು ಮಾತನಾಡಿದರು.

ಸಮಾರಂಭದಲ್ಲಿ ಕೊಡವ ಅರಿವು ವೋಲೆ ಎಂಬ ಕೃತಿ ರಚಿಸಿದ ಬೊವ್ವೇರಿಯಂಡ ಉತ್ತಯ್ಯ ದಂಪತಿ, ರಂಗಭೂಮಿ ಕಲಾವಿದ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಅಡ್ಡಂಡ ಕಾರ್ಯಪ್ಪ ಮತ್ತು ಅನಿತಾ ದಂಪತಿಯನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷ ಇಟ್ಟೀರ ಬಿದ್ದಪ್ಪ , ಉಪಾಧ್ಯಕ್ಷ ಅಜ್ಜಿಕುಟ್ಟಿರ ಮಾದಯ್ಯ, ಜಂಟಿ ಕಾರ್ಯದರ್ಶಿಗಳಾದ ನಂದೇಟಿರ ರಾಜ ಮಾದಪ್ಪ ಹಾಗೂ ಅಪ್ಪುಮಣಿಯಂಡ ತುಳಸಿ ಕಾಳಪ್ಪ, ಕಾನೂನು ಸಲಹೆಗಾರ ವಕೀಲ ಬಲ್ಯಮಾಡ ಮಾದಪ್ಪ , ದೇಶತಕ್ಕರಾದ ಪೆಮ್ಮಯ್ಯ, ಸಮಾಜದ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ , ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಸಮಾಜದ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ ಸಮಾಜದ ವರದಿ ಮಂಡಿಸಿದರು.