ಮಡಿಕೇರಿ, ನ.20: ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ‘ಮಣ್ಣಿನ ಮಗ’ ಎಂದು ಹೇಳಿಕೊಳ್ಳುವದು ಕೇವಲ ಒಂದು ತಂತ್ರ್ರವಷ್ಟೆ ಆಗಿದ್ದು, ಸಾಲಮನ್ನಾ ಎನ್ನುವದು ಒಂದು ‘ಸೂತ್ರ’ವೆಂದು ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವ್ಯಂಗ್ಯವಾಡಿದೆ. ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹಿಳೆÉಯನ್ನು ಅಪಮಾನಿಸಿರುವ ಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸುವದಾಗಿ ಮೋರ್ಚಾದ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣಾ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸದ ಮುಖ್ಯಮಂತ್ರಿಗಳು ನುಡಿದಂತೆ ನಡೆದಿಲ್ಲವೆಂದು ಟೀಕಿಸಿದರು. ತೆನೆಹೊತ್ತ ಮಹಿಳೆಯನ್ನು ಪಕ್ಷದ ಚಿಹ್ನೆಯನ್ನಾಗಿ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯನ್ನು ಅಪಮಾನಿಸಿದ್ದಾರೆ. ಈ ನಡೆ ಮುಖ್ಯಮಂತ್ರಿಯಾದವರಿಗೆ ಶೋಭೆ ತರುವದಿಲ್ಲ. ಪ್ರತಿಭಟನಾನಿರತ ರೈತರನ್ನು ಗೂಂಡಾಗಳು ಎನ್ನುವ ಧಾಟಿಯಲ್ಲಿ ಮಾತನಾಡಿದ್ದು, ಈ ಸಂಬಂಧ ಕ್ಷಮೆಯನ್ನೂ ಯಾಚಿಸದೆ ಉದ್ಧಟತನದಿಂದ ವರ್ತಿಸಿರುವದು ಬೇಸರ ತಂದಿದೆ ಎಂದು ಯಮುನಾ ತಿಳಿಸಿದರು.

ಸಾವಿರಾರು ರೈತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಹೋರಾಟ ನಡೆಸಿದ್ದನ್ನೇ ಮಹಾ ಅಪರಾಧವೆಂದು ಭಾವಿಸಿರುವ ಮುಖ್ಯಮಂತ್ರಿಗಳು ರೈತರ ತಾಳ್ಮೆಯ ಬಗ್ಗೆ ಮಾತನಾಡಿದ್ದಾರೆ. ಬೆಳೆದ ಬೆಳೆಗೆ ಹಣ ದೊರೆಯದೆ ಕಂಗಾಲಾಗಿರುವ ರೈತ ಸಮೂಹದ ತಾಳ್ಮೆಯನ್ನು ಸರಕಾರ ಪರೀಕ್ಷಿಸುತ್ತಿದೆ. ತಾಳ್ಮೆ ರೈತÀರಿಗೆ ಇರಬೆÉೀಕೇ ಅಥವಾ ಇಡೀ ರಾಜ್ಯವನ್ನು ಆಳುವ ಮುಖ್ಯಮಂತ್ರಿಗಳಿಗೆ ಇರಬೇಕೇ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರಕ್ಕಿಂದು ರೈತರ ಆತ್ಮಹತ್ಯೆ ಎನ್ನುವದು ತಮಾಷೆಯ ವಿಷಯವಾಗಿದೆ. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡವರನ್ನು, ಕುಡಿದು ಸತ್ತಿರಬಹುದೆಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಯ ಹಂತದಲ್ಲಿ ಸಾಲ ಮನ್ನಾದ ಭರವಸೆ ನೀಡಲಾಗುತ್ತದೆ, ಆದರೆ ಗೆದ್ದ ನಂತರ ಸಾಲಗಾರ ರೈತರಿಗೆ ಬ್ಯಾಂಕ್ ನೋಟೀಸ್ ನೀಡಲಾಗುತ್ತದೆ ಎಂದು ಯಮುನಾ ಅಸಮಾಧಾನ ವ್ಯಕ್ತಪಡಿಸಿದರು. ರೈತರು ತಮಗೆ ಬರಬೇಕಾದ ಹಣವನ್ನು ಕೇಳಿದರೆ ಸಚಿವ ರೇವಣ್ಣ ಅವರು, ನಾವೇನು ನೋಟ್ ಪ್ರಿಂಟ್ ಮಾಡುತ್ತಿದ್ದೇವೆಯೇ ಎಂದು ಉಡಾಫೆಯ ಮಾತನಾಡುತ್ತಾರೆ, ಇದು ಸರಿಯಾದ ಕ್ರಮವಲ್ಲವೆಂದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸುಮಾ ಸುದೀಪ್ ಮಾತನಾಡಿ, ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆಯನ್ನು ನೀಡುವ ಮೂಲಕ ರೈತಾಪಿ ವರ್ಗಕ್ಕೆ ನ್ಯಾಯ ಒದಗಿಸಿ ಕೊಡಲು ಸರ್ಕಾರ ಮುಂದಾಗ ಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ಬೆಳ್ಯಪ್ಪ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷೆ ಮಿನಾಜ್ ಪ್ರವೀಣ್ ಹಾಗೂ ಸೋಮವಾರಪೇಟೆ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ ಗಣೇಶ್ ಉಪಸ್ಥಿತರಿದ್ದರು.