ಸೋಮವಾರಪೇಟೆ,ನ.19: ಕಳೆದ ಕೆಲ ಸಮಯಗಳಿಂದ ಸೋಮವಾರಪೇಟೆಯಲ್ಲಿ ಅಮಾಯಕರ ಮೇಲೆ ಹಲ್ಲೆ, ದರೋಡೆ ಯತ್ನ, ಕೊಲೆಯತ್ನದಂತಹ ಪ್ರಕರಣಗಳು ನಡೆಯುತ್ತಿದ್ದು, ಇಲ್ಲಿನ ಠಾಣೆಗೆ ದಕ್ಷ ಪೊಲೀಸ್ ಅಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಸಿ.ಕೆ. ಸುಬ್ಬಯ್ಯ ರಸ್ತೆ ಮೂಲಕ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಮಾರ್ಗವಾಗಿ ತಾಲೂಕು ಕಚೇರಿವರೆಗೆ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ತಾಲೂಕು ಕಚೇರಿ ಆವರಣದಲ್ಲಿ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ಸುರೇಶ್ ಶೆಟ್ಟಿ, ಕಳೆದ ಒಂದು ವರ್ಷದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಡದುವ ಘಟನೆಗಳು ನಡೆಯುತ್ತಿದ್ದು, ಅಮಾಯಕರ ಮೇಲೆ ಹಲ್ಲೆ, ಕೊಲೆಯತ್ನಗಳು ಮುಂದುವರೆಯುತ್ತಿವೆ. ಪಟ್ಟಣದ ಕೆಲ ಗೂಂಡಾಗಳು ಹಾಗೂ ನಗರದ ಹೊರವಲಯದ ಗೂಂಡಾಗಳಿಂದ ಇಂತಹ ಕೃತ್ಯ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಸೋಮವಾರಪೇಟೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಲು ತಕ್ಷಣವೇ ದಕ್ಷ ಪೊಲೀಸ್ ಅಧಿಕಾರಿಯನ್ನು ನೇಮಿಸಬೇಕು. ಗೂಂಡಾಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಐ.ಜಿ. ಅವರಿಗೂ ಮನವಿ ಸಲ್ಲಿಸಲಾಗುವದು ಎಂದರು.

ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಟಿ.ಈ. ಸುರೇಶ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ಹೆಚ್ಚು ದೌರ್ಜನ್ಯಗಳು ನಡೆಯುತ್ತಿದ್ದು, ಎಫ್‍ಐಆರ್ ದಾಖಲಾದರೂ ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ದೂರಿದರು.

ಈ ಸಂದರ್ಭ ಜಯಕರ್ನಾಟಕ ಸಂಘಟನೆಯ ಕಾರ್ಯದರ್ಶಿ ರಫೀಕ್, ಪದಾಧಿಕಾರಿಗಳಾದ ದೊರೆ, ಮಿಥುನ್, ರಂಗಸ್ವಾಮಿ, ದಲಿತ ಸಂಘಟನೆಯ ಪ್ರತಾಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಸಂಬಂಧಿತ ಮನವಿ ಪತ್ರವನ್ನು ಶಿರಸ್ತೇದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.