ಗೋಣಿಕೊಪ್ಪಲು.ನ.19 : ಸದಾ ಸುದ್ದಿಯಲ್ಲಿದ್ದ ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳ ಮೂಲಭೂತ ಸಮಸ್ಯೆಗಳು ಗಣನೀಯವಾಗಿ ಇಳಿಮುಖ ಗೊಂಡಿದೆ. ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯಲ್ಲಿ ಆಯೋಜ&divound; Éಗೊಂಡಿದ್ದ ಪ್ರಸ್ತುತ ಸಾಲಿನ ಎರಡನೇ ಅವಧಿಯ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಕ್ರೀಡಾ ವಸತಿ ನಿಲಯದಲ್ಲಿ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಪೋಷಕರು ಪ್ರಶಂಸೆ ವ್ಯಕ್ತಪಡಿಸಿದರು.

ಕಳೆದ ಮೂರು ತಿಂಗಳ ಹಿಂದೆ ಇಲ್ಲಿಯ ಅವ್ಯವಸ್ಥೆಯ ಬಗ್ಗೆ ಮಾಧ್ಯಮದಲ್ಲಿ ಬಿತ್ತರಗೊಂಡಿದ್ದ ಸುದ್ದಿಯನ್ನು ಗಮನಿಸಿದ ನೂತನ ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ನಿಲಯಕ್ಕೆ ಭೇಟಿ ನೀಡಿ ಇಲ್ಲಿಯ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದ್ದರು. ನಂತರ ಮೊದಲ ಪೋಷಕರ ಸಭೆ ಕರೆಯುವ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಚರ್ಚಿಸಿದ್ದರು. ಮೂರು ತಿಂಗಳಿಗೊಮ್ಮೆ ಪೋಷಕರ ಸಭೆ ಕರೆಯುವದಾಗಿ ಭರವಸೆ ನೀಡಿದ್ದರು. ಇದಾದ ನಂತರ ವಸತಿ ನಿಲಯದಲ್ಲಿ ಸಮಸ್ಯೆಗಳು ಇಳಿ ಮುಖಗೊಂಡಿದ್ದವು. ನೂತನ ಅಧ್ಯಕ್ಷರ ಕಾಳಜಿಯಿಂದ ವಿದ್ಯಾರ್ಥಿಗಳ ಭೇಡಿಕೆಗಳನ್ನು ಪೂರೈಸಿದ್ದರು.

ಇತ್ತೀಚೆಗೆ ನಿಲಯದಲ್ಲಿ ಎರಡನೇ ಸಾಲಿನ ಪೋಷಕರ ಸಭೆಯನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುವ ಪ್ರಯತ್ನ ನಡೆಸಿದರು. ಈ ಸಂದರ್ಭ ಸಭೆಯಲ್ಲಿ ಹಲವು ಪೋಷಕರು ಸ್ಥಾಯಿ ಸಮಿತಿ ಅಧ್ಯಕ್ಷರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಿಲಯದಲ್ಲಿರುವ ಮೇಲ್ವಿಚಾರಕರು ಸರಿಯಾಗಿ ಕಾರ್ಯ ನಿರ್ವಹಿಸದ ಹಿನ್ನಲೆಯಲ್ಲಿ ಆದಷ್ಟು ಬೇಗನೆ ಇವರನ್ನು ವರ್ಗಾವಣೆ ಗೊಳಿಸುವಂತೆ ಪೋಷಕರು ಅಧ್ಯಕ್ಷರಿಗೆ ಮನವಿ ಮಾಡಿದರು. ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯಲ್ಲಿ ತಾರತಮ್ಯ ವಿದ್ದು ಸರ್ಕಾರ ಸಾಕಷ್ಟು ಅನುದಾನ ನೀಡಿದರೂ ವಿದ್ಯಾರ್ಥಿಗಳಿಗೆ ನಿಯಮದಂತೆ ಆಹಾರ ವಿತರಣೆಯಲ್ಲಿ ವ್ಯತ್ಯಾಸವಿದೆ. ಇಲ್ಲಿಯ ಟೆಂಡರ್‍ದಾರರನ್ನು ಬದಲಾಯಿಸಿ ಹೊಸಬರನ್ನು ಹಾಗೂ ಅನುಭವಿ ಗಳನ್ನು ನೇಮಿಸುವಂತೆ ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್ ಮನವಿ ಸಲ್ಲಿಸಿದರು. ಪೋಷಕರು ಇದಕ್ಕೆ ಒಪ್ಪಿಗೆ ಸೂಚಿಸಿದರು. ಪೋಷಕರ ಮನವಿಯನ್ನು ಆಲಿಸಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಈಗಾಗಲೇ ವಸತಿ ನಿಲಯದ ಸಮಸ್ಯೆಗಳನ್ನು ಬಹುತೇಕ ಬಗೆ ಹರಿಸಲಾಗಿದೆ. ಈ ಹಿಂದೆ ಇದ್ದಂತಹ ಹಾಕಿ ತರಭೇತುದಾರರಾದ ಬುಟ್ಟಿಯಂಡ ಚಂಗಪ್ಪ ಹಾಗೂ ಕುಪ್ಪಂಡ ಸುಬ್ಬಯ್ಯನವರನ್ನು ವೇತನ ಸಹಿತ ನೇಮಕಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಕ್ರೀಡಾ ಪ್ರತಿಭೆ ಬೆಳೆಯಲು ಅವಕಾಶವಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂರು ದೂರವಾಣಿ ಸಂಪರ್ಕಗಳನ್ನು ನಿಲಯದಲ್ಲಿ ಅಳವಡಿಸಲಾಗಿದೆ. ಪ್ರತಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ದಲ್ಲಿದ್ದೇನೆ. 15 ದಿನಗಳಿಗೊಮ್ಮೆ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಗೆ ಪ್ರಭಾರ ಅಧಿಕಾರಿಯಾಗಿ ನಂದೀಶ್ ನೇಮಕಗೊಂಡಿರುವದರಿಂದ ಸಮಸ್ಯೆಗಳು ಕಡಿಮೆಯಾಗಿವೆ. ರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯ ವಿದ್ಯಾರ್ಥಿಗಳು ಭಾಗವಹಿಸುವ ವಿಶ್ವಾಸವಿದೆ. ಕ್ರೀಡೆಯೊಂದಿಗೆ ಪಠ್ಯಕ್ರಮದಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ನಿಗಾ ವಹಿಸಬೇಕು. ಮುಂದಿನ ಸಾಲಿನ ಕ್ರಿಯಾ ಯೋಜನೆಯಲ್ಲಿ ಇಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಸಾಜಿ ಅಚ್ಚುತ್ತನ್ ಮಾತನಾಡಿ, ಈ ಹಿಂದೆ ನಿಲಯದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದವು. ಇದೀಗ ಸಮಸ್ಯೆ ಕಡಿಮೆಯಾಗಿದೆ. ಹಲವು ವರ್ಷಗಳ ಹಿಂದೆ ಇದ್ದಂತಹ ಸಲಹಾ ಸಮಿತಿ ಮರುನೇಮಕವಾದಲ್ಲಿ ಇಲ್ಲಿಯ ಸಮಸ್ಯೆ ಪರಿಹಾರವಾಗಲಿದೆ. ಈ ನಿಟ್ಟಿನಲ್ಲಿ ಸಲಹಾ ಸಮಿತಿ ರಚಿಸುವಂತೆ ಮನವಿ ಮಾಡಿದರು.

ಯುವ ಜನ ಕ್ರೀಡಾ ಇಲಾಖೆಯ ಜಿಲ್ಲಾ ಹೆಚ್ಚುವರಿ ಸಹಾಯಕ ನಿರ್ದೇಶಕ ನಂದೀಶ್ ಸರ್ವರನ್ನು ಸ್ವಾಗತಿಸಿದರು. ಮೇಲ್ವೀಚಾರಕಿ ಪ್ರೀತಾ ವರದಿ ವಾಚಿಸಿದರು. ಕಾಲೇಜಿನ ಪ್ರಾಂಶುಪಾಲ ಹನ್ರಿತಾ ಸೇರಿದಂತೆ ಹಾಕಿ ತರಬೇತುದಾರರಾದ ಬುಟ್ಟಿಯಂಡ ಚಂಗಪ್ಪ, ಕುಪ್ಪಂಡ ಸುಬ್ಬಯ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

-ಹೆಚ್.ಕೆ.ಜಗದೀಶ್