ಕುಶಾಲನಗರ, ನ. 19: ಕುಶಾಲನಗರದ ಮೈಸೂರು ರಸ್ತೆಯ ಹೆದ್ದಾರಿಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪುಟ್ಟ ಮಗು ಸೇರಿದಂತೆ ಇಬ್ಬರು ಮಹಿಳೆಯರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಮೈಸೂರು ರಸ್ತೆಯ ಟಾಟಾ ಪೆಟ್ರೋಲ್ ಬಂಕ್ ಮುಂಭಾಗ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಈ ಅವಘಡ ನಡೆದಿದೆ. ಕುಶಾಲನಗರದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ಕೊಪ್ಪ ಕಡೆಯಿಂದ ಕುಶಾಲನಗರದೆಡೆಗೆ ಬರುತ್ತಿದ್ದ ದ್ವಿಚಕ್ರ ವಾಹನದ ನಡುವೆ ಅಪಘಾತ ನಡೆದಿದ್ದು
ದ್ವಿಚಕ್ರ ವಾಹನದಲ್ಲಿದ್ದ ಎರಡು ವರ್ಷದ ಮಗು ಮತ್ತು ಇಬ್ಬರು ಮಹಿಳೆಯರು ರಸ್ತೆಗೆ ಎಸೆಯಲ್ಪಟ್ಟಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೈಸೂರು ಮೂಲದ ಆಯುರ್ವೇದ ವೈದ್ಯರಾದ ಕೇಶವ ಭಟ್ ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದರು. ಕೊಪ್ಪ ಕಡೆಯಿಂದ ಕುಶಾಲನಗರಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಗುಮ್ಮನಕೊಲ್ಲಿ ನಿವಾಸಿಗಳಾದ ಮಹಾಲಕ್ಷ್ಮಿ, ಸಹೋದರಿ ಅಶ್ವಿನಿ, ಪುತ್ರ ಧನ್ವಿತ್ ಸಂಚರಿಸುತ್ತಿದ್ದ ಹೋಂಡ ಆಕ್ಟಿವ ಸ್ಯಾಂಟ್ರೋ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ.
ದ್ವಿಚಕ್ರ ವಾಹನ ಏಕಾಏಕಿ ರಸ್ತೆ ಮಧ್ಯಕ್ಕೆ ಬಂದ ಹಿನ್ನೆಲೆಯಲ್ಲಿ ಈ ಅಪಘಾತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ದೃಶ್ಯ ನೆರೆಯ ಕಟ್ಟಡವೊಂದರ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.