ಮಡಿಕೇರಿ, ನ. 19: ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಇಂದು ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವರ್ಷ ಕರ್ನಾಟಕದಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತಕ್ಕೆ 546.21 ಕೋಟಿ ರೂಪಾಯಿ ನೆರವನ್ನು ನೀಡಲು ತೀರ್ಮಾನಿಸ ಲಾಗಿದ್ದು, ಪ್ರಮುಖವಾಗಿ ಕೊಡಗಿನ ದುರಂತದ ಬಗ್ಗೆ ಚರ್ಚಿಸಲಾಯಿತು.ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೃಷಿ ಸಚಿವ ರಾಧ ಮೋಹನ್ ಸಿಂಗ್, ಗೃಹ ಕಾರ್ಯದರ್ಶಿ ರಾಜೀವ್ ಗೂಬಾ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಕೇಂದ್ರ ಉನ್ನತ ತಂಡ ಇತ್ತೀಚೆಗೆ ಕೊಡಗಿಗೆ ಭೇಟಿ ನೀಡಿ, ಆಗಸ್ಟ್ನಲ್ಲಿ ಉಂಟಾದ ಪ್ರಾಕೃತಿಕ ದುರಂತದ ನಷ್ಟದ ಬಗ್ಗೆ ಹಾಗೂ ರಾಜ್ಯದ ಇತರೆಡೆಯ ಅತಿವೃಷ್ಟಿ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣ ನಿಧಿ (ಓಆಖಈ) ಗೆ ರೂ. 546.21 ಕೋಟಿ ಹೆಚ್ಚುವರಿ ಸಹಾಯ ನೀಡಲು ತೀರ್ಮಾನಿಸಲಾಯಿತು.
ಈ ಬಗ್ಗೆ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ‘ಶಕ್ತಿ’ಗೆ ಮಾಹಿತಿ ನೀಡಿ, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರ ಕೊಡಗು ಭೇಟಿ ಹಾಗೂ ಕೇಂದ್ರದಲ್ಲಿರುವ ಕರ್ನಾಟಕದ ಜನಪ್ರತಿನಿಧಿಗಳ ಪ್ರಯತ್ನದಿಂದ ಅನುದಾನ ಲಭಿ ಸುತ್ತಿದೆ. ಈ ಬಗ್ಗೆ ಆರಂಭದಿಂದಲೂ ತಾನು ಕೇಂದ್ರಕ್ಕೆ ಮನವರಿಕೆ ಮಾಡಿದ್ದು, ಇದೀಗ ನೆರವಿನ ಮೊತ್ತದಲ್ಲಿ ಬಹುಪಾಲು ಕೊಡಗಿಗೆ ವಿನಿಯೋಗವಾಗುತ್ತದೆ ಎಂದು ವಿವರಿಸಿದರು.
ಕೇಂದ್ರದ ನೆರವನ್ನು ಸ್ವಾಗತಿಸಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್,
(ಮೊದಲ ಪುಟದಿಂದ) ಗೃಹ ಸಚಿವ ರಾಜ್ನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್, ಕೇಂದ್ರ ಸಚಿವ ಸದಾನಂದ ಗೌಡ, ಸಂಸದ ಪ್ರತಾಪ್ ಸಿಂಹ, ಪಕ್ಷದ ಪ್ರಮುಖ ಸಂತೋಷ್ ಜಿ., ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇವರುಗಳ ಪ್ರಯತ್ನ ಈ ತೀರ್ಮಾನದ ಹಿಂದಿದೆ ಎಂದು ಪ್ರಶಂಶಿಸಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕರು ಕೂಡ ಒತ್ತಡ ಹೇರಿದ್ದಾರೆ ಎಂದು ಸ್ಮರಿಸಿದ್ದಾರೆ.